
ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳ ಭೇಟಿ ತಾಯ್ನಾಡಿನಲ್ಲಿರುವಂತಹ ಭಾವನೆ ಮೂಡಿಸಿತ್ತು ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಹೇಳಿದ್ದು, ಈ ಹೇಳಿಕೆ ವಿವಾದ ಸೃಷ್ಟಿಸಿದೆ.
ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಯಾಮ್ ಪಿತ್ರೋಡಾ ಅವರು ಭಾರತದ ವಿದೇಶಾಂಗ ನೀತಿ ಮತ್ತು ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳ ಕುರಿತು ಮಾತನಾಡಿದ್ದು, ಅವರ ಹೇಳಿಕೆಗಳು ವಿವಾದ ಹುಟ್ಟುಹಾಕಿದೆ.
ಸಂದರ್ಶನದಲ್ಲಿ ಮಾತನಾಡಿರುವ ಸ್ಯಾಮ್ ಪಿತ್ರೋಡಾ ಅವರು, ಪ್ರಾದೇಶಿಕ ರಾಜತಾಂತ್ರಿಕತೆಗೆ ಆದ್ಯತೆ ನೀಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಇದೇ ವೇಳೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಂತಹ ದೇಶಗಳಿಗೆ ಭೇಟಿ ನೀಡಿದ್ದೆ. ಈ ವೇಳೆ ನನಗೆ ನನ್ನ ತಾಯ್ನಾಡಿನಲ್ಲೇ ಇದ್ದೇನೆಂಬ ಭಾವನೆ ಮೂಡಿಸಿತ್ತು ಎಂದು ಹೇಳಿದ್ದಾರೆ.
ನಮ್ಮ ವಿದೇಶಾಂಗ ನೀತಿಯು ಮೊದಲು ನಮ್ಮ ನೆರೆಹೊರೆ ರಾಷ್ಟ್ರಗಳಿಗೆ ಪ್ರಾಮುಖ್ಯತೆ ನೀಡಬೇಕು. ನಮ್ಮ ನೆರೆಹೊರೆ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಸುಧಾರಿಸಬಹುದೇ? ಎಂಬುದನ್ನು ಚಿಂತಿಸಬೇಕು. ನಾನು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಹೋಗಿದ್ದೇನೆ, ವಿದೇಶದಲ್ಲಿದ್ದರೂ ನನ್ನ ದೇಶದಲ್ಲೇ ಇದ್ದೇನೆಂಬ ಭಾವನೆ ಮೂಡಿತ್ತು ಎಂದು ತಿಳಿಸಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ ಈ ಹೇಳಿಕೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರವಾಗಿ ಟೀಕೆ ಮಾಡಿದ್ದು, ಈ ಹೇಳಿಕೆ ಪಾಕಿಸ್ತಾನದ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ಹೊಂದಿರುವುದನ್ನು ಸಾಬೀತುಪಡಿಸುತ್ತಿದೆ ಎಂದು ಕಿಡಿಕಾರಿದೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿಯವರ ನೀಲಿ ಕಣ್ಣಿನ ಹುಡುಗ ಮತ್ತು ಕಾಂಗ್ರೆಸ್ ಸಾಗರೋತ್ತರ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ಪಾಕಿಸ್ತಾನದಲ್ಲಿ ನಾನು ನನ್ನ ಮನೆಯಲ್ಲಿದ್ದೇನೆಂಬ ಭಾವನೆ ಮೂಡಿಸಿತು ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ 26/11ರ ದಾಳಿಯ ನಂತರವೂ ಯುಪಿಎ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ತರಿಸಿಲ್ಲ ಎಂದು ಕಿಡಿಕಾರಿದ್ದಾರೆ.
Advertisement