

ರಾಂಚಿ: ಜಾರ್ಖಂಡ್‌ನ ರಾಂಚಿ ಜಿಲ್ಲೆಯಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಹೊಡೆದು ಕೊಂದ ಆರೋಪದ ಮೇಲೆ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕಿದಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಹಾರ್ತು ಗ್ರಾಮದಲ್ಲಿ ಮಾರ್ಚ್ 21ರಂದು ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ತಂದೆ ಮಾರ್ಚ್ 22ರಂದು ಈ ಸಂಬಂಧ ದೂರು ದಾಖಲಿಸಿದ್ದರು.
ಸಿಕಿದಾರಿ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಬರುಣ್ ಕುಮಾರ್, ಅಪರಾಧವನ್ನು ಒಪ್ಪಿಕೊಂಡ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಮೃತನು ತನ್ನ 14 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾರೆ. ಮಗಳು ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದಾಗ ಅದರಿಂದ ಕೋಪಗೊಂಡು ಕೋಲಿನಿಂದ ಹೊಡೆದು ಕೊಂದಿದ್ದಾಗಿ ಆರೋಪಿ ತಿಳಿಸಿದ್ದಾರೆ.
ಕೊಲೆಗೆ ಬಳಸಲಾದ ಕೋಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾನೂನು ಕ್ರಮಗಳ ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement