ಕಲಬೆರಕೆ ಮಸಾಲೆ ಪದಾರ್ಥಗಳ ಗುರುತಿಸುವುದು ಹೇಗೆ? ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ ಪೊಲೀಸ್ ಕಮಿಷನರ್, Video

ಪ್ರಾತ್ಯಕ್ಷಿಕೆ ವೇಳೆ ಶುದ್ಧ ಹಾಗೂ ಕಲಬೆರಕೆ ಮಾಡಿರುವ ಲವಂಗ, ಶಾಹಿಜೀರಾ ಮತ್ತು ಸೋಂಪು ಕಾಳುಗಳನ್ನು ಪ್ರತ್ಯೇಕ ಪಾರದರ್ಶಕ ಗ್ಲಾಸ್‌ಗಳಲ್ಲಿ ನೀರು ತುಂಬಿ ಹಾಕಿ ಪರೀಕ್ಷಿಸಲಾಯಿತು.
VC Sajjanar Demonstrates How to Identify Adulterated Spices
ಕಲಬೆರಕೆ ಮಸಾಲೆ ಪದಾರ್ಥಗಳ ತೋರಿಸಿದ ಪೊಲೀಸ್ ಕಮಿಷನರ್
Updated on

ಹೈದರಾಬಾದ್: ದಿನನಿತ್ಯದ ಅಡುಗೆಯಲ್ಲಿ ಬಳಸುವ ಮಸಾಲೆಗಳಲ್ಲಿ ಕಲಬೆರಕೆ ಇದೆಯೇ ಎಂಬುದನ್ನು ಸರಳ ವಿಧಾನದಲ್ಲಿ ಪತ್ತೆಹಚ್ಚುವುದು ಹೇಗೆ ಎಂಬುದನ್ನು ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾರೆ.

ಹೌದು.. ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳೂ ಕಲಬೆರೆಕೆಯಾಗುತ್ತಿದ್ದು, ಇದೇ ವಿಚಾರವಾಗಿ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಜನರಿಗೆ ಪ್ರಾತ್ಯಕ್ಷಿಕೆ ಮೂಲಕ ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ ಇದೆಯೇ ಎಂಬುದನ್ನು ಸರಳ ವಿಧಾನದಲ್ಲಿ ಪತ್ತೆಹಚ್ಚುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟರು.

ಅಲ್ಲದೆ ಮಸಾಲೆಗಳ ಗುಣಮಟ್ಟದ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಪ್ರಾತ್ಯಕ್ಷಿಕೆ ವೇಳೆ ಸಜ್ಜನರ್ ಅವರು ಶುದ್ಧ ಹಾಗೂ ಕಲಬೆರಕೆ ಮಾಡಿರುವ ಲವಂಗ, ಶಾಹಿಜೀರಾ ಮತ್ತು ಸೋಂಪು ಕಾಳುಗಳನ್ನು ಪ್ರತ್ಯೇಕ ಪಾರದರ್ಶಕ ಗ್ಲಾಸ್‌ಗಳಲ್ಲಿ ನೀರು ತುಂಬಿ ಹಾಕಿ ಪರೀಕ್ಷಿಸಿದರು. ರಾಸಾಯನಿಕ ಲೇಪನ ಮಾಡಿರುವ ಕಲಬೆರಕೆ ಮಸಾಲೆಗಳನ್ನು ಹಾಕಿದ ನೀರಿನ ಬಣ್ಣ ಬಹುತೇಕ ತಕ್ಷಣವೇ ಬದಲಾಗಿತ್ತು. ಆದರೆ ಶುದ್ಧ ಮಸಾಲೆಗಳನ್ನು ಹಾಕಿದ ನೀರಿನ ಬಣ್ಣದಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.

ನೈಜ ಲವಂಗ ಹಾಗೂ ಕಾಳುಗಳು ಸಾಮಾನ್ಯವಾಗಿ ಒರಟಾದ ಮತ್ತು ಸಹಜವಾದ ಸ್ಪರ್ಶ ಹೊಂದಿರುತ್ತವೆ. ಆದರೆ ರಾಸಾಯನಿಕ ಲೇಪನ ಮಾಡಿರುವ ಕಲಬೆರಕೆ ಮಸಾಲೆಗಳು ಅಸ್ವಾಭಾವಿಕವಾಗಿ ನಯವಾಗಿರುತ್ತವೆ ಎಂದು ಸಜ್ಜನರ್ ವಿವರಿಸಿದರು.

ಸಾಮಾನ್ಯವಾಗಿ ಬಳಕೆಯಾಗುವ ಮಸಾಲೆಗಳಲ್ಲಿ ಕೃತಕ ಬಣ್ಣಗಳು ಹಾಗೂ ಇತರ ರಾಸಾಯನಿಕ ವಸ್ತುಗಳನ್ನು ಬಳಸಿ ಕಲಬೆರಕೆ ಮಾಡುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಾತ್ಯಕ್ಷಿಕೆ ನಡೆಸಲಾಯಿತು.

VC Sajjanar Demonstrates How to Identify Adulterated Spices
ಶಾಕ್ ಕೊಟ್ಟ ಸರ್ಕಾರ: ಡೈರಿಯೇತರ ಪನೀರ್ ಗೆ ಒಂದು ವರ್ಷದ ನಿಷೇಧ, ವ್ಯಾಪಾರಿಗಳು ಬೇಸ್ತು! ಕಾರಣ ಏನು?

ಕಲಬೆರಕೆ ವಿರುದ್ಧ ವ್ಯಾಪಕ ಕಾರ್ಯಾಚರಣೆ

ಟಾಸ್ಕ್‌ಫೋರ್ಸ್ ಹಾಗೂ ಹೈದರಾಬಾದ್ ಫುಡ್ ಅಡಲ್ಟರೇಷನ್ ಸರ್ವೆಲೆನ್ಸ್ ಟೀಮ್ (H-FAST) ಡಿಸಿಪಿ ವೈಭವ್ ಗಾಯಕ್‌ವಾಡ್ ಅವರು ಕೂಡ ಕಲಬೆರಕೆ ಮಾಡಿರುವ ಸಾಸಿವೆ ಕಾಳುಗಳನ್ನು ಪ್ರದರ್ಶಿಸಿದರು. ನೀರಿನಲ್ಲಿ ಬೆರೆಸಿದ ನಂತರವೂ ಕೆಲವು ಕಲಬೆರಕೆ ಸಾಸಿವೆ ಕಾಳುಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳಲಿಲ್ಲ ಎಂದು ಅವರು ತೋರಿಸಿದರು.

ಒಂದು ತಯಾರಿಕಾ ಘಟಕದಲ್ಲಿ ನಡೆಸಿದ ತನಿಖೆಯ ವೇಳೆ ಕಳಪೆ ಗುಣಮಟ್ಟದ ಹಾಗೂ ತಿರಸ್ಕರಿಸಲ್ಪಟ್ಟ ಸಾಸಿವೆ ಕಾಳುಗಳಿಗೆ ಬಟ್ಟೆ ಬಣ್ಣ, ಟಾಲ್ಕಂ ಪೌಡರ್ ಮತ್ತು ಎಣ್ಣೆಯನ್ನು ಬೆರೆಸಿ ಕಲಬೆರಕೆ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಸಾಲೆಗೆ ಹೊಳಪು, ತೂಕ ಹಾಗೂ ಒಟ್ಟಾರೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಈ ವಸ್ತುಗಳನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

ಇತರ ಕೆಲವು ಘಟಕಗಳಲ್ಲಿ ಲವಂಗ ಮತ್ತು ಶಾಹಿಜೀರಾದಂತಹ ಮಸಾಲೆಗಳಿಗೆ ಕೃತಕ ಬಣ್ಣಗಳನ್ನು ಲೇಪಿಸಿ ಹೆಚ್ಚು ಹೊಳೆಯುವಂತೆ ಹಾಗೂ ಉತ್ತಮ ಗುಣಮಟ್ಟದ ಉತ್ಪನ್ನದಂತೆ ಕಾಣುವಂತೆ ಮಾಡಲಾಗುತ್ತಿತ್ತು. ಲವಂಗ, ಶಾಹಿಜೀರಾ, ಸೋಂಪು ಸೇರಿದಂತೆ ಹಲವು ಸಾಮಾನ್ಯವಾಗಿ ಬಳಸುವ ಮಸಾಲೆಗಳಲ್ಲಿ ಶಾಶ್ವತ ಕೈಗಾರಿಕಾ ಬಣ್ಣಗಳನ್ನು ಬಳಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದೋರ್ ನಿಂದ ಕಲಬೆರಕೆ ಪಾಠ

ಮಸಾಲೆ ಕಲಬೆರಕೆ ಮಾಡುವ ಈ ವಿಧಾನಗಳನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲಿತಿರುವುದಾಗಿ ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ ಎಂದು ಸಜ್ಜನರ್ ಹೇಳಿದ್ದಾರೆ. ಸಾಸಿವೆ ಕಾಳುಗಳ ಕಲಬೆರಕೆಗೆ ಬಳಸಲಾಗುತ್ತಿತ್ತು ಎನ್ನಲಾದ ಸ್ಯಾಶೆಟ್‌ವೊಂದನ್ನು ಪ್ರದರ್ಶಿಸಿದ ಸಜ್ಜನರ್, ಅದರ ಮೇಲೆ ‘ವಿಷಕಾರಿ ಮತ್ತು ತಿನ್ನಲು ಯೋಗ್ಯವಲ್ಲ’ ಎಂಬ ಎಚ್ಚರಿಕೆಯ ಸಂದೇಶವಿತ್ತು ಎಂದು ತಿಳಿಸಿದ್ದಾರೆ.

ಮಸಾಲೆ ಖರೀದಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸಬೇಕು. ಅಸಹಜ ಬಣ್ಣ, ವಿನ್ಯಾಸ, ಸ್ಪರ್ಶ ಸೇರಿದಂತೆ ಕಲಬೆರಕೆಯ ಸಾಧ್ಯತೆಯನ್ನು ಸೂಚಿಸುವ ಲಕ್ಷಣಗಳ ಬಗ್ಗೆ ಗಮನಹರಿಸುವಂತೆ ಪೊಲೀಸರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com