

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಸಮೀಪದ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಾಗಿ ಒಂದು ವರ್ಷ ಕಳೆದರೂ, ಅದರ ನೆನಪು ಮಾತ್ರ ಇನ್ನೂ ಮಾಸಿಲ್ಲ.
ಈ ಕ್ರೂರ ದಾಳಿಯ ಮೊದಲ ವರ್ಷದ ಸಂದರ್ಭದಲ್ಲಿ ಭಾರತೀಯ ಸೇನೆ ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಸೇನೆ, ಭಾರತ ಯಾವುದನ್ೂ ಮರೆಯುವುದಿಲ್ಲ ಅಥವಾ ಉತ್ತರಿಸದೆ ಬಿಡುವುದಿಲ್ಲ ಎಂದು ಸೇನೆ ಎಚ್ಚರಿಕೆ ನೀಡಿದೆ.
ಕೆಲವು ಗೆರೆಗಳನ್ನು ಎಂದಿಗೂ ದಾಟಬಾರದು. ಭಾರತ ಇದನ್ನು ಮರೆಯುವುದಿಲ್ಲ, ದೇಶದ ಮೇಲೆ, ಅಮಾಯಕ ಜನರ ಮೇಲೆ ದಾಳಿ ಮಾಡಿದರೆ ಭಾರತ ಮೌನವಾಗಿರುವುದಿಲ್ಲ, ತಕ್ಕ ಉತ್ತರ ನೀಡುತ್ತದೆ. ಮಾನವೀಯತೆಯ ಮಿತಿಗಳನ್ನು ಯಾರಾದರೂ ದಾಟಿದಾಗ ನ್ಯಾಯ ಖಂಡಿತವಾಗಿಯೂ ನಡೆಯುತ್ತದೆ, ರಾಷ್ಟ್ರ ಒಗ್ಗಟ್ಟಿನಿಂದ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಎಂಬ ಸುಂದರ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಸಂಭ್ರಮದಲ್ಲಿದ್ದರು. ಪ್ರವಾಸಿಗರು ತೆರೆದ ಕಣಿವೆಯಲ್ಲಿ ಆನಂದಿಸುತ್ತಿದ್ದಾಗ ಇದ್ದಕ್ಕಿದ್ದಂತೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಆ ಪ್ರದೇಶಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದರು.
ಈ ವೇಳೆ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ನಡೆಸಿದ ಉಗ್ರರು, ಹಿಂದೂಗಳನ್ನು ಹುಡುಕಿ ಹುಡುಕಿ ಹತ್ಯೆಗೈದರು. ಈ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಲವರು ಗಾಯಗೊಂಡರು. ಕಣ್ಣೆದುರೇ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತು. ಹೆಣ್ಣೊಬ್ಬಳು ತನ್ನ ಪತಿಯ ಮೃತದೇಹದ ಮುಂದೆ ಕುಳಿತು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಅಮಾಯಕ ಜೀವಗಳನ್ನು ಬಲಿ ಪಡೆದ ಉಗ್ರರ ಈ ಕೃತ್ಯಕ್ಕೆ ಭಾರತ ಮೌನವಾಗಿರಲಿಲ್ಲ. ದಾಳಿ ನಡೆದ ಕೇವಲ 15 ದಿನಗಳಲ್ಲಿ, ಅಂದರೆ ಮೇ 7ರಂದು ಭಾರತೀಯ ವಾಯುಪಡೆ ಮತ್ತು ವಿಶೇಷ ಪಡೆಗಳು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿತ್ತು. ಇದರ ಗುರಿ ಲಷ್ಕರ್-ಎ-ತೊಯ್ಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಹುಟ್ಟಡಗಿಸುವುದಾಗಿತ್ತು.
ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ಒಳಗಿರುವ ಉಗ್ರರ ಒಂಬತ್ತು ಪ್ರಮುಖ ಅಡಗುತಾಣಗಳನ್ನು ಧೂಳೀಪಟ ಮಾಡಿದವು. ಲಾಹೋರ್ ಸಮೀಪದ 200 ಎಕರೆ ವಿಸ್ತೀರ್ಣದ ಲಷ್ಕರ್ ಕೇಂದ್ರ ಕಚೇರಿ ಮುರಿಡ್ಕೆ ಅಕ್ಷರಶಃ ಸ್ಮಶಾನವಾಯಿತು.
ಜೈಷ್-ಇ-ಮೊಹಮ್ಮದ್‌ನ ಭದ್ರಕೋಟೆಯಾಗಿದ್ದ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಕ್ಯಾಂಪಸ್ ಅನ್ನು ಭಾರತೀಯ ಪಡೆಗಳು ಗುರಿಯಾಗಿಸಿಕೊಂಡವು. ಈ ದಾಳಿಯಲ್ಲಿ ಮಸೂದ್ ಅಜರ್ ಕೇವಲ ತನ್ನ ನೆಲೆಗಳನ್ನಷ್ಟೇ ಅಲ್ಲ, ತನ್ನ ಕುಟುಂಬದ 10 ಸದಸ್ಯರನ್ನೂ ಕಳೆದುಕೊಂಡಿದ್ದರು ಪಾಕ್ ಮಾಧ್ಯಮಗಳೇ ಒಪ್ಪಿಕೊಂಡಿದ್ದವು.
Advertisement