

ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಸೀಸನ್‌ನಿಂದ ಬಿಡುಗಡೆ ಮಾಡಿರುವುದು ಕ್ರಿಕೆಟ್ ಜಗತ್ತಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈಗ ಟಿ20 ವಿಶ್ವಕಪ್‌ನ ವೇಳಾಪಟ್ಟಿಯನ್ನು ಬದಲಿಸಬೇಕಾಗಬಹುದು ಎಂದು ವರದಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸೂಚನೆಯ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡಿರುವುದನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ 'ಅನಗತ್ಯ ರಾಜಕೀಯೀಕರಣ' ಎಂದು ಕರೆದಿದ್ದಾರೆ.
'ಇದು ಬಿಸಿಸಿಐನ ಸಂಪೂರ್ಣ ಭಯಾನಕ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಇದು ಕ್ರೀಡಾ ವಿಷಯದ ಅನಗತ್ಯ ರಾಜಕೀಯೀಕರಣವಾಗಿದೆ. ಮತ್ತು ನಾನು ಆಕ್ಷೇಪಿಸುವ ವಿವಿಧ ಅಂಶಗಳಿವೆ' ಎಂದು ಅವರು ಹೇಳಿದರು.
'ಕ್ರಿಕೆಟ್ ದೃಷ್ಟಿಕೋನದಿಂದ, ಈ ನಿರ್ಧಾರವು ಅರ್ಥಹೀನವಾಗಿದೆ. ಏಕೆಂದರೆ, ತಂಡಗಳು ಬಿಸಿಸಿಐ ನೋಂದಾಯಿಸಿದ ಆಟಗಾರರ ಪೂರ್ವ-ಅನುಮೋದಿತ ಪಟ್ಟಿಯಿಂದಲೇ ಆಟಗಾರರನ್ನು ಆಯ್ಕೆ ಮಾಡಬೇಕಾಗಿತ್ತು. ಒಬ್ಬ ಆಟಗಾರನು ಪೂಲ್‌ನಲ್ಲಿದ್ದಾಗ, ಆ ಗುಂಪಿನಿಂದಲೇ ಯಾರನ್ನಾದರೂ ಆಯ್ಕೆ ಮಾಡಿದ್ದಕ್ಕೆ ಕೆಕೆಆರ್ ಅನ್ನು ಏಕೆ ದೂಷಿಸಬೇಕು?. ಬಿಸಿಸಿಐ ಸ್ವತಃ ಎಲ್ಲ ತಂಡಗಳಿಗೆ ಅರ್ಹ ಆಟಗಾರ ಎಂದು ಆಯ್ಕೆ ಮಾಡಿದ ವ್ಯಕ್ತಿಯನ್ನು ತಂಡ ಆಯ್ಕೆ ಮಾಡಿದಾಗ ಅದಕ್ಕೆ ಆಕ್ಷೇಪಿಸುವುದರಲ್ಲಿ ಅರ್ಥವಿಲ್ಲ' ಎಂದು ತರೂರ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಬಿಸಿಸಿಐ ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಭಿನ್ನಾಭಿಪ್ರಾಯದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧಗಳ ಸ್ವರೂಪದಿಂದಾಗಿ, ಎರಡೂ ದೇಶಗಳ ಕ್ರಿಕೆಟ್ ತಂಡಗಳು ದ್ವಿಪಕ್ಷೀಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ವಾಸ್ತವವಾಗಿ, ಪಾಕಿಸ್ತಾನಿ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆದಾಗ್ಯೂ, ಬಾಂಗ್ಲಾದೇಶ ಕ್ರಿಕೆಟಿಗರಿಗೂ ಇಂತಹ ಪೂರ್ವನಿದರ್ಶನ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಶಶಿ ತರೂರ್ ನಿರಾಶೆ ವ್ಯಕ್ತಪಡಿಸಿದರು.
'ಬಾಂಗ್ಲಾದೇಶ ಪಾಕಿಸ್ತಾನವಲ್ಲ. ಬಾಂಗ್ಲಾದೇಶ ಗಡಿಯಾಚೆಯಿಂದ ಭಯೋತ್ಪಾದಕರನ್ನು ರವಾನಿಸುತ್ತಿಲ್ಲ. ಇದು ಹೋಲಿಸಬಹುದಾದ ಪರಿಸ್ಥಿತಿಯಲ್ಲ. ಇದಲ್ಲದೆ, ಎರಡೂ ದೇಶಗಳೊಂದಿಗಿನ ನಮ್ಮ ಸಂಬಂಧವೂ ವಿಭಿನ್ನವಾಗಿದೆ. ಬಾಂಗ್ಲಾದೇಶದೊಂದಿಗಿನ ನಮ್ಮ ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಂತವು ಪಾಕಿಸ್ತಾನದೊಂದಿಗಿನಂತೆಯೇ ಇಲ್ಲ. ಎರಡರ ನಡುವೆ ನೀವು ಸರಳ ಸಮೀಕರಣವನ್ನು ಮಾಡಲು ಸಾಧ್ಯವಿಲ್ಲ' ಎಂದರು.
ಒಂದು ವೇಳೆ ಬಾಂಗ್ಲಾದೇಶದ ಹಿಂದೂ ಆಟಗಾರರಾದ ಲಿಟ್ಟನ್ ದಾಸ್ ಮತ್ತು ಸೌಮ್ಯ ಸರ್ಕಾರ್ ಅವರನ್ನು ಹರಾಜಿನಲ್ಲಿ ಖರೀದಿಸಿದ್ದರೆ, ಆಗಲೂ ಐಪಿಎಲ್‌ನಿಂದ ಅವರನ್ನು ಬಿಡುಗಡೆ ಮಾಡಲಾಗುತ್ತಿತ್ತೇ ಎಂದು ಬಿಸಿಸಿಐ ಅನ್ನು ಪ್ರಶ್ನಿಸಿದ್ದಾರೆ.
'ನನಗೆ ಒಂದು ನೈತಿಕ ಆಕ್ಷೇಪವೂ ಇದೆ: ಕ್ರೀಡೆ ಮತ್ತು ಕ್ರಿಕೆಟ್ ಮಾತ್ರ ಸಾಮಾಜಿಕ ಮಾಧ್ಯಮಗಳ ಆಕ್ರೋಶದ ಹೊರೆಯನ್ನು ಏಕೆ ಹೊರಬೇಕು? ನಾವು ಬಾಂಗ್ಲಾದೇಶದೊಂದಿಗೆ ವಿವಿಧ ಹಂತಗಳಲ್ಲಿ ಸಂವಹನ ನಡೆಸಲು ಇನ್ನೂ ಹಲವು ಮಾರ್ಗಗಳಿವೆ. ಆದರೆ, ಕ್ರಿಕೆಟ್ ಮೇಲೆ ಏಕೆ ಇದನ್ನು ಹೇರಲಾಗುತ್ತಿದೆ. ಒಬ್ಬ ನಿರ್ದಿಷ್ಟ ಆಟಗಾರ - ಅವರು ಎಂದಿಗೂ ದ್ವೇಷ ಭಾಷಣ ಮಾಡಿಲ್ಲ. ಭಾರತದ ವಿರುದ್ಧ ಅಥವಾ ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ವಿರುದ್ಧ ಎಂದಿಗೂ ಏನನ್ನೂ ಹೇಳಿಲ್ಲ. ಅವರು ಕೇವಲ ಒಬ್ಬ ಕ್ರೀಡಾಪಟು. ನಾವು ಇಲ್ಲಿ ಯಾರನ್ನು ಬಲಿಪಶು ಮಾಡುತ್ತಿದ್ದೇವೆ?' ಎಂದು ತರೂರ್ ಪ್ರಶ್ನಿಸಿದ್ದಾರೆ.
'ಸಾಮಾಜಿಕ ಮಾಧ್ಯಮಗಳಲ್ಲಿನ ಆಕ್ರೋಶದಿಂದಾಗಿ ಪ್ರತಿಯೊಬ್ಬ ಬಾಂಗ್ಲಾದೇಶಿ ಕ್ರಿಕೆಟಿಗನೂ ಭಾರತದಲ್ಲಿ ಆಡಲು ಅನರ್ಹ ಎಂದು ನಾವು ಈಗ ನಿರ್ಧರಿಸಿದ್ದರೆ, ಬಾಂಗ್ಲಾದೇಶದಲ್ಲಿ ಉತ್ತಮ ಆಟಗಾರರಾಗಿರುವ ಮತ್ತು ಹಿಂದೆ ಐಪಿಎಲ್‌ನಲ್ಲಿ ಆಡಿರುವ ಲಿಟ್ಟನ್ ದಾಸ್ ಅಥವಾ ಸೌಮ್ಯ ಸರ್ಕಾರ್‌ರಂತಹ ಬಾಂಗ್ಲಾದೇಶದ ಹಿಂದೂ ಕ್ರಿಕೆಟಿಗರನ್ನು ಈ ವರ್ಷ ಆಯ್ಕೆ ಮಾಡಿದ್ದರೆ ಏನಾಗುತ್ತಿತ್ತು? ಅವರನ್ನೂ ಹೊರಹಾಕಲಾಗುತ್ತಿತ್ತೇ? ಇಲ್ಲದಿದ್ದರೆ, ನಾವು ಏನನ್ನು ಸೂಚಿಸುತ್ತಿದ್ದೇವೆ? ನಾವು ಮುಸ್ಲಿಂ ಬಾಂಗ್ಲಾದೇಶಿಯರನ್ನು ಮಾತ್ರ ವಿರೋಧಿಸುತ್ತೇವೆ, ಹಿಂದೂ ಬಾಂಗ್ಲಾದೇಶಿಯರನ್ನು ವಿರೋಧಿಸುವುದಿಲ್ಲ ಎಂಬಷ್ಟು ಅಸಹಿಷ್ಣು ದೇಶವಾಗಿದೆಯೇ?' ಎಂದು ಪ್ರಶ್ನಿಸಿದರು.
'ಈ ಸಂಪೂರ್ಣ ವಿಷಯವನ್ನು ಈ ರೀತಿಯಾಗಿ ಯೋಚಿಸಿ ಮಾಡಿಲ್ಲ, ಬಹುಶಃ ಸಾಮಾಜಿಕ ಮಾಧ್ಯಮದ ಆಕ್ರೋಶಕ್ಕೆ ಪ್ರತಿಕ್ರಿಯೆಯಾಗಿ ಈ ರೀತಿ ಮಾಡಲಾಗಿದೆ. ಇದು ಸಂಪೂರ್ಣವಾಗಿ ಅಸಂಬದ್ಧವೆಂದು ನಾನು ಭಾವಿಸುತ್ತೇನೆ. ನನ್ನ ಅಭಿಪ್ರಾಯದಲ್ಲಿ, ಇದು ನಮ್ಮನ್ನು ಒಂದು ರಾಷ್ಟ್ರವಾಗಿ ಅವಮಾನಿಸುತ್ತದೆ. ಇದು ನಮ್ಮ ರಾಜತಾಂತ್ರಿಕತೆಯನ್ನು ಅವಮಾನಿಸುತ್ತದೆ. ಇದು ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಅವಮಾನಿಸುತ್ತದೆ. ವಿಶಾಲ ಮನಸ್ಸು ಮತ್ತು ವಿಶಾಲ ಹೃದಯವನ್ನು ಹೊಂದಿರುವ ರಾಷ್ಟ್ರವಾಗಿ ನಮ್ಮ ಸಂಸ್ಕೃತಿಯನ್ನು ಅವಮಾನಿಸುತ್ತದೆ, ಈ ವಿಷಯಗಳನ್ನು ವಿಶಾಲ ಮನೋಭಾವದಿಂದ ನೋಡುವಷ್ಟು ದೊಡ್ಡದು ನಮ್ಮ ದೇಶ' ಎಂದು ಅವರು ಹೇಳಿದರು.
Advertisement