'Time To Move On'.. ವಿವಾದ ಮುಂದುವರಿಸುವ ಸಮಯವಲ್ಲ’: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಮಹತ್ವದ ಸೂಚನೆ

ವಿವಾದದಿಂದ ಸಂಬಂಧಪಟ್ಟ ಪಕ್ಷಗಳು ‘ಮುಂದೆ ಸಾಗದಿದ್ದರೆ’, ಅದು ದೇಶದ ಆರ್ಥಿಕತೆಯ ಮೇಲೆ ನೇರ ಹಾಗೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ಹೇಳಿದೆ.
Bombay High Court To Vijay Mallya
ವಿಜಯ್ ಮಲ್ಯ (ಸಂಗ್ರಹ ಚಿತ್ರ)
Updated on

ಮುಂಬೈ: ಆಸ್ತಿ ವಿವಾದ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಮಹತ್ವದ ಸೂಚನೆ ಮಹತ್ವದ ಸೂಚನೆ ನೀಡಿದ್ದು, ‘ಇನ್ನು ವಿವಾದ ಮುಂದುವರಿಯುವ ಸಮಯವಲ್ಲ' ಎಂದು ಅಭಿಪ್ರಾಯಪಟ್ಟಿದೆ.

ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಮತ್ತು ಬ್ಯಾಂಕ್‌ಗಳ ನಡುವಿನ ವಾಣಿಜ್ಯ ವಿವಾದಕ್ಕೆ ಇದೀಗ ಅಂತ್ಯ ಹಾಡಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದ್ದು, ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರ ಏಕಸದಸ್ಯ ಪೀಠ ಈ ವಾರ ಮಲ್ಯಾ ಅವರ ಅರ್ಜಿಯ ವಿಚಾರಣೆ ನಡೆಸಿತು. ಈ ವಿವಾದದಿಂದ ಸಂಬಂಧಪಟ್ಟ ಪಕ್ಷಗಳು ‘ಮುಂದೆ ಸಾಗದಿದ್ದರೆ’, ಅದು ದೇಶದ ಆರ್ಥಿಕತೆಯ ಮೇಲೆ ನೇರ ಹಾಗೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಹಲವು ಬ್ಯಾಂಕ್‌ಗಳು ಹಿಂದಿನ ಕಿಂಗ್‌ಫಿಶರ್ ಏರ್‌ಲೈನ್ಸ್‌ (KFA)ಗೆ ನೀಡಿದ್ದ ₹9,000 ಕೋಟಿ ಸಾಲವನ್ನು ಮರುಪಾವತಿ ಮಾಡದ ಪ್ರಕರಣದಲ್ಲಿ ಮಲ್ಯಾ ಭಾರತದಲ್ಲಿ ಬೇಕಾಗಿದ್ದಾರೆ. 2016ರ ಮಾರ್ಚ್‌ನಲ್ಲಿ ಬ್ರಿಟನ್‌ಗೆ ಪರಾರಿಯಾಗಿದ್ದ ಮಲ್ಯಾರನ್ನು 2019ರಲ್ಲಿ ‘ಪರಾರಿ ಆರ್ಥಿಕ ಅಪರಾಧಿ’ ಎಂದು ಘೋಷಿಸಲಾಗಿತ್ತು. ಇದರಿಂದ ಕಾನೂನಿನಡಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳಿಗೆ ಅವಕಾಶ ದೊರೆತಿತ್ತು.

2020ರಲ್ಲಿ, ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿದ್ದ ತಮ್ಮ ಆಸ್ತಿಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಬಳಸಿಕೊಳ್ಳಲು ಅನುಮತಿ ನೀಡಿದ್ದ ವಿಶೇಷ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ನ್ಯಾಯಾಲಯದ ಆದೇಶವನ್ನು ಅವರು ಪ್ರಶ್ನಿಸಿದ್ದರು

Bombay High Court To Vijay Mallya
'ಹೆಚ್ಚಿನ ಜನರು ನನ್ನನ್ನು ನೋಡಿ ನಕ್ಕರು': ದಾಖಲೆ ಬೆಲೆಗೆ RCB ಮಾರಾಟಕ್ಕೆ ಮಾಜಿ ಮಾಲೀಕ ವಿಜಯ್ ಮಲ್ಯ ಪ್ರತಿಕ್ರಿಯೆ

ನ್ಯಾಯಾಲಯ ಹೇಳಿದ್ದೇನು?

ತನಿಖೆಯ ಪ್ರಸ್ತುತ ಸ್ಥಿತಿ ಹಾಗೂ ಜಪ್ತಿ ಮಾಡಲಾಗಿರುವ ಆಸ್ತಿಗಳ ಹಾಲಿ ಸ್ಥಿತಿಗೆ ಸಂಬಂಧಿಸಿದ ವಿವರಗಳನ್ನು EDಯಿಂದಲೂ ನ್ಯಾಯಾಲಯ ಕೇಳಿದ್ದು, ಸುಮಾರು ಒಂದು ದಶಕದಿಂದ ಮುಂದುವರಿದಿರುವ ಈ ಪ್ರಕರಣ ಇದೀಗ ತಾರ್ಕಿಕ ಅಂತ್ಯ ಕಾಣಬೇಕು ಎಂದು ನ್ಯಾಯಪೀಠ ಹೇಳಿದೆ.

70 ವರ್ಷದ ಮಲ್ಯಾ, ತಮ್ಮ ಆಸ್ತಿಗಳನ್ನು ಬ್ಯಾಂಕ್‌ಗಳಿಗೆ ಹಸ್ತಾಂತರಿಸುವಂತೆ ನೀಡಲಾಗಿದ್ದ ಆದೇಶ ಸಮರ್ಥನೀಯವಲ್ಲ ಎಂದು ವಾದಿಸಿದ್ದರು. ವಾಣಿಜ್ಯ ವಿವಾದಗಳಿಗೆ ಪರಿಹಾರವು ಹಲವು ಬಾರಿ ಆ ವಿವಾದಗಳಲ್ಲೇ ಅಡಗಿರುತ್ತದೆ ಎಂದು ನ್ಯಾಯಾಲಯ ಗಮನಿಸಿತು. ಹೀಗಾಗಿ ಸಂಘರ್ಷದಲ್ಲೇ ಸಿಲುಕಿಕೊಂಡು ಉಳಿಯುವ ಬದಲು, ಸಂಬಂಧಪಟ್ಟ ಪಕ್ಷಗಳು ಪ್ರಾಯೋಗಿಕ ಪರಿಹಾರದತ್ತ ಸಾಗಬೇಕು ಎಂದು ಕೋರ್ಟ್ ಹೇಳಿದೆ.

ಪ್ರಾಯೋಗಿಕ ಪರಿಹಾರದತ್ತ ಸಾಗಬೇಕು

ಫೆಬ್ರವರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಖಾದ್ ಅವರನ್ನೊಳಗೊಂಡ ಪೀಠವು ಮಲ್ಯಾ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿತ್ತು. ಪರಾರಿ ಆರ್ಥಿಕ ಅಪರಾಧಿಗಳ ಕಾಯ್ದೆ (FEOA) ಅಡಿಯಲ್ಲಿ ತಮ್ಮನ್ನು ‘ಪರಾರಿ ಆರ್ಥಿಕ ಅಪರಾಧಿ’ ಎಂದು ಘೋಷಿಸಿರುವುದನ್ನು ಪ್ರಶ್ನಿಸಿದ್ದ ಒಂದು ಅರ್ಜಿ ಹಾಗೂ ತಮ್ಮನ್ನು ಪರಾರಿ ಎಂದು ಅಧಿಕೃತವಾಗಿ ಘೋಷಿಸಿದ್ದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಮತ್ತೊಂದು ಅರ್ಜಿ ಇದಾಗಿತ್ತು.

ಫೆಬ್ರವರಿ 12ರಂದು ನಡೆದ ವಿಚಾರಣೆ ವೇಳೆ, ಮಲ್ಯಾ ಮೊದಲು ಭಾರತಕ್ಕೆ ಮರಳಿ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಡದ ಹೊರತು ಅವರ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಕೋರ್ಟ್ ಹೇಳಿತ್ತು. ಪರಿಹಾರ ಕೋರಿ ಅರ್ಜಿಯನ್ನು ಮುಂದುವರಿಸಲು ಬಯಸಿದರೆ, ಭಾರತಕ್ಕೆ ಮರಳುವ ಉದ್ದೇಶವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು.

ಫೆಬ್ರವರಿ 18ರಂದು ನಡೆದ ಮುಂದಿನ ವಿಚಾರಣೆಯಲ್ಲಿ, ಭಾರತಕ್ಕೆ ಯಾವಾಗ ಮರಳುತ್ತೇನೆ ಎಂಬುದನ್ನು ನಿರ್ದಿಷ್ಟವಾಗಿ ಹೇಳುವ ಸ್ಥಿತಿಯಲ್ಲಿ ತಾನು ಇಲ್ಲ ಎಂದು ಮಲ್ಯಾ ತಿಳಿಸಿದ್ದರು. ಇಂಗ್ಲೆಂಡ್‌ನ ನ್ಯಾಯಾಲಯಗಳು ವಿಧಿಸಿರುವ ನಿರ್ಬಂಧಗಳಿಂದ ದೇಶ ತೊರೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಕಾರಣ ನೀಡಿದ್ದರು.

Bombay High Court To Vijay Mallya
ಹೆಚ್ಚು ಸಾಲ ವಸೂಲಿ: ಬ್ಯಾಂಕ್​ಗಳ ವಿರುದ್ಧ ವಿಜಯ್ ಮಲ್ಯ ಅರ್ಜಿ; ವಿಚಾರಣೆಗೆ ಹೈಕೋರ್ಟ್ ಅಸ್ತು

ಸುಪ್ರೀಂ ತೀರ್ಪು ಉಲ್ಲೇಖ

ಮಲ್ಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ದೇಸಾಯಿ, ತಮ್ಮ ಕಕ್ಷಿದಾರರು ದೈಹಿಕವಾಗಿ ಭಾರತದಲ್ಲಿ ಹಾಜರಿರಲು ಸಾಧ್ಯವಾಗದಿದ್ದರೂ, ಎರಡು ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿದ ಅವರು, ಕೆಲವು ಪ್ರಕರಣಗಳಲ್ಲಿ ಅರ್ಜಿದಾರರು ಹಾಜರಿಲ್ಲದಿದ್ದರೂ ಸಾಂವಿಧಾನಿಕ ನ್ಯಾಯಾಲಯಗಳು ರಿಟ್ ಅರ್ಜಿಗಳ ಕುರಿತು ತೀರ್ಪು ನೀಡಿವೆ ಎಂದು ವಾದಿಸಿದ್ದರು.

ವಿಜಯ್ ಮಲ್ಯಾರನ್ನು 2019ರ ಜನವರಿಯಲ್ಲಿ ‘ಪರಾರಿ ಆರ್ಥಿಕ ಅಪರಾಧಿ’ ಎಂದು ಘೋಷಿಸಲಾಗಿತ್ತು. ವಿಚಾರಣೆ ಪೂರ್ಣಗೊಳ್ಳುವ ಮೊದಲೇ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಭಾರತ ತೊರೆದ ವ್ಯಕ್ತಿಗಳ ಆಸ್ತಿಗಳನ್ನು ಜಪ್ತಿ ಮಾಡಿ ವಿಲೇವಾರಿ ಮಾಡಲು ಪರಾರಿ ಆರ್ಥಿಕ ಅಪರಾಧಿಗಳ ಕಾಯ್ದೆ ನ್ಯಾಯಾಲಯಗಳಿಗೆ ಅವಕಾಶ ನೀಡುತ್ತದೆ. ಬ್ಯಾಂಕ್ ಸಾಲಗಳ ವಸೂಲಾತಿ ಪ್ರಯತ್ನಗಳ ಭಾಗವಾಗಿ ಅಧಿಕಾರಿಗಳು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

ಮಲ್ಯಾರನ್ನು ಬ್ರಿಟನ್‌ನಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com