'ನಾವು Gen Z ಅನ್ನೋದು ನನ್ನಪ್ಪ ಯಾರು ಗೊತ್ತಾ ಅನ್ನೋದರ ಹೊಸ ರೂಪ': ಯೋಧರ ಜೊತೆ ಯುವತಿಯ ವಾಗ್ವಾದಕ್ಕೆ ಸಿಎಂ ಒಮರ್‌ ಅಬ್ದುಲ್ಲಾ ತೀಕ್ಷ್ಮ ಪ್ರತಿಕ್ರಿಯೆ-Video

ಸಣ್ಣದೊಂದು ಅವಮಾನ ಅಥವಾ ಅಸಮಾಧಾನ ಎದುರಾದ ಕೂಡಲೇ ಜೆನ್‌ ಜಿ ಎಂದು ಬೆದರಿಕೆಯಾಗಿ ಬಳಸಲು ಆರಂಭಿಸಿದರೆ, ಜೆನ್‌ ಜಿ ಬಗ್ಗೆ ಇರುವ ಸದಭಿಪ್ರಾಯವನ್ನು ಹಾಳುಮಾಡುತ್ತದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಮಾಜಿ ಸಂಸದೆ ಸುಮಲತಾ ಅಂಬರೀಷ್ ಕೂಡ ಯುವತಿಯ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
A woman argues with soldiers
ಯೋಧರೊಂದಿಗೆ ಯುವತಿ ವಾಗ್ವಾದ
Updated on

ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು “ನಾವು ಜೆನ್‌ ಜಿ” ಎಂಬ ಮಾತಿನ ಹೆಚ್ಚುತ್ತಿರುವ ಬಳಕೆಯನ್ನು ವ್ಯಂಗ್ಯವಾಡಿದ್ದು, ಅದನ್ನು ಹಳೆಯ ಕಾಲದ “ನನ್ನಪ್ಪ ಯಾರು ಗೊತ್ತಾ?” ಎಂಬ ಬೆದರಿಕೆಯ ಮಾತಿಗೆ ಹೋಲಿಸಿದ್ದಾರೆ.

ಸಣ್ಣದೊಂದು ಅಸಮಾಧಾನ ಎದುರಾದರೂ ಈ ಮಾತನ್ನು ಬೆದರಿಕೆಯಾಗಿ ಬಳಸುವುದು ಜೆನ್‌ ಜಿ ಅಂದರೆ ದೇಶದ ಯುವಸಮೂಹ ಬಗ್ಗೆ ಇರುವ ಸದಭಿಪ್ರಾಯವನ್ನು ಹಾಳುಮಾಡುವ ಅತ್ಯಂತ ವೇಗದ ಮಾರ್ಗವಾಗಿದೆ ಎಂದು ಎಚ್ಚರಿಸಿದ್ದಾರೆ.

ನಾವು ಜೆನ್‌ ಜಿ’ ಎಂಬ ಮಾತು ಈಗ ‘ನನ್ನಪ್ಪ ಯಾರು ಗೊತ್ತಾ?’ ಎಂಬ ಮಾತಿನ ಹೊಸ ರೂಪವಾಗಿದೆ. ಸಣ್ಣದೊಂದು ಅವಮಾನ ಅಥವಾ ಅಸಮಾಧಾನ ಎದುರಾದ ಕೂಡಲೇ ಜೆನ್‌ ಜಿ ಎಂಬ ಗುರುತನ್ನು ಬೆದರಿಕೆಯಾಗಿ ಬಳಸಲು ಆರಂಭಿಸಿದರೆ, ಜೆನ್‌ ಝಡ್‌ ಬಗ್ಗೆ ಇರುವ ಸದಭಿಪ್ರಾಯವನ್ನು ಹಾಳುಮಾಡುವ ಅತ್ಯಂತ ವೇಗದ ಮಾರ್ಗವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊವೊಂದಕ್ಕೆ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ. ಲಡಾಖ್‌ನ ಕಾರ್ಗಿಲ್‌ನ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಯುವತಿಯೊಬ್ಬರು ಗದ್ದಲ ಎಬ್ಬಿಸಿ, ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಬ್ಯಾರಿಕೇಡ್ ಹಾಕಲಾಗಿದ್ದ ಪ್ರದೇಶವನ್ನು ದಾಟಲು ಕಾಯುತ್ತಿದ್ದ ಹಲವು ಪ್ರವಾಸಿಗರಲ್ಲಿ ಈ ಯುವತಿಯೂ ಇದ್ದರು ಎನ್ನಲಾಗಿದೆ.

ಜುಲೈ 25ರಂದು ಈ ಘಟನೆ ನಡೆದಿದ್ದು, ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು ಜೊಜಿಲಾ-ಗುಮ್ರಿ ಮಾರ್ಗವಾಗಿ ಸಂಚರಿಸಬೇಕಿದ್ದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಈ ವರದಿಯ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಈ ಘಟನೆ ಕುರಿತು ಸೇನೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿರಲಿಲ್ಲ.

ವರದಿಯ ಪ್ರಕಾರ, ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು ವಿಮಾನದ ಮೂಲಕ ಪ್ರಯಾಣಿಸಲು ನಿಗದಿಯಾಗಿದ್ದರು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಅವರು ಹೆಲಿಕಾಪ್ಟರ್‌ನಲ್ಲಿ ಗುಮ್ರಿಗೆ ತೆರಳಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರ್ಗಿಲ್ ಕಡೆಗೆ ಪ್ರಯಾಣಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೊದಲ್ಲಿ ಯುವತಿ, ಜನರು ದೂರದ ಊರುಗಳಿಂದ ಪ್ರಯಾಣಿಸಿ ತಮ್ಮ ಪ್ರವಾಸಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದರೆ ಇಲ್ಲಿಗೆ ಬಂದ ಬಳಿಕ ಇಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಮಹಿಳೆ, ತಾವು ಪ್ರವಾಸಿಗರು, ಇಂತಹ ವರ್ತನೆಗೆ ಒಳಗಾಗುವ ಕಾಶ್ಮೀರಿಗಳಲ್ಲ ಎಂದು ಹೇಳುತ್ತಿರುವುದು ಕಂಡುಬಂದಿದೆ. ನಾವು ಜೆನ್‌ ಜಿ... ಈ ಅಸಂಬದ್ಧವನ್ನು ನಾವು ಸಹಿಸುವುದಿಲ್ಲ ಎಂದು ಯುವತಿ ಹೇಳಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ.

ಮಾಜಿ ಸಂಸದೆ ಸುಮಲತಾ ಕಟು ಟೀಕೆ

ಈ ಇಡೀ ಘಟನೆಯಲ್ಲಿ ಅತ್ಯಂತ ಅಸಹ್ಯ ಹುಟ್ಟಿಸುವ ಸಂಗತಿಯೆಂದರೆ ನನ್ನ ತೆರಿಗೆ ಹಣದಿಂದಲೇ ನಿಮ್ಮ ಸಂಬಳ ಪಾವತಿಯಾಗುತ್ತದೆ ಎಂಬ ಹೇಳಿಕೆ. ಅದರ ಅರ್ಥವೇನು? ನೀವು ತೆರಿಗೆ ಪಾವತಿಸುತ್ತೀರಿ ಎಂಬ ಕಾರಣಕ್ಕೆ ನಮ್ಮ ಸೈನಿಕರು ನಿಮ್ಮ ವೈಯಕ್ತಿಕವಾಗಿ ಸಂಬಳ ಪಡೆಯುವ ಸಿಬ್ಬಂದಿ, ನಿಮಗೆ ಉತ್ತರದಾಯಿಗಳು, ನಿಮ್ಮ ದರ್ಪವನ್ನು ಸಹಿಸಿಕೊಳ್ಳಬೇಕಾದವರು ಹಾಗೂ ಹೇಗೋ ನಿಮಗಿಂತ ಕೆಳಮಟ್ಟದವರು ಎಂದು ನೀವು ಭಾವಿಸುತ್ತೀರಾ?

ಒಂದು ವಿಷಯವನ್ನು ನೆನಪಿಸಿಕೊಳ್ಳಿ. ನಮ್ಮ ಸೈನಿಕರು ನಿಮಗಾಗಿ ಕೆಲಸ ಮಾಡುವುದಿಲ್ಲ. ಅವರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಾರೆ ಎಂದಿದ್ದಾರೆ ಮಾಜಿ ಸಂಸದೆ ಸುಮಲತಾ.

ನಿಮ್ಮ ತೆರಿಗೆ, ನನ್ನ ತೆರಿಗೆ ಹಾಗೂ ಪ್ರತಿಯೊಬ್ಬ ನಾಗರಿಕನ ತೆರಿಗೆ ಹಣವೂ ಈ ದೇಶದ ಆಡಳಿತ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಆದರೆ ದೇಶದ ಗಡಿಗಳಲ್ಲಿ, ಅನೇಕ ಬಾರಿ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ, ನಮ್ಮೆಲ್ಲರೂ ಸುರಕ್ಷಿತವಾಗಿ ಬದುಕಲು ಕಾವಲು ಕಾಯುವ ಸೈನಿಕರ ಧೈರ್ಯ, ಬದ್ಧತೆ ಮತ್ತು ತ್ಯಾಗವನ್ನು ಯಾವುದೇ ಹಣದಿಂದ ಖರೀದಿಸಲು ಸಾಧ್ಯವಿಲ್ಲ.

ನೀವು ಲಡಾಖ್ ಸಮೀಪದ ಅತ್ಯಂತ ಸೂಕ್ಷ್ಮ ಮುಂಚೂಣಿ ಪ್ರದೇಶಕ್ಕೆ ತೆರಳಿದಾಗ, ಸೇನೆಯವರು ನಿಮ್ಮನ್ನು ತಡೆದು ನಿಲ್ಲಿಸುವುದು ನಿಮಗೆ ವಿಧಿಸಲಾದ ಯಾವುದೋ ಸಣ್ಣ ಅನನುಕೂಲವಲ್ಲ. ದೇಶದ ಭದ್ರತೆಯನ್ನು ಖಚಿತಪಡಿಸುವುದು ಅವರ ಕರ್ತವ್ಯ. ನೀವು ಯಾರೇ ಆಗಿರಲಿ, ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ.

ಆ ಸೇವೆಯನ್ನು “ನಾನು ನಿಮ್ಮ ಸಂಬಳ ಪಾವತಿಸುತ್ತೇನೆ” ಎಂಬ ಮಾತಿಗೆ ಸೀಮಿತಗೊಳಿಸುವ ದರ್ಪ ಕೇವಲ ಅಸಹ್ಯಕರವಲ್ಲ; ನಮ್ಮ ಸಶಸ್ತ್ರ ಪಡೆಗಳು ದೇಶಕ್ಕಾಗಿ ನಿಜವಾಗಿ ಏನು ಮಾಡುತ್ತವೆ ಎಂಬುದರ ಬಗ್ಗೆ ಇರುವ ಆಘಾತಕಾರಿ ಅಜ್ಞಾನವನ್ನೂ ಇದು ತೋರಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com