
ನವದೆಹಲಿ: ಗಾಜಾದಲ್ಲಿನ ಯುದ್ಧದಲ್ಲಿ ಇಸ್ರೇಲ್ 64,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿದೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂಬ ಆರೋಪದ ನಡುವೆ ಸೋಮವಾರ ಇಸ್ರೇಲ್‌ನೊಂದಿಗೆ ಭಾರತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ವಿರೋಧ ಪಕ್ಷಗಳು ಟೀಕಿಸಿವೆ.
ಇಸ್ರೇಲ್ ವಿತ್ತ ಸಚಿವ ಬೆಜಲೆಲ್ ಸ್ಮೊಟ್ರಿಚ್ ಅವರೊಂದಿಗೆ ಕೇಂದ್ಲ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹಿ ಹಾಕಿರುವ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು "ಹೇಯ" ಎಂದು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಓವೈಸಿ, ಇಸ್ರೇಲ್ ಜನಾಂಗೀಯ ಹತ್ಯೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಮೋದಿ ಸರ್ಕಾರ ಇಸ್ರೇಲ್‌ನೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದು ಖಂಡನೀಯ ಎಂದಿದ್ದಾರೆ.
ನಿರ್ಮಲಾ ಸೀತಾರಾಮನ್ ಪಕ್ಕ ಕುಳಿತಿರುವ ವ್ಯಕ್ತಿ ವಿರುದ್ಧದ ಬಂಧನ ವಾರೆಂಟ್ ಅರ್ಜಿ ವಿಚಾರಣೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಬಾಕಿಯಿದೆ. ನರಹಂತಕ ಸರ್ಕಾರವನ್ನು ಬೆಂಬಲಿಸುವುದು ರಾಷ್ಟ್ರೀಯ ಹಿತಾಸಕ್ತಿಯಲ್ಲ ಎಂದು ಕಿಡಿಕಾರಿದ್ದಾರೆ.
ಬೆಜಲೆಲ್ ಸ್ಮೊಟ್ರಿಚ್ ಭಾರತ ಭೇಟಿಯನ್ನು ಖಂಡಿಸಿರುವ ಸಿಪಿಐ(ಎಂ) ಗಾಜಾದಲ್ಲಿ ಪ್ರತಿದಿನ ಸಾಮೂಹಿಕ ಹತ್ಯೆ ನಡೆಯುತ್ತಿರುವಾಗ ಆತನಿಗೆ ಸರ್ಕಾರ ಆತಿಥ್ಯ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದೆ.
Advertisement