

ಭಾರತ ಧ್ವಜ ಹೊಂದಿರುವ ಗ್ರೀನ್ ಆಶಾ ನೌಕೆ ಹಾರ್ಮುಜ್ ಜಲಸಂಧಿ ಯಶಸ್ವಿಯಾಗಿ ದಾಟಿದೆ ಎಂದು ಅಧಿಕೃತ ಮೂಲಗಳು ಇಂದು ಸೋಮವಾರ ANI ಸುದ್ದಿಸಂಸ್ಥೆಗೆ ತಿಳಿಸಿವೆ. ಫೆಬ್ರವರಿ 28ರಂದು ಇರಾನ್ ವಿರುದ್ಧ ಇಸ್ರೇಲ್-ಅಮೆರಿಕ ಯುದ್ಧ ಆರಂಭವಾದ ನಂತರ ಈ ಮಾರ್ಗವನ್ನು ದಾಟಿದ ಎಂಟನೇ ಎಲ್ ಪಿಜಿ ಸಾಗಣೆ ನೌಕೆ ಇದಾಗಿದೆ.
ಇದಕ್ಕೂ ಮೊದಲು, ಗ್ರೀನ್ ಸಾನ್ವಿ ಎಂಬ ಮತ್ತೊಂದು ಭಾರತ ಧ್ವಜ ಹೊಂದಿರುವ ದೊಡ್ಡ ಇಂಧನ ಹೊತ್ತ ನೌಕೆ ಕಳೆದ ಶುಕ್ರವಾರ ರಾತ್ರಿ ಸುಮಾರು 46,650 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಿಸುತ್ತಾ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿ ದಾಟಿತ್ತು.
ಮಾರ್ಚ್ 28ರಂದು, 47,000 ಮೆಟ್ರಿಕ್ ಟನ್ ಎಲ್ ಪಿಜಿ ಸರಕು ಗುಜರಾತಿನ ಜಾಮ್ನಗರದ ವಡಿನಾರ್ ಟರ್ಮಿನಲ್ (DPA ಕಂದ್ಲಾ) ತಲುಪಿತ್ತು. ಎಂಟಿ ಜಾಗ್ ವಸಂತ್ ನೌಕೆ ತನ್ನ ಸರಕುಗಳನ್ನು ಸಮುದ್ರದಲ್ಲಿಯೇ ಮತ್ತೊಂದು ನೌಕೆಗೆ ವರ್ಗಾಯಿಸುವ ಹಡಗಿನಿಂದ ಹಡಗಿಗೆ (STS) ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.
ಪ್ರದೇಶದಲ್ಲಿ ಭದ್ರತಾ ಆತಂಕಗಳ ನಡುವೆಯೂ ವ್ಯಾಪಾರ ನೌಕೆಗಳಿಗೆ ನೆರವಾಗಲು ಭಾರತೀಯ ನೌಕಾಪಡೆಯ ಯುದ್ಧನೌಕೆಗಳನ್ನು ಸಿದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಉಂಟಾದ ಅಡಚಣೆಗಳ ನಡುವೆಯೂ, ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ನೌಕೆಗಳ ಸುರಕ್ಷಿತ ಸಂಚಾರಕ್ಕಾಗಿ ಕೇಂದ್ರ ಸರ್ಕಾರ ಇರಾನ್ ಅಧಿಕಾರಿಗಳೊಂದಿಗೆ ನಿರಂತರ ಚರ್ಚೆ ನಡೆಸುತ್ತಿದೆ.
ನೌಕಾಪಡೆ ಸಚಿವಾಲಯದ ಪ್ರಕಾರ, ಪ್ರಸ್ತುತ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಸುಮಾರು 485 ನಾವಿಕರೊಂದಿಗೆ 18 ಭಾರತೀಯ ನೌಕೆಗಳಿವೆ. ಎಲ್ಲಾ ನೌಕೆಗಳು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ಅವರ ಮೇಲೆ ನಿಕಟವಾಗಿ ನಿಗಾವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂದರುಗಳು, ನೌಕೆ ಮತ್ತು ಜಲಮಾರ್ಗಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಕೇಶ್ ಮಂಗಲ್ ಅವರು, ವಿದೇಶಾಂಗ ಸಚಿವಾಲಯ, ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಕಾಪಾಡಲಾಗುತ್ತಿದೆ ಎಂದು ಹೇಳಿದರು.
ಇದುವರೆಗೆ 964ಕ್ಕೂ ಹೆಚ್ಚು ನಾವಿಕರನ್ನು ಭಾರತಕ್ಕೆ ವಾಪಸ್ ಕರೆತರಲಾಗಿದೆ. ದೇಶದ ಎಲ್ಲಾ ಬಂದರುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸುಮಾರು 5.98 ಲಕ್ಷ ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement