

ಪಾಲ್ಘರ್ (ಮಹಾರಾಷ್ಟ್ರ): ಮತಾಂತರ ಅನ್ನೋದು ಭಾರತದ ಸಂವಿಧಾನ ಕೊಟ್ಟಿರೊ ಹಕ್ಕು. ಅದರಂತೆ, ಯಾರು ಯಾವುದೇ ಧರ್ಮಕ್ಕಾದರೂ ಮತಾಂತರವಾಗಬಹುದು ಅಥವಾ ಪಾಲಿಸಬಹುದು; ಆದರೆ, ಇದನ್ನೇ ಅಕ್ರಮವಾಗಿ ಬಳಸಿಕೊಳ್ಳುವ ಕೆಲವರು, ಸಮಾಜದಲ್ಲಿ ಬಲವಂತದ ಹಾಗೂ ಆಮಿಷದ ಮತಾಂತರಕ್ಕೆ ಮುಂದಾಗುತ್ತಾರೆ. ಇದು ಅಪರಾಧ ಅಂತ ಗೊತ್ತಿದ್ದರೂ ಕೂಡ ಇದನ್ನು ಯಾವುದೇ ಎದರಿಕೆ ಇಲ್ಲದೆ ಮಾಡುತ್ತಾರೆ, ಹೀಗೆಯೇ, ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಬರೋಬ್ಬರಿ 22 ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಷ್ಟಕ್ಕೂ ಆ ದಿನ ಆ ಗ್ರಾಮದಲ್ಲಿ ನಡೆದದ್ದೇನು, ಈ ವಿವಾದದ ಹಿಂದಿರುವ ಸತ್ಯಾಸತ್ಯತೆಗಳೇನು ಎಂಬ ವರದಿ ಇಲ್ಲಿದೆ:
ಏನಿದು ಘಟನೆ?
ಆಗಸ್ಟ್ 21ರ ಶುಕ್ರವಾರ ಮಧ್ಯಾಹ್ನ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮೊಖಾಡಾ ತಾಲೂಕಿನ ವಾಕಡ್‌ಪಾಡಾ ಗ್ರಾಮದಲ್ಲಿ, 18 ವರ್ಷದ ಯುವಕನ ಮನೆಗೆ ಮಹಿಳೆಯರ ಗುಂಪೊಂದು ಭೇಟಿ ನೀಡಿತ್ತು. ಅವರಲ್ಲಿದ್ದ ಪ್ರಮುಖ ಮಹಿಳೆಯೊಬ್ಬರು ಯುವಕನಿಗೆ ನ್ಯೂ ಟೆಸ್ಟಮೆಂಟ್' (New Testament) ಸೇರಿದಂತೆ ಕೆಲವು ಕ್ರಿಶ್ಚಿಯನ್ ಧಾರ್ಮಿಕ ಪುಸ್ತಕಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದರು. ಈ ಧಾರ್ಮಿಕ ಪುಸ್ತಕಗಳನ್ನು ಓದುವುದರಿಂದ ಆತನ ಅನಾರೋಗ್ಯ ಮತ್ತು ಎಲ್ಲಾ ರೀತಿಯ ದೈಹಿಕ ಸಮಸ್ಯೆಗಳು ಸಂಪೂರ್ಣವಾಗಿ ಗುಣವಾಗುತ್ತವೆ ಎಂದು ನಂಬಿಸಲು ಯತ್ನಿಸಿದ್ದಾರೆ.
ಇದೇ ವೇಳೆ, ಆ ವಿದ್ಯಾರ್ಥಿಯು ಅವರು ನೀಡಿದ ಪುಸ್ತಕಗಳನ್ನು ಸ್ವೀಕರಿಸಲು ನಿರಾಕರಿಸಿದಾಗ, ಆರೋಪಿ ಮಹಿಳೆಯರು ಹಿಂದೂ ದೇವತೆಗಳು ಮತ್ತು ಧಾರ್ಮಿಕ ನಂಬಿಕೆಗಳ ವಿರುದ್ಧ ನಿಂದನಾತ್ಮಕ ಮಾತುಗಳನ್ನಾಡಿದರು ಎನ್ನಲಾಗಿದೆ. ಅಲ್ಲದೆ, ಹಿಂದೂ ದೇವರ ಪೂಜೆ ನಿಲ್ಲಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದರು ಎಂದು ದೂಷಿಸಲಾಗಿದೆ. ಇನ್ನು, ವಿದ್ಯಾರ್ಥಿಯು ಈ ವಿಷಯವನ್ನು ತಕ್ಷಣವೇ ಸ್ಥಳೀಯ ಗ್ರಾಮಸ್ಥರಿಗೆ ತಿಳಿಸಿದಾಗ, ಸಾರ್ವಜನಿಕರು ಒಟ್ಟಾಗಿ ಆ ಮಹಿಳೆಯರ ಗುಂಪನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಮುಂದುವರೆದು, ಪೊಲೀಸರು ಗುರುತಿಸಿರುವಂತೆ ಥಾಣೆ ಜಿಲ್ಲೆಯ ಉಲ್ಹಾಸನಗರದ ನಿವಾಸಿ ಸತ್ಯವತಿ ಬಾಲಕೃಷ್ಣ ಕುಂಚೆ (46) ಮತ್ತು ಸ್ಥಳೀಯ ನಿವಾಸಿ ಕುಸುಮ್ ಶಿವರಾಮ್ ಕಾಂಬ್ಡಿ ಈ ಪ್ರಕರಣದ ಪ್ರಮುಖ ಇಬ್ಬರು ಸಂಶಯಾಸ್ಪದ ಆರೋಪಿಗಳಾಗಿದ್ದು, ಧಾರ್ಮಿಕ ಚಟುವಟಿಕೆಯ ಕಾರಣದಿಂದ ಕೆಲವು ಮಹಿಳೆಯರು ಹೈದರಾಬಾದ್‌ನಿಂದ ಬಂದಿದ್ದರು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಸದ್ಯ ಮೊಖಾಡಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಅಜಿತ್ ಸಾಬ್ಳೆ ನೀಡಿರುವ ಮಾಹಿತಿಯಂತೆ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS)ಯ ಸೆಕ್ಷನ್ 299 ( ಉದ್ದೇಶಪೂರ್ವಕವಾಗಿ ಮತ್ತೊಂದು ಧರ್ಮದ ಭಾವನೆಗಳನ್ನು ಕೆರಳಿಸುವುದು ಮತ್ತು ಅಪಮಾನ ಮಾಡುವುದು) ಹಾಗೂ ಸೆಕ್ಷನ್ 3(5) (ಸಾಮಾನ್ಯ ಉದ್ದೇಶದೊಂದಿಗೆ ಗುಂಪಾಗಿ ಅಪರಾಧ ಎಸಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸದ್ದಾರೆ.