

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಮುಂಭಾಗದ ಅನುಮೋದಿತ ಗಡಿ ವ್ಯಾಪ್ತಿಯನ್ನು ಮೀರಿ ನಿರ್ಮಿಸಲಾಗಿದ್ದ ಅನಧಿಕೃತ ರಚನೆಗಳ ವಿರುದ್ಧ ಭಾರತೀಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ.
ಕೇವಲ ಮೂರು ದಿನಗಳ ಹಿಂದಷ್ಟೇ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಹೊರಗಿದ್ದ ರಕ್ಷಣಾ ಬ್ಯಾರಿಕೇಡ್‌ಗಳು ಮತ್ತು ಪಾರ್ಕಿಂಗ್ ಕಂಬಗಳನ್ನು ಪಾಕಿಸ್ತಾನದ ಅಧಿಕಾರಿಗಳು ಬಲವಂತವಾಗಿ ಮುರಿದು ಹಾಕಿದ್ದರು.
ಭಾರತೀಯ ರಾಜತಾಂತ್ರಿಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಪಾಕಿಸ್ತಾನ ಅದನ್ನು ನಿರ್ಲಕ್ಷಿಸಿತ್ತು. ಇದಕ್ಕೆ ತಕ್ಕ ಉತ್ತರವನ್ನೇ ನೀಡಿರುವ ಭಾರತ, ಈಗ ದೆಹಲಿಯ ಚಾಣಕ್ಯಪುರಿ ರಾಜತಾಂತ್ರಿಕ ವಲಯದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ವೀಸಾ ವಿಭಾಗದ ಹೊರಗಿನ ಅತಿಕ್ರಮಣಗಳನ್ನು ತೆರವುಗೊಳಿಸಿದೆ.
ಬುಲ್ಡೋಜರ್ ಬಳಿಕ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಸ್ಥಳದಲ್ಲಿದ್ದ ಟ್ರಾಫಿಕ್ ಬೊಲ್ಲಾರ್ಡ್‌ಗಳು ಮತ್ತು ಭದ್ರತಾ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದಾರೆ.
ಭಾರತೀಯ ಅಧಿಕಾರಿಗಳು ಪಾಕಿಸ್ತಾನ ಹೈಕಮಿಷನ್ ಹೊರಭಾಗದಲ್ಲಿದ್ದ ಅನಧಿಕೃತ ಕಟ್ಟಡಗಳು ಹಾಗೂ ಬ್ಯಾರಿಕೇಡ್‌ಗಳನ್ನು ಗುರುವಾರ ತೆರವುಗೊಳಿಸಿದ್ದಾರೆ. ಅನುಮೋದಿತ ಗಡಿ ವ್ಯಾಪ್ತಿಯನ್ನು ಮೀರಿ ಈ ನಿರ್ಮಾಣಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ನಡೆದ ಈ ಕಾರ್ಯಾಚರಣೆಯಲ್ಲಿ ರಸ್ತೆಯಲ್ಲಿದ್ದ ಕ್ಯೂ ಮ್ಯಾನೇಜ್‌ಮೆಂಟ್ ವ್ಯವಸ್ಥೆಗಳು, ಬಿಳಿ ಲೋಹದ ಬೇಲಿಗಳು, ಕಾಂಕ್ರೀಟ್ ಚೌಕಟ್ಟುಗಳು ಮತ್ತು ಟ್ರಾಫಿಕ್ ನಿಯಂತ್ರಣದ ವಸ್ತುಗಳನ್ನು ನೆಲಸಮ ಮಾಡಲಾಗಿದೆ.
ಕಚೇರಿಯ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಗೂ ಕಬ್ಬಿಣದ ಅವಶೇಷಗಳು ಬಿದ್ದಿರುವುದು ಕಂಡುಬಂದಿದೆ.
ವೀಸಾ ಅರ್ಜಿ ಸ್ವೀಕರಿಸುವ ಕಿಟಕಿಗಳ ಪಕ್ಕದಲ್ಲಿದ್ದ ತಾತ್ಕಾಲಿಕ ಶೀಟ್‌ಗಳು ಮತ್ತು ಗೋಡೆಗಳಿಗೆ ಹಾನಿಯಾಗಿದೆ. ಆದರೆ, ಪಾಕಿಸ್ತಾನ ಹೈಕಮಿಷನ್‌ನ ಮುಖ್ಯ ಕಟ್ಟಡ, ಅದರ ಬಿಳಿ ಗೋಡೆಗಳು ಮತ್ತು ರಾಷ್ಟ್ರೀಯ ಲಾಂಛನವಿರುವ ಮುಖ್ಯ ಗೇಟ್‌ಗಳಿಗೆ ಯಾವುದೇ ಹಾನಿ ಮಾಡಲಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.