

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೋಮವಾರ ರಾಜ್ಯದ 1.34 ಕೋಟಿ ಕುಟುಂಬಗಳಿಗೆ ಪ್ರತಿವರ್ಷ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ.
ಇದರ ಜೊತೆಗೆ, ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಇನ್ನು ಮುಂದೆ ಜಿಲ್ಲೆಗಳ ನಡುವೆ ಸಂಚರಿಸುವ ಸಾಮಾನ್ಯ ಬಸ್‌ಗಳ ಜೊತೆಗೆ ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ‘ವೆಟ್ರಿ ಪಯಣಂ ತಿಟ್ಟಂ’ ಹೆಸರಿನ ಈ ಯೋಜನೆ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ.
ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಘೋಷಣೆಗಳನ್ನು ಮಾಡಿದ ಸಿಎಂ ವಿಜಯ್ ಅವರು, ಪ್ರಸ್ತಾವಿತ ಪರಂದೂರು ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು. ಯೋಜನೆಗೆ ಪರ್ಯಾಯ ಸ್ಥಳವನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ಪರಂದೂರಿಗೆ ಭೇಟಿ ನೀಡಿದ್ದ ವಿಜಯ್, ವಿಮಾನ ನಿಲ್ದಾಣ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಏಕನಾಪುರಂ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾಗಿ ಹೇಳಿದರು. “ಪರ್ಯಾಯ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
1.34 ಕೋಟಿ ಕುಟುಂಬಗಳಿಗೆ ವರ್ಷಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್
ಉಚಿತ ಎಲ್‌ಪಿಜಿ ಸಿಲಿಂಡರ್ ಯೋಜನೆಯಿಂದ ಸುಮಾರು 1.34 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.
ವಾರ್ಷಿಕ ರೂ.2.5 ಲಕ್ಷದವರೆಗೆ ಆದಾಯ ಹೊಂದಿರುವ ಕುಟುಂಬಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಇತರ ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. ಈ ಯೋಜನೆಗೆ ಪ್ರತಿ ವರ್ಷ ರೂ. 4,000 ಕೋಟಿಗೂ ಅಧಿಕ ವೆಚ್ಚವಾಗಲಿದೆ. ಅರ್ಹ ಫಲಾನುಭವಿಗಳಿಗೆ ಮೂರು ಸಿಲಿಂಡರ್‌ಗಳ ವೆಚ್ಚವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ಮಹಿಳೆಯರು ಸಾಮಾನ್ಯ ಬಸ್‌ಗಳಲ್ಲಿ 40 ಕಿ.ಮೀ.ವರೆಗೆ ಮಾತ್ರ ಉಚಿತವಾಗಿ ಪ್ರಯಾಣಿಸಬಹುದಾಗಿತ್ತು. ಹೊಸ ಯೋಜನೆಯಡಿ ಪ್ರಯಾಣಿಸುವ ದೂರಕ್ಕೆ ಯಾವುದೇ ಮಿತಿ ಇರುವುದಿಲ್ಲ ಎಂದು ವಿಜಯ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಉಚಿತ ಪ್ರಯಾಣ ಪಡೆಯುವ ಪ್ರಯಾಣಗಳ ಸಂಖ್ಯೆಯ ಮೇಲೂ ಯಾವುದೇ ನಿರ್ಬಂಧ ಇರುವುದಿಲ್ಲ. ಆದಾಯದ ಮಿತಿಯನ್ನೂ ವಿಧಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಗಳ ನಡುವೆ ಸಂಚರಿಸುವ ಮೊಫಸ್ಸಿಲ್ ಬಸ್‌ಗಳು, ಚೆನ್ನೈನ ಎಂಟಿಸಿ ಹಾಗೂ ಮದುರೈ, ಕೊಯಮತ್ತೂರು, ತಿರುಚಿ ಸೇರಿದಂತೆ ಇತರ ನಗರಗಳ ಸಾರಿಗೆ ನಿಗಮಗಳ ಎಕ್ಸ್‌ಪ್ರೆಸ್ ಮತ್ತು ಡಿಲಕ್ಸ್ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ದೊರೆಯಲಿದೆ.
27,400 ಕೋಟಿ ರೂ. ಪರಂದೂರು ವಿಮಾನ ನಿಲ್ದಾಣ ಯೋಜನೆಗೆ ಬ್ರೇಕ್
ಪರಂದೂರು ವಿಮಾನ ನಿಲ್ದಾಣವನ್ನು 5,746 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಯೋಜಿಸಲಾಗಿತ್ತು. ಈ ಪೈಕಿ ಸುಮಾರು 2,500 ಎಕರೆ ಖಾಸಗಿ ಭೂಮಿಯಾಗಿದ್ದು, ಉಳಿದ ಭೂಮಿ ಲೋಕೋಪಯೋಗಿ, ಹೆದ್ದಾರಿ, ಗ್ರಾಮೀಣಾಭಿವೃದ್ಧಿ, ಕಂದಾಯ, ಅರಣ್ಯ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗೆ ಸೇರಿದೆ.
ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಪರಂದೂರು ಮತ್ತು ಕಾಂಚೀಪುರಂ ತಾಲೂಕುಗಳ 12 ಗ್ರಾಮಗಳಿಂದ ಒಟ್ಟು 1,700 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಒಂದು ಸಾವಿರ ದಿನಗಳಿಗೂ ಹೆಚ್ಚು ಕಾಲ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಏಕನಾಪುರಂ ಗ್ರಾಮವನ್ನು ಭೂಸ್ವಾಧೀನದಿಂದ ಹೊರಗಿಡಲಾಗಿತ್ತು.