

ನವದೆಹಲಿ: ಪಾಕಿಸ್ತಾನದಿಂದ ಎದುರಾಗುತ್ತಿರುವ ಭಯೋತ್ಪಾದನೆಯ ನಿರಂತರ ಬೆದರಿಕೆಯಿಂದಾಗಿ ಭಾರತದ ಗಮನ ಹೆಚ್ಚಾಗಿ ಪಶ್ಚಿಮ ಗಡಿಯತ್ತ ನೆಟ್ಟಿದೆ. ಆದರೆ, ದೀರ್ಘಾವಧಿಯಲ್ಲಿ ಚೀನಾವೇ ಭಾರತದ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂದು ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಹೇಳಿದ್ದಾರೆ.
2019ರ ಡಿಸೆಂಬರ್ 31ರಿಂದ 2022ರ ಏಪ್ರಿಲ್ 30ರವರೆಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಜನರಲ್ ಮನೋಜ್ ನರವಾಣೆ, ಸೇನಾ ತಡೆ ಸಾಮರ್ಥ್ಯವನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಇದೇ ವೇಳೆ, ದೀರ್ಘಕಾಲದ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ರೂಪಾ ಪಬ್ಲಿಕೇಷನ್ಸ್ ಪ್ರಕಟಿಸಿರುವ ತಮ್ಮ ಹೊಸ ಪುಸ್ತಕ ‘ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನರ್ಥಿಂಗ್ ಮಿಲಿಟರಿ ಮಿಥ್ಸ್ ಅಂಡ್ ಮಿಸ್ಟರೀಸ್’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತಕ್ಕೆ ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗುತ್ತಿರುವ ಭದ್ರತಾ ಸವಾಲುಗಳ ಕುರಿತು ಮಾತನಾಡಿದ ನರವಾಣೆ ಅವರು, ಎರಡೂ ದೇಶಗಳಿಂದ ಎದುರಾಗುವ ಸಮಸ್ಯೆಗಳು ಸಂಪೂರ್ಣ ಭಿನ್ನವಾಗಿವೆ ಎಂದು ಹೇಳಿದರು.
“ಪಾಕಿಸ್ತಾನ ಮತ್ತು ಚೀನಾ ಸಂಪೂರ್ಣ ವಿಭಿನ್ನ ವಿಚಾರ. ನಾವು ಎರಡೂ ದೇಶಗಳೊಂದಿಗೆ ಯುದ್ಧಗಳನ್ನು ನಡೆಸಿದ್ದೇವೆ. ನಮ್ಮ ಗಡಿಗಳು ಇನ್ನೂ ಇತ್ಯರ್ಥವಾಗದೆ ಉಳಿದಿವೆ. ಹೀಗಾಗಿ ಎರಡೂ ದೇಶಗಳು ಸದಾ ನಮ್ಮ ನಿಗಾದಲ್ಲಿರುವ ಬೆದರಿಕೆ ಮತ್ತು ಸವಾಲುಗಳಾಗಿರುತ್ತವೆ ಎಂದು ತಿಳಿಸಿದರು.
ಚೀನಾ ಶತ್ರುವಲ್ಲ, ನಮ್ಮ ಪ್ರಮುಖ್ಯ ಸ್ಪರ್ಧಿ
ಪಾಕಿಸ್ತಾನದ ನಿರಂತರ ಭಯೋತ್ಪಾದಕ ಬೆಂಬಲದಿಂದಾಗಿ ಭಾರತದ ತಕ್ಷಣದ ಗಮನ ಪಶ್ಚಿಮ ಗಡಿಯತ್ತ ಕೇಂದ್ರೀಕೃತವಾಗಿದೆ. ಆದರೆ, ಮುಂದಿನ ವರ್ಷಗಳಲ್ಲಿ ಚೀನಾ ಭಾರತದ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂದು ನರವಾಣೆ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದೊಂದಿಗೆ ನಾವು ಹಲವು ಪ್ರಮುಖ ಯುದ್ಧಗಳನ್ನು ನಡೆಸಿದ್ದೇವೆ. ಅಲ್ಲದೆ, ಅವರ ನಿರಂತರ ಭಯೋತ್ಪಾದಕ ಬೆಂಬಲದಿಂದಾಗಿ ನಮ್ಮ ಗಮನ ಪಶ್ಚಿಮ ಗಡಿಯತ್ತ ಇದೆ. ಆದರೆ ದೀರ್ಘಾವಧಿಯಲ್ಲಿ ಮತ್ತು ಮುಂದಿನ ವರ್ಷಗಳಲ್ಲಿ ಚೀನಾವೇ ನಮ್ಮ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂಬುದು ಸ್ಪಷ್ಟ ಎಂದು ಹೇಳಿದರು.
ಆದರೆ, ಚೀನಾವನ್ನು ಉದ್ದೇಶಪೂರ್ವಕವಾಗಿ ‘ಶತ್ರು’ ಎನ್ನುವ ಬದಲು ‘ಪ್ರತಿಸ್ಪರ್ಧಿ’ ಎಂಬ ಪದವನ್ನು ಬಳಸುತ್ತಿರುವುದಾಗಿ ತಿಳಿಸಿದರು.
ರಾಜಕೀಯ, ಆರ್ಥಿಕತೆ, ವ್ಯಾಪಾರ ಮತ್ತು ಸೇನಾ ಕ್ಷೇತ್ರ ಸೇರಿದಂತೆ ಹಲವು ಪ್ರಮುಖ ವಲಯಗಳಲ್ಲಿ ಚೀನಾ ಭಾರತದ ಪ್ರತಿಸ್ಪರ್ಧಿಯಾಗಲಿದೆ. “ಎಲ್ಲಿ ಸ್ಪರ್ಧೆ ಇರುತ್ತದೆಯೋ, ಅಲ್ಲಿ ಸ್ವಲ್ಪಮಟ್ಟಿನ ಸಂಘರ್ಷವೂ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಘರ್ಷಕ್ಕೆ ಮಾತುಕತೆಯೇ ಪರಿಹಾರ
ಇದೇ ವೇಳೆ ಭಾರತದ ದೀರ್ಘಕಾಲದ ನೀತಿಯಂತೆ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಬೇಕು. ಸಮಸ್ಯೆಗಳನ್ನು ಪರಿಹರಿಸಲು ಬಲಪ್ರಯೋಗವನ್ನು ಕೊನೆಯ ಆಯ್ಕೆಯಾಗಿ ಮಾತ್ರ ಬಳಸಬೇಕು ಎಂದು ಒತ್ತಿ ಹೇಳಿದರು.
ಆದರೆ, ಯಾವುದೇ ಸಂಭಾವ್ಯ ದುಸ್ಸಾಹಸವನ್ನು ತಡೆಯಲು ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಸದಾ ಸನ್ನದ್ಧವಾಗಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಮಾತುಕತೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ಸ್ಪಷ್ಟವಾಗುವ ಒಂದು ಹಂತ ಬರುತ್ತದೆ. ಅಂತಹ ಸಂದರ್ಭದಲ್ಲಿ ಬಲವಾದ ತಡೆ ಸಾಮರ್ಥ್ಯವನ್ನು ಹೊಂದಿರುವುದು ಅಗತ್ಯ ಎಂದು ತಿಳಿಸಿದರು.
ಭಾರತೀಯ ಸೇನೆ ಯಾವುದೇ ಸಂದರ್ಭದಲ್ಲೂ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದೂ ತಿಳಿಸಿದರು. ಇದೇ ವೇಳೆ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳುವ ಅಗತ್ಯವನ್ನೂ ಒತ್ತಿ ಹೇಳಿದರು.
ನಿಜ ಜೀವನದಲ್ಲೂ, ಭೌಗೋಳಿಕ ರಾಜಕೀಯದಲ್ಲೂ ನೆರೆಹೊರೆಯವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿರುವ ಪರಿಸ್ಥಿತಿಯಲ್ಲೇ ಉತ್ತಮವಾದುದನ್ನು ಸಾಧಿಸಬೇಕು ಎಂದು ಹೇಳಿದರು.