

ನ್ಯೂಯಾರ್ಕ್: ಭಾರತದ ಪ್ರಮುಖ ಉದ್ಯಮಿ, ಬಿಲಿಯನೇರ್ ಗೌತಮ್ ಅದಾನಿ ಅವರಿಗೆ ಅಮೆರಿಕದ ನ್ಯಾಯಾಲಯದಿಂದ ದೊಡ್ಡ ರಿಲೀಫ್ ಸಿಕ್ಕಿದೆ.
ಬಹುಕೋಟಿ ಲಂಚ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಮಾಜಿ ಉದ್ಯೋಗಿ ವಿನೀತ್ ಜೈನ್ ವಿರುದ್ಧದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಅಧಿಕೃತವಾಗಿ ವಜಾಗೊಳಿಸಿದ್ದಾರೆ.
ನ್ಯೂಯಾರ್ಕ್‌ನ ಬ್ರೂಕ್ಲಿನ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ನಿಕೋಲಸ್ ಜಿ. ಗರೌಫಿಸ್ ಅವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಅಮೆರಿಕದ ನ್ಯಾಯಾಂಗ ಇಲಾಖೆಯ (DOJ) ಕೋರಿಕೆಯ ಮೇರೆಗೆ ಈ ಪ್ರಕರಣವನ್ನು ‘ಖುಲಾಸೆ’ (Dismissed with prejudice) ಮಾಡಲಾಗಿದ್ದು, ಇದರರ್ಥ ಭವಿಷ್ಯದಲ್ಲಿ ಇದೇ ಆರೋಪದ ಮೇಲೆ ಅದಾನಿ ವಿರುದ್ಧ ಮತ್ತೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ.
ನ್ಯಾಯಮೂರ್ತಿ ನಿಕೋಲಸ್ ಗರಾಫಿಸ್ ಅವರು ಪ್ರಕರಣ ಕೈಬಿಡಲು ಸರ್ಕಾರ ನೀಡಿದ ಕಾರಣಗಳ ಕುರಿತು ಹೆಚ್ಚುವರಿ ವಿವರಣೆ ಪಡೆದ ಬಳಿಕ ವಜಾಗೊಳಿಸುವ ಆದೇಶಕ್ಕೆ ಅನುಮೋದನೆ ನೀಡಿದರು.
2024ರ ನವೆಂಬರ್‌ನಲ್ಲಿ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಗೌತಮ್ ಅದಾನಿ, ಸಾಗರ್ ಅದಾನಿ, ವಿನೀತ್ ಜೈನ್ ಸೇರಿದಂತೆ ಇತರರ ವಿರುದ್ಧ ಆರೋಪ ಹೊರಿಸಿದ್ದರು.
ಭಾರತದ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 25 ಕೋಟಿ ಡಾಲರ್ ಲಂಚ ನೀಡಲು ಸಂಚು ರೂಪಿಸಲಾಗಿತ್ತು. ಇದರ ಮೂಲಕ ಎರಡು ದಶಕಗಳಲ್ಲಿ ತೆರಿಗೆ ನಂತರ 200 ಕೋಟಿ ಡಾಲರ್‌ಗೂ ಹೆಚ್ಚು ಲಾಭ ಗಳಿಸುವ ನಿರೀಕ್ಷೆಯಿದ್ದ ಸೌರ ವಿದ್ಯುತ್ ಯೋಜನೆಗಳ ಗುತ್ತಿಗೆ ಪಡೆಯಲು ಪ್ರಯತ್ನಿಸಲಾಗಿತ್ತು ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು.
ಅಮೆರಿಕದ ಮಾರುಕಟ್ಟೆಗಳಲ್ಲಿ ಸಾಲ ಹಾಗೂ ಬಾಂಡ್‌ಗಳ ಮೂಲಕ 300 ಕೋಟಿ ಡಾಲರ್‌ಗೂ ಹೆಚ್ಚು ಹಣ ಸಂಗ್ರಹಿಸುವ ವೇಳೆ ಹೂಡಿಕೆದಾರರನ್ನು ದಾರಿ ತಪ್ಪಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿತ್ತು.
ಆದರೆ, ಅದಾನಿ ಸಮೂಹ ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿತ್ತು. ಅನ್ವಯವಾಗುವ ಕಾನೂನುಗಳು ಹಾಗೂ ನಿಯಂತ್ರಣಾತ್ಮಕ ನಿಯಮಗಳನ್ನು ಪಾಲಿಸಿರುವುದಾಗಿ ಸ್ಪಷ್ಟಪಡಿಸಿತ್ತು.
ಪ್ರಕರಣ ಮುಂದುವರಿಸುವುದು ನ್ಯಾಯದ ಹಿತಾಸಕ್ತಿಗೆ ಅನುಗುಣವಾಗಿಲ್ಲ ಎಂದು ಟ್ರಂಪ್ ಆಡಳಿತದ ನ್ಯಾಯಾಂಗ ಇಲಾಖೆ ವಾದಿಸಿತು.
ಪ್ರಕರಣದ ವ್ಯಾಪ್ತಿ, ಸಾಕ್ಷ್ಯಾಧಾರಗಳ ಸವಾಲುಗಳು, ಆರೋಪಿತ ಕೃತ್ಯಗಳು ಬಹುತೇಕ ಭಾರತದಲ್ಲಿ ನಡೆದಿರುವುದು, ಭಾರತೀಯ ಅಧಿಕಾರಿಗಳು ಈಗಾಗಲೇ ಈ ವಿಚಾರವನ್ನು ಪರಿಶೀಲಿಸುತ್ತಿರುವುದು, ಹೂಡಿಕೆದಾರರಿಗೆ ನಷ್ಟವಾಗಿರುವುದು ದೃಢಪಟ್ಟಿಲ್ಲದಿರುವುದು ಹಾಗೂ ಸಾರ್ವಜನಿಕ ಹಿತಾಸಕ್ತಿ ಸೇರಿದಂತೆ ಹಲವು ಕಾರಣಗಳನ್ನು ಸರ್ಕಾರ ಮುಂದಿಟ್ಟಿತು.
2024ರ ನವೆಂಬರ್‌ನಲ್ಲಿ, ಬೈಡನ್ ಆಡಳಿತದ ಕೊನೆಯ ದಿನಗಳಲ್ಲಿ ಆರೋಪಪಟ್ಟಿ ಬಹಿರಂಗಪಡಿಸಲಾಗಿತ್ತು. ಈ ಪ್ರಕರಣ ವಿಚಾರಣೆಗೆ ತಲುಪುವ ಸಾಧ್ಯತೆ ಕಡಿಮೆ ಇದ್ದು, ಹಿಂದಿನ ಆಡಳಿತ ನಡೆಸಿದ ರಾಜಕೀಯ ಪ್ರೇರಿತ ‘ಹೆಸರು ಕೆಡಿಸುವ’ ಕ್ರಮದಂತೆ ಕಾಣುತ್ತಿದೆ ಎಂದು ಟ್ರಂಪ್ ಆಡಳಿತ ಆರೋಪಿಸಿತು.
ಪ್ರಕರಣ ಕೈಬಿಡುವ ನಿರ್ಧಾರದ ಹಿಂದೆ ಯಾವುದೇ ಭರವಸೆ, ಒಪ್ಪಂದ ಅಥವಾ ಪ್ರತಿಫಲದ ಒಪ್ಪಂದ ಇರಲಿಲ್ಲ ಎಂದು ಗೌತಮ್ ಅದಾನಿ ಪ್ರಮಾಣಪತ್ರದ ಮೂಲಕ ಸ್ಪಷ್ಟಪಡಿಸಿದರು.
ನವೆಂಬರ್ 2024ರಲ್ಲಿ ಅದಾನಿ ಅವರು ಅಮೆರಿಕದಲ್ಲಿ 1000 ಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ನೀಡಿದ್ದ ಭರವಸೆಯು ಪ್ರಕರಣ ಕೈಬಿಡುವ ನಿರ್ಧಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ನ್ಯಾಯಮೂರ್ತಿ ಗರಾಫಿಸ್ ಹೇಳಿದರು.
ಅದಾನಿ ಗ್ರೀನ್ ಎನರ್ಜಿಯ ಲಂಚವಿರೋಧಿ ನೀತಿ ಹಾಗೂ ಸಂಸ್ಥೆಯ ಅನುಸರಣೆ ಕುರಿತು ನೀಡಿದ್ದ ಕೆಲವು ಹೇಳಿಕೆಗಳು ಹೂಡಿಕೆದಾರರು ವಾಸ್ತವಿಕವಾಗಿ ಅವಲಂಬಿಸಬಹುದಾದ ನಿರ್ದಿಷ್ಟ ಭರವಸೆಗಳಲ್ಲ, ಸಾಮಾನ್ಯ ಪ್ರಚಾರಾತ್ಮಕ ಹೇಳಿಕೆಗಳಾಗಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಪ್ರಕರಣ ವಜಾಗೊಳಿಸಲು ಸರ್ಕಾರ ಮುಂದಿಟ್ಟಿದ್ದ ಕೆಲವು ಇತರ ಕಾರಣಗಳನ್ನು ನ್ಯಾಯಾಲಯ ತಳ್ಳಿಹಾಕಿತು ಅಥವಾ ಸಾಕಷ್ಟು ಸಮರ್ಥನೆಯಿಲ್ಲ ಎಂದು ಹೇಳಿತು. ಆದರೆ, ಮೇಲಿನ ಕಾರಣವೇ ಮೂರು ಆರೋಪಗಳನ್ನು ವಜಾಗೊಳಿಸಲು ಸಾಕಾಗುತ್ತದೆ ಎಂದು ನ್ಯಾಯಾಲಯ ನಿರ್ಧರಿಸಿತು.
ಅದಾನಿಗೆ ಎಸ್‌ಇಸಿ ಪ್ರಕರಣದಲ್ಲಿ 60 ಲಕ್ಷ ಡಾಲರ್ ದಂಡ
ಈ ನಡುವೆ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ದಾಖಲಿಸಿದ್ದ ಪ್ರತ್ಯೇಕ ಸಿವಿಲ್ ಪ್ರಕರಣವೂ ಅಂತ್ಯಗೊಂಡಿದೆ.
ಗೌತಮ್ ಅದಾನಿ ಆರೋಪಗಳನ್ನು ಒಪ್ಪಿಕೊಳ್ಳದೆ ನ್ಯಾಯಾಲಯದ ಆದೇಶಕ್ಕೆ ಸಮ್ಮತಿ ಸೂಚಿಸಿದ್ದು, 60 ಲಕ್ಷ ಡಾಲರ್ ಸಿವಿಲ್ ದಂಡವನ್ನು 30 ದಿನಗಳೊಳಗೆ ಎಸ್‌ಇಸಿಗೆ ಪಾವತಿಸಬೇಕಾಗಿದೆ.
ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಮುನ್ನವೇ ವಜಾಗೊಂಡಿರುವುದರಿಂದ ಯಾವುದೇ ಸಾಕ್ಷಿದಾರರ ವಿಚಾರಣೆ ನಡೆದಿಲ್ಲ, ಸಾಕ್ಷ್ಯಗಳನ್ನು ನ್ಯಾಯಾಲಯದಲ್ಲಿ ಪರಿಶೀಲಿಸಲಾಗಿಲ್ಲ ಹಾಗೂ ಮೂಲ ಕ್ರಿಮಿನಲ್ ಆರೋಪಗಳ ಕುರಿತು ಯಾವುದೇ ನ್ಯಾಯಾಂಗ ತೀರ್ಪು ಹೊರಬಿದ್ದಿಲ್ಲ.