

ನವದೆಹಲಿ: ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶದ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಬೆದರಿಕೆ ಭಾರತದ ಮೇಲೆ ಕನಿಷ್ಠ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇರಾನ್ ನಲ್ಲಿ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮುಂದುವರೆದಂತೆ, ಇರಾನ್ ಜೊತೆ ವ್ಯಾಪಾರ ಹೊಂದಿರುವ ದೇಶಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸಲಾಗುವುದು, ಅದು ತಕ್ಷಣವೇ ಜಾರಿಗೆ ಬರಲಿದೆ ಎಂದು ಟ್ರಂಪ್ ತಿಳಿಸಿದ್ದರು.
ಇರಾನ್ ನಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 2,000 ಕ್ಕಿಂತಲೂ ಹೆಚ್ಚಾಗಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವು ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಮಾಡುವ ಯಾವುದೇ ಮತ್ತು ಎಲ್ಲಾ ವ್ಯವಹಾರಗಳ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ಪಾವತಿಸುತ್ತದೆ. ಈ ಆದೇಶ ಅಂತಿಮ ಮತ್ತು ನಿರ್ಣಾಯಕವಾಗಿದೆ ಎಂದು ನಿನ್ನೆ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.
ಟ್ರಂಪ್ ಆಡಳಿತದ ಸುಂಕದ ಅನುಷ್ಠಾನದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ.
ಭಾರತದ ಮೇಲೆ ಏನು ಪರಿಣಾಮ?
ಕಳೆದ ಆಗಸ್ಟ್‌ನಲ್ಲಿ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿದ್ದರು. ಇದರಲ್ಲಿ ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದಕ್ಕೆ ಶೇ. 25 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿತು.
ಭಾರತವು ಹೊಸ ಸುಂಕ ಆಡಳಿತದ ಅಡಿಯಲ್ಲಿ ಬಂದರೆ, ಭಾರತೀಯ ಸರಕುಗಳ ಮೇಲಿನ ಸುಂಕಗಳು ಶೇ. 50 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಭಾರತಕ್ಕೆ ಸಂಬಂಧಿಸಿದಂತೆ, ಇರಾನ್ ಅಗ್ರ 50 ಜಾಗತಿಕ ವ್ಯಾಪಾರ ಪಾಲುದಾರರಲ್ಲಿ ಸ್ಥಾನ ಪಡೆದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಅಮೆರಿಕದ ವ್ಯಾಪಾರ ಪಾಲೆಷ್ಟು?
ಕಳೆದ ವರ್ಷ, ಇರಾನ್ ಜೊತೆಗಿನ ಭಾರತದ ವ್ಯಾಪಾರವು 1.6 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಇದು ಭಾರತದ ಒಟ್ಟು ವ್ಯಾಪಾರದ ಸರಿಸುಮಾರು ಶೇಕಡಾ 0.15 ರಷ್ಟಿದೆ ಎಂದು ಅವರು ಹೇಳಿದರು.
ಬಾಹ್ಯ ಆರ್ಥಿಕ ಅಂಶಗಳಿಂದಾಗಿ ಇರಾನ್ ಜೊತೆಗಿನ ಭಾರತದ ವ್ಯಾಪಾರ ಮೌಲ್ಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮತ್ತಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಇರಾನ್ ಜೊತೆಗಿನ ಭಾರತದ ಪ್ರಸ್ತುತ ವ್ಯಾಪಾರವು ಕನಿಷ್ಠವಾಗಿದೆ, ಇದು ಪ್ರಾಥಮಿಕವಾಗಿ ಆಹಾರ ವಸ್ತುಗಳು ಮತ್ತು ಔಷಧಗಳನ್ನು ಒಳಗೊಂಡಿದೆ.
ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ವಿಧಿಸಿದ್ದ ನಿರ್ಬಂಧಗಳಿಂದಾಗಿ ಭಾರತವು ಮೇ 2019 ರಲ್ಲಿ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತು.
ಇರಾನ್ ನ ವ್ಯಾಪಾರ ಪಾಲು ಎಷ್ಟು?
2024 ರಲ್ಲಿ ಇರಾನ್‌ನ ಒಟ್ಟು ಆಮದುಗಳು ಸುಮಾರು 68 ಬಿಲಿಯನ್ ಯುಎಸ್ ಡಾಲರ್‌ಗಳಷ್ಟಿದ್ದವು. ದೇಶದ ಪ್ರಮುಖ ಆಮದು ಪಾಲುದಾರರು ಯುಎಇ (ಯುಎಸ್ ಡಾಲರ್ 21 ಬಿಲಿಯನ್ ಅಥವಾ ಇರಾನ್ ನ ಆಮದುಗಳಲ್ಲಿ ಶೇಕಡಾ 30ರಷ್ಟು), ಚೀನಾ (ಯುಎಸ್ ಡಾಲರ್ 17 ಬಿಲಿಯನ್ ಅಥವಾ ಶೇಕಡಾ 26), ಟರ್ಕಿ (ಯುಎಸ್ ಡಾಲರ್ 11 ಬಿಲಿಯನ್ ಅಥವಾ ಶೇಕಡಾ 16), ಮತ್ತು ಐರೋಪ್ಯ ಒಕ್ಕೂಟ (ಯುಎಸ್ ಡಾಲರ್ 6 ಬಿಲಿಯನ್ ಅಥವಾ ಶೇಕಡಾ 9).
ಇರಾನ್‌ನ ಚಬಹಾರ್ ಬಂದರು ಯೋಜನೆಯಲ್ಲಿ ಭಾರತವು ಅಭಿವೃದ್ಧಿ ಪಾಲುದಾರ ದೇಶವಾಗಿದೆ. ಬಂದರಿನಲ್ಲಿ ಟರ್ಮಿನಲ್ ಅಭಿವೃದ್ಧಿ ಕುರಿತು ಎರಡೂ ದೇಶಗಳು 10 ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿವೆ.
ಡೊನಾಲ್ಡ್ ಟ್ರಂಪ್ ಆಡಳಿತವು ಚಬಹಾರ್ ಬಂದರಿಗೆ ಅಕ್ಟೋಬರ್ 2024 ರಿಂದ ಅನ್ವಯವಾಗುವ ಅಮೆರಿಕದ ನಿರ್ಬಂಧಗಳಿಂದ ಆರು ತಿಂಗಳ ವಿನಾಯಿತಿಯನ್ನು ನೀಡಿತು.
Advertisement