

ನವದೆಹಲಿ: ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ವಿವಾಹವನ್ನು ಮುರಿದುಬಿದ್ದಿದೆ ಎಂದು ಪರಿಗಣಿಸಬಾರದು. ವೈವಾಹಿಕ ಸಂಬಂಧವನ್ನು ಮುರಿಯಲು ಇಬ್ಬರಲ್ಲಿ ಯಾರು ಕಾರಣ ಎಂಬುದನ್ನು ನ್ಯಾಯಾಲಯಗಳು ಕಂಡುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲಾ ಬಾಗ್ಚಿ ಅವರಿದ್ದ ಪೀಠವು ನವೆಂಬರ್ 14 ರಂದು ಆದೇಶ ಹೊರಡಿಸಿದ್ದು, ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಗೆ ಅಸ್ತು ಎನ್ನುವ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದೆ ಮತ್ತು ಈ ವಿಷಯವನ್ನು ಹೊಸದಾಗಿ ಪರಿಗಣಿಸಲು ಹೈಕೋರ್ಟ್ ಪೀಠಕ್ಕೆ ನಿರ್ದೇಶನ ನೀಡಿದೆ.
'ಇತ್ತೀಚಿನ ದಿನಗಳಲ್ಲಿ, ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದರೆ ವೈವಾಹಿಕ ಸಂಬಂಧ ಮುರಿದು ಹೊಗಿದೆ ಎಂದು ಭಾವಿಸಲಾಗುತ್ತಿದೆ. ಆದಾಗ್ಯೂ, ಅಂತಹ ತೀರ್ಮಾನಕ್ಕೆ ಬರುವ ಮೊದಲು, ವೈವಾಹಿಕ ಸಂಬಂಧವನ್ನು ಮುರಿದು ಇನ್ನೊಬ್ಬರು ಪ್ರತ್ಯೇಕವಾಗಿ ವಾಸಿಸುವಂತೆ ಮಾಡುವಲ್ಲಿ ಇಬ್ಬರಲ್ಲಿ ಯಾರು ಕಾರಣ ಎಂಬುದನ್ನು ನಿರ್ಧರಿಸುವುದು ಕುಟುಂಬ ನ್ಯಾಯಾಲಯ ಅಥವಾ ಹೈಕೋರ್ಟ್‌ನ ಕಡ್ಡಾಯ ಜವಾಬ್ದಾರಿಯಾಗಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉದ್ದೇಶಪೂರ್ವಕವಾಗಿ ತೊರೆದುಹೋದ, ಸಹಬಾಳ್ವೆ ನಡೆಸಲು ನಿರಾಕರಿಸುವುದು ಮತ್ತು ಇನ್ನೊಬ್ಬ ಸಂಗಾತಿಯನ್ನು ನೋಡಿಕೊಳ್ಳುವುದಕ್ಕೆ ಬಲವಾದ ಪುರಾವೆಗಳು ಬೇಕಾಗುತ್ತವೆ. ಪುರಾವೆಗಳು ಇಲ್ಲದೆಯೇ, ಅವರಿಬ್ಬರ ನಡುವಿನ ವೈವಾಹಿಕ ಸಂಬಂಧ ಸರಿಪಡಿಸಲು ಆಗದ ಹಂತಕ್ಕೆ ತಲುಪಿದೆ ಎಂದು ನ್ಯಾಯಾಲಯಗಳು ಘೋಷಿಸಿಬಿಟ್ಟರೆ, ವಿಶೇಷವಾಗಿ ಮಕ್ಕಳ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ ಎಂದು ಕೋರ್ಟ್ ಹೇಳಿದೆ.
'ಇಂತಹ ತೀರ್ಮಾನಕ್ಕೆ ಬರುವುದು ನ್ಯಾಯಾಲಯಗಳನ್ನು ದಾಖಲೆಯಲ್ಲಿರುವ ಸಂಪೂರ್ಣ ಸಾಕ್ಷ್ಯಗಳನ್ನು ಆಳವಾಗಿ ವಿಶ್ಲೇಷಿಸುವ, ಸಾಮಾಜಿಕ ಸಂದರ್ಭಗಳು ಮತ್ತು ಪಕ್ಷಗಳ ಹಿನ್ನೆಲೆ ಮತ್ತು ಇತರ ಹಲವಾರು ಅಂಶಗಳನ್ನು ಪರಿಗಣಿಸುವ ಗುರುತರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ... ಈ ಪ್ರಕರಣದಲ್ಲಿ ಹೈಕೋರ್ಟ್ ಅಂತಹ ಯಾವುದೇ ಕಸರತ್ತನ್ನು ಕೈಗೊಂಡಿಲ್ಲ ಎಂಬುದು ನಮಗೆ ಕಂಡುಬರುತ್ತಿದೆ' ಎಂದು ಪೀಠ ಹೇಳಿದೆ.
'ಕ್ರೌರ್ಯ'ದ ಆಧಾರದ ಮೇಲೆ ವಿಚ್ಛೇದನಕ್ಕೆ ತನ್ನ ಪತಿಯ ಅರ್ಜಿಯನ್ನು ಅನುಮತಿಸಿದ ಉತ್ತರಾಖಂಡ ಹೈಕೋರ್ಟ್‌ನ ಆದೇಶದ ವಿರುದ್ಧ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತನ್ನ ಹೆಂಡತಿಯಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ ಎಂಬ ಪತಿಯ ಹೇಳಿಕೆಯನ್ನು ನ್ಯಾಯಾಲಯವು ಒಪ್ಪಿಕೊಂಡಿತ್ತು.
ಈ ದಂಪತಿ 2009ರಲ್ಲಿ ವಿವಾಹವಾದರು ಮತ್ತು ಅವರಿಗೆ ಒಬ್ಬ ಮಗನಿದ್ದಾನೆ. ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿದ್ದರಿಂದ ಅವರು ಪ್ರತ್ಯೇಕವಾಗಿ ವಾಸಿಸುವಂತಾಯಿತು. ಅಲ್ಲದೆ, ಮಗು ಮೊದಲಿನಿಂದಲೂ ಆಕೆಯ ಬಳಿಯಲ್ಲೇ ಇರುವುದರಿಂದ ಆ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
Advertisement