
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಯಾವ ಷರತ್ತುಗಳ ಅಡಿಯಲ್ಲಿ ಬಂಧಿಸಲಾಗುವುದು ಎಂಬುದರ ಕುರಿತು ಗೃಹ ವ್ಯವಹಾರಗಳ ಸಚಿವಾಲಯ ಬೆಲ್ಜಿಯಂ ಸರ್ಕಾರಕ್ಕೆ ಪತ್ರ ಬರೆದಿದೆ.
ಹೌದು.. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬಹುಕೋಟಿ ರೂಗಳನ್ನು ಸಾಲವಾಗಿ ಪಡೆದು ಅದನ್ನು ಮರುಪಾವತಿ ಮಾಡದೇ ವಂಚನೆ ಮಾಡಿದ ಪ್ರಕರಣದಡಿಯಲ್ಲಿ ಪ್ರಮುಖ ಆರೋಪಿಯಾಗಿರುವ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ಬೆಲ್ಜಿಯಂ ಸರ್ಕಾರಕ್ಕೆ ಪತ್ರ ಬರೆದಿರುವ ಭಾರತ ಸರ್ಕಾರ, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಯಾವ ಷರತ್ತುಗಳ ಅಡಿಯಲ್ಲಿ ಬಂಧಿಸಲಾಗುವುದು ಎಂಬುದರ ಕುರಿತು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಬೆಲ್ಜಿಯಂನ ನ್ಯಾಯ ಸಚಿವಾಲಯಕ್ಕೆ ಪತ್ರವೊಂದನ್ನು ಕಳುಹಿಸಿದೆ.
ಹಸ್ತಾಂತರ ಶಿಷ್ಟಾಚಾರಗಳನ್ನು ಪಾಲಿಸುವಾಗ ಚೋಕ್ಸಿಯ ಹಕ್ಕುಗಳನ್ನು ರಕ್ಷಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಈ ಭರವಸೆಗಳನ್ನು ರೂಪಿಸಲಾಗಿದೆ.
ಪತ್ರದಲ್ಲೇನಿದೆ?
ಸೆಪ್ಟೆಂಬರ್ 4, 2025 ರ ಪತ್ರದಲ್ಲಿ, ಗೃಹ ಸಚಿವಾಲಯವು "ಚೋಕ್ಸಿಯನ್ನು ಹಸ್ತಾಂತರಿಸಿದರೆ, ಮುಂಬೈನ ಆರ್ಥರ್ ರಸ್ತೆ ಜೈಲು ಸಂಕೀರ್ಣದ ಬ್ಯಾರಕ್ ಸಂಖ್ಯೆ 12 ರಲ್ಲಿ ಬಂಧಿಸಲಾಗುವುದು" ಎಂದು ಹೇಳಿದೆ. ಮೆಹುಲ್ ಚೋಕ್ಸಿ ತಪ್ಪಿತಸ್ಥನೆಂದು ಸಾಬೀತಾದರೆ, ಅವರ ಬಂಧನದ ಅವಧಿಯಲ್ಲಿ ಕನಿಷ್ಠ 3 ಚದರ ಮೀಟರ್ ವೈಯಕ್ತಿಕ ಸ್ಥಳವನ್ನು (ಪೀಠೋಪಕರಣಗಳನ್ನು ಹೊರತುಪಡಿಸಿ) ಪಡೆಯುವ ಸೆಲ್‌ನಲ್ಲಿ ಇರಿಸಲಾಗುವುದು" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅವರನ್ನು ಇರಿಸಲಾಗುವ ಬಂಧನ ಕೋಣೆಯಲ್ಲಿ ಶುದ್ಧವಾದ ದಪ್ಪ ಹತ್ತಿ ಚಾಪೆ, ದಿಂಬು, ಬೆಡ್‌ಶೀಟ್ ಮತ್ತು ಕಂಬಳಿ ಒದಗಿಸುವ ಅವಕಾಶವಿದೆ. ಆದಾಗ್ಯೂ, ವೈದ್ಯಕೀಯ ಆಧಾರದ ಮೇಲೆ ಲೋಹದ ಚೌಕಟ್ಟು/ಮರದ ಹಾಸಿಗೆಯನ್ನು ಒದಗಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೆನರಾ ಬ್ಯಾಂಕ್ ಸಮೂಹದಿಂದ ಸಾಲ ಪಡೆದು ಸುಮಾರು 55 ಕೋಟಿ ರು. ವಂಚಿಸಿದ ಪ್ರಕರಣದಲ್ಲಿ ವಜ್ರೋದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಮುಂಬಯಿ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿದೆ. 13,500 ಕೋಟಿ ರೂಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಹುಲ್ ಚೋಕ್ಸಿ ಭಾರತಕ್ಕೆ ಬೇಕಾಗಿದ್ದಾರೆ.
ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಅವರು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ (ಪಿಎನ್‌ಬಿ) 13,500 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ನಕಲಿ ಪತ್ರಗಳನ್ನು ಬಳಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತದಲ್ಲಿ ಬೇಕಾಗಿದ್ದ ಮೆಹುಲ್ ಚೋಕ್ಸಿ ತನ್ನ ಪತ್ನಿ ಪ್ರೀತಿ ಜೊತೆಗೆ ಬೆಲ್ಜಿಯಂನಲ್ಲಿ ವಾಸಿಸುತ್ತಿದ್ದರು. ಪ್ರೀತಿ ಅವರು ಬೆಲ್ಜಿಯಂ ಪ್ರಜೆ ಎಂದು ತಿಳಿದುಬಂದಿದೆ.
ಸಿಬಿಐ ಕಳುಹಿಸಿದ ಗಡೀಪಾರು ವಿನಂತಿಯ ಆಧಾರದ ಮೇಲೆ ಎಪ್ರಿಲ್‌ನಲ್ಲಿ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿತ್ತು. ಕಳೆದ ತಿಂಗಳು, ಬೆಲ್ಜಿಯಂನ ಮೇಲ್ಮನವಿ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಚೋಕ್ಸಿ ಹಸ್ತಾಂತರದ ವಿಚಾರಣೆಯನ್ನು ಸೆಪ್ಟೆಂಬರ್ ಎರಡನೇ ವಾರಕ್ಕೆ ನಿಗದಿಪಡಿಸಲಾಗಿದೆ.
Advertisement