

ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ, ನೈಋತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ (LTT) ಮಾರ್ಚ್ 1 ರಂದು ಒನ್ ವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ.
ರೈಲು ಸಂಖ್ಯೆ 06541 ಎಸ್‌ಎಂವಿಟಿ ಬೆಂಗಳೂರು-ಎಲ್.ಟಿ.ಟಿ ಏಕಮುಖ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲು ಭಾನುವಾರ (ಮಾರ್ಚ್ 1) ಸಂಜೆ 7 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಹೊರಡಲಿದೆ. ಇದು ಮರುದಿನ (ಸೋಮವಾರ) ರಾತ್ರಿ 11.30 ಗಂಟೆಗೆ ಮುಂಬೈನ ಎಲ್‌ಟಿಟಿ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಎಲ್ಲೆಲ್ಲಿ ನಿಲುಗಡೆಯಾಗಲಿದೆ?
ಈ ರೈಲು ಮಾರ್ಗಮಧ್ಯೆ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ಲೋನಾವಾಲಾ ಹಾಗೂ ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲಿನಲ್ಲಿ ಒಟ್ಟು 19 ಬೋಗಿಗಳಿರಲಿವೆ. ಇವುಗಳಲ್ಲಿ 15 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಎಸ್‌ಎಲ್‌ಆರ್ ಬೋಗಿಗಳು ಇರಲಿವೆ. ವಿಶೇಷವೆಂದರೆ, ರೈಲಿನಲ್ಲಿರುವ 2 ಎಸಿ ಬೋಗಿಗಳು ಲಾಕ್ ಮಾಡಿದ (ಬೀಗ ಹಾಕಿದ) ಸ್ಥಿತಿಯಲ್ಲಿರಲಿದ್ದು, ಪ್ರಯಾಣಿಕರ ಬಳಕೆಗೆ ಲಭ್ಯವಿರುವುದಿಲ್ಲ.
ಇದು ಸಂಪೂರ್ಣ ಕಾಯ್ದಿರಿಸದ (Unreserved) ರೈಲಾಗಿದ್ದು, ಪ್ರಯಾಣಿಕರು 'ರೈಲ್ಒನ್' ಆ್ಯಪ್ ಮೂಲಕ ಅಥವಾ ನಿಲ್ದಾಣದ ಕೌಂಟರ್‌ಗಳಲ್ಲಿ ಟಿಕೆಟ್ ಪಡೆದು ಪ್ರಯಾಣಿಸಬಹುದು.
Advertisement