ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವವರೆಗೂ ಸಂಸತ್ತಿನಲ್ಲಿನ ಗದ್ದಲ ಮುಂದುವರಿಯಲಿದೆ: ಪ್ರಿಯಾಂಕಾ ಗಾಂಧಿ

ಸಂಸತ್ತಿನಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಮುಂಗಾರು ಅಧಿವೇಶನ ಮುಕ್ತಾಯಗೊಳ್ಳಲು ಕೇವಲ ನಾಲ್ಕು ದಿನಗಳು ಬಾಕಿ ಇದೆ.
Priyanka Gandhi And Amit Shah
ಪ್ರಿಯಾಂಕಾ ಗಾಂಧಿ ಮತ್ತು ಅಮಿತ್ ಶಾ
Updated on

ನವದೆಹಲಿ: ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡುವವರೆಗೂ ಸಂಸತ್ತಿನಲ್ಲಿ ವಿರೋಧ ಪಕ್ಷ ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟು ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಹೇಳಿದರು.

ಸಂಸತ್ತಿನಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಮುಂಗಾರು ಅಧಿವೇಶನ ಮುಕ್ತಾಯಗೊಳ್ಳಲು ಕೇವಲ ನಾಲ್ಕು ದಿನಗಳು ಬಾಕಿ ಇದೆ. ಆದರೆ, ಮಹಿಳಾ ಮೀಸಲಾತಿ, ಕ್ಷೇತ್ರ ಮರುಪಂಗಡಣೆ ಮತ್ತು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA)ಗೆ ಸಂಬಂಧಿಸಿದ ಪ್ರಮುಖ ಮಸೂದೆಗಳ ಭವಿಷ್ಯ ಇದೀಗ ಅನಿಶ್ಚಿತವಾಗಿದೆ.

ಸೋಮವಾರದ ಲೋಕಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಈ ಯಾವುದೇ ಮಸೂದೆಗಳು ಸೇರಿರಲಿಲ್ಲ.

'ಕೇಂದ್ರ ಗೃಹ ಸಚಿವರು ಹೇಳಿಕೆ ನೀಡುವವರೆಗೂ ಸಂಸತ್ತಿನಲ್ಲಿನ ಕಲಾಪಕ್ಕೆ ಅಡ್ಡಿ (ಡೆಡ್‌ಲಾಕ್) ಮುಂದುವರಿಯಲಿದೆ ಎಂದು ನಾನು ಭಾವಿಸುತ್ತೇನೆ' ಎಂದು ಸಂಸತ್ ಭವನದ ಆವರಣದಲ್ಲಿ ಪ್ರಿಯಾಂಕಾ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರ್ಕಾರದ ಸಂಪರ್ಕ ಪ್ರಯತ್ನಗಳ ನಂತರ ಕೆಲವು ವಿರೋಧ ಪಕ್ಷಗಳು ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗಳ ಕುರಿತ ತಮ್ಮ ನಿಲುವನ್ನು ಮೃದುಗೊಳಿಸುವ ಲಕ್ಷಣಗಳನ್ನು ತೋರಿದ್ದರೂ, ಈ ಮಸೂದೆಗಳು ಹಾಗೂ ಎಫ್‌ಸಿಆರ್‌ಎ (FCRA) ತಿದ್ದುಪಡಿ ಮಸೂದೆಯನ್ನು ಮಂಡಿಸುವ ಯಾವುದೇ ನಡೆಯನ್ನು ವಿರೋಧಿಸುವುದಾಗಿ ಕಾಂಗ್ರೆಸ್ ಮತ್ತು ಅದರ ಬಹುತೇಕ ಮಿತ್ರಪಕ್ಷಗಳು ದೃಢವಾಗಿ ಹೇಳಿವೆ.

Priyanka Gandhi And Amit Shah
'ಕ್ಷಮೆಯಾಚಿಸುವ ಬದಲು, ಕ್ಷಮಿಸುವ ಕೆಲಸದಲ್ಲಿ ಮೋದಿ ನಿರತ'; ಈ 'ಅಪರಾಧ'ಕ್ಕೆ ಅಮಿತ್ ಶಾ ಉತ್ತರಿಸಬೇಕು: ರಾಹುಲ್ ಗಾಂಧಿ

2029ರಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಹಾಗೂ ಲೋಕಸಭೆಯ ಸದಸ್ಯ ಬಲವನ್ನು ಹೆಚ್ಚಿಸಲು ಕ್ಷೇತ್ರಗಳ ಮರುವಿಂಗಡಣೆಯನ್ನು ಕೈಗೊಳ್ಳುವ ಪ್ರಸ್ತಾವನೆಯನ್ನು ಒಳಗೊಂಡಿದ್ದ ಸಂವಿಧಾನ ತಿದ್ದುಪಡಿ ಮಸೂದೆಯು, ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾದ ಕಾರಣ ಏಪ್ರಿಲ್‌ನಲ್ಲಿ ತಿರಸ್ಕೃತಗೊಂಡಿತು.

FCRA ತಿದ್ದುಪಡಿ ಮಸೂದೆ, 2026 ಅನ್ನು ಈ ವರ್ಷದ ಮಾರ್ಚ್ 25 ರಂದು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಇದನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಬೇಕಿದೆ.

'ಕೇವಲ ಎರಡು ಅಥವಾ ಮೂರು ದಿನಗಳಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಸಿದ್ಧಪಡಿಸಿ ಮಂಡಿಸಬಹುದು ಎಂದು ಕೇಂದ್ರ ಸರ್ಕಾರ ಭಾವಿಸಿದರೆ, ಆ ಆಸೆಯನ್ನು ಅದು ತನ್ನಲ್ಲೇ ಇರಿಸಿಕೊಳ್ಳಬೇಕು' ಎಂದು AICC ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭಾನುವಾರ ಹೇಳಿದ್ದರು.

ಪ್ರಸ್ತಾವಿತ ಮಸೂದೆಯು ಅಲ್ಪಸಂಖ್ಯಾತರು ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು (NGOs) ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ ವೇಣುಗೋಪಾಲ್, ವಿರೋಧ ಪಕ್ಷವು ಇದನ್ನು ಅಂಗೀಕರಿಸಲು ಬಿಡುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com