

ನವದೆಹಲಿ: ತಮ್ಮ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ಶಾಶ್ವತವಾಗಿ ವಜಾಗೊಳಿಸಿರುವ ಅಮೆರಿಕ ನ್ಯಾಯಾಲಯದ ತೀರ್ಪನ್ನು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಸ್ವಾಗತಿಸಿದ್ದು, ‘ಸತ್ಯ, ನ್ಯಾಯದ ಮೇಲಿನ ನಂಬಿಕೆ ಅಚಲ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸತ್ಯ, ನ್ಯಾಯಸಮ್ಮತತೆ ಮತ್ತು ಕಾನೂನಿನ ಆಳ್ವಿಕೆಯ ಮೇಲಿನ ತಮ್ಮ ನಂಬಿಕೆ ಸವಾಲಿನ ಅವಧಿಯಲ್ಲೂ ಅಚಲವಾಗಿತ್ತು ಎಂದು ಹೇಳಿದ್ದಾರೆ.
ನ್ಯಾಯಾಲಯದ ತೀರ್ಪನ್ನು “ವಿನಮ್ರತೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಆಳವಾದ ಗೌರವದಿಂದ” ಸ್ವಾಗತಿಸುತ್ತೇನೆ. ಈ ಸವಾಲಿನ ಅವಧಿಯುದ್ದಕ್ಕೂ ಸತ್ಯ, ನ್ಯಾಯಸಮ್ಮತತೆ ಮತ್ತು ಕಾನೂನಿನ ಆಳ್ವಿಕೆಯ ಮೇಲಿನ ನಮ್ಮ ನಂಬಿಕೆ ಅಚಲವಾಗಿತ್ತು. ನಮ್ಮ ಮೇಲೆ, ವ್ಯವಸ್ಥೆಯ ಮೇಲೆ ಹಾಗೂ ನ್ಯಾಯ ಒದಗಿಸುವ ಭಾರತದ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆ ಎಂದು ತಿಳಿಸಿದ್ದಾರೆ.
ಮುಂದೆಯೂ ಮಹತ್ವದ ಕೆಲಸವನ್ನೇ ಮುಂದುವರಿಸುತ್ತೇವೆ. ನಮ್ಮ ದೇಶಕ್ಕಾಗಿ ನಿರ್ಮಿಸುತ್ತೇವೆ, ನಮ್ಮ ನಂತರವೂ ಉಳಿಯುವ ಮೌಲ್ಯವನ್ನು ಸೃಷ್ಟಿಸುತ್ತೇವೆ ಮತ್ತು ನಮಗಿಂತಲೂ ದೊಡ್ಡ ಉದ್ದೇಶಕ್ಕಾಗಿ ಸೇವೆ ಸಲ್ಲಿಸುತ್ತೇವೆ. ಇದೇ ನಮ್ಮ ಬದ್ಧತೆ,” ಎಂದು ಹೇಳಿದ್ದಾರೆ.
2023ರ ಜನವರಿಯಲ್ಲಿ ಪ್ರಸ್ತುತ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಸಮೂಹದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಬಳಿಕ ಅದಾನಿ ಸಮೂಹದ ಮೇಲೆ ತೀವ್ರ ಪರಿಶೀಲನೆ ಆರಂಭವಾಗಿತ್ತು.
ಹಿಂಡೆನ್‌ಬರ್ಗ್ ವರದಿ ಪ್ರಕಟವಾದ ಬಳಿಕ ಅದಾನಿ ಸಮೂಹದ ಷೇರುಗಳಲ್ಲಿ ಭಾರಿ ಮಾರಾಟದ ಒತ್ತಡ ಉಂಟಾಗಿ, ಒಂದು ಹಂತದಲ್ಲಿ ಸಮೂಹದ ಮಾರುಕಟ್ಟೆ ಮೌಲ್ಯದಿಂದ 150 ಬಿಲಿಯನ್ ಡಾಲರ್‌ಗೂ ಹೆಚ್ಚು ನಷ್ಟವಾಗಿತ್ತು.
ಆದರೆ, ಹಿಂಡೆನ್‌ಬರ್ಗ್ ಮಾಡಿದ್ದ ಆರೋಪಗಳನ್ನು ಅದಾನಿ ಸಮೂಹ ನಿರಂತರವಾಗಿ ತಳ್ಳಿಹಾಕಿದ್ದು, ಅನ್ವಯವಾಗುವ ಎಲ್ಲ ಕಾನೂನುಗಳು ಹಾಗೂ ಬಹಿರಂಗಪಡಿಸುವಿಕೆಯ ನಿಯಮಗಳನ್ನು ಪಾಲಿಸಿರುವುದಾಗಿ ಹೇಳಿಕೊಂಡಿತ್ತು.
ಇದೀಗ ಅಮೆರಿಕ ನ್ಯಾಯಾಲಯದ ತೀರ್ಪಿನೊಂದಿಗೆ ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ವಿನೀತ್ ಜೈನ್ ವಿರುದ್ಧದ ಮೂರು ಕ್ರಿಮಿನಲ್ ಆರೋಪಗಳನ್ನು ಶಾಶ್ವತವಾಗಿ ವಜಾಗೊಳಿಸಲಾಗಿದೆ.
ಅಮೆರಿಕ ಸರ್ಕಾರವು ಪ್ರಕರಣವನ್ನು ‘ವಿತ್ ಪ್ರಿಜುಡಿಸ್’ ಆಧಾರದ ಮೇಲೆ ವಜಾಗೊಳಿಸಲು ಮನವಿ ಮಾಡಿದ್ದರಿಂದ ಹಾಗೂ ಆರೋಪಿಗಳು ಕೂಡ ಅದಕ್ಕೆ ಸಮ್ಮತಿ ಸೂಚಿಸಿದ್ದರಿಂದ, ಪ್ರಾಸಿಕ್ಯೂಷನ್ ಮೂಲಕ ಕಿರುಕುಳ ನೀಡುವ ಯಾವುದೇ ಆತಂಕವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.