

ಲಖನೌ: ಭೀಕರ ಪ್ರವಾಹದಿಂದ ನಲುಗಿದ್ದ ನೇಪಾಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.
ಅತ್ತ ನೇಪಾಳದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ನಾರಾಯಣಿ-ಗಂಡಕ್ ನದಿಯಲ್ಲಿ ನೀರಿನ ಮಟ್ಟ ನಿರಂತರವಾಗಿ ಏರುತ್ತಿದ್ದು, ನದಿಪಾತ್ರದ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ನೇಪಾಳದ ತ್ರಿಶೂಲಿ ನದಿಯಲ್ಲಿ ಹೆಚ್ಚಾದ ನೀರಿನ ಹರಿವು ಕೆಳಭಾಗಕ್ಕೆ ಹರಿದು ನಾರಾಯಣಿ ನದಿಯ ಮೂಲಕ ಗಂಡಕ್ ನದಿಯನ್ನು ಸೇರುತ್ತಿದ್ದು, ಇದರ ಪರಿಣಾಮ ವಾಲ್ಮೀಕಿನಗರ ಗಂಡಕ್ ಬ್ಯಾರೇಜ್‌ನಿಂದ ಹೊರಬಿಡಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ತೀವ್ರ ಏರಿಕೆಯಾಗಿದೆ.
12 ಗಂಟೆಗಳಲ್ಲಿ 50 ಸಾವಿರ ಕ್ಯೂಸೆಕ್ ನೀರು ಶೇಖರಣೆ
ಅಧಿಕಾರಿಗಳ ಪ್ರಕಾರ, ಶನಿವಾರ ಸಂಜೆ 6 ಗಂಟೆಗೆ ಬ್ಯಾರೇಜ್‌ನಲ್ಲಿ 99,800 ಕ್ಯೂಸೆಕ್ ನೀರಿನ ಹರಿವು ದಾಖಲಾಗಿತ್ತು. ಭಾನುವಾರ ಬೆಳಗ್ಗೆ 10 ಗಂಟೆಗೆ ಇದು 1,25,000 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ನೀರಿನ ಹರಿವು ಮತ್ತಷ್ಟು ಹೆಚ್ಚಾಗಿ 1,47,500 ಕ್ಯೂಸೆಕ್‌ಗೆ ತಲುಪಿದೆ.
ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ನದಿಯ ದಡಗಳ ಮೇಲಿನ ಒತ್ತಡವೂ ಹೆಚ್ಚಾಗಿದೆ. ನಿಚ್ಲೌಲ್ ತಹಸಿಲ್‌ನ ಪಥಲ್ಹವಾ ಮತ್ತು ತೆಲ್ಪಾಲ್ ಪ್ರದೇಶಗಳ ಸಮೀಪ ನಾರಾಯಣಿ-ಗಂಡಕ್ ನದಿ ಉಕ್ಕಿ ಹರಿಯುತ್ತಿದೆ. ನದಿಯಂಚಿನ ಗ್ರಾಮಗಳ ನಿವಾಸಿಗಳು ನೀರಿನ ಮಟ್ಟ ವೇಗವಾಗಿ ಏರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ ಸೋಹ್ಗಿಬರ್ವಾ ಪ್ರದೇಶದ ರೋಹುವಾ ಚರಂಡಿಯೂ ಉಕ್ಕಿ ಹರಿಯುತ್ತಿದ್ದು, ಭೋಥಹಾ ಜನವಸತಿ ಪ್ರದೇಶದತ್ತ ನೀರಿನ ಒತ್ತಡ ಹೆಚ್ಚಾಗಿದೆ. ಇದರಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಮತ್ತಷ್ಟು ಹೆಚ್ಚಾಗಿದೆ.
ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚರಿಕೆ ಘೋಷಿಸಿದ್ದು, ಪರಿಹಾರ ಮತ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ನದಿ ಹಾಗೂ ಸುತ್ತಮುತ್ತಲಿನ ಇತರ ಜಲಮೂಲಗಳ ನೀರಿನ ಮಟ್ಟವನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ನೇಪಾಳದಲ್ಲಿ ಮಳೆಯ ಪ್ರಮಾಣ ಮತ್ತು ನದಿಗಳ ನೀರಿನ ಹರಿವಿನ ಮೇಲೆ ನಿಗಾ ಇಡಲಾಗಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ತಕ್ಷಣ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.