ಇಲಾಖೆಗಳ ನಡುವಿನ ತಡೆಗೋಡೆ ಒಡೆಯಿರಿ, ಒಂದೇ ತಂಡವಾಗಿ ಕೆಲಸ ಮಾಡಿ: ಕೇಂದ್ರ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಖಡಕ್ ಸೂಚನೆ..!

ಸಭೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕಾರ್ಯದರ್ಶಿಯೂ ತಮ್ಮ ಇಲಾಖೆಯ ಕಾರ್ಯಚಟುವಟಿಕೆಗಳು, ಸುಧಾರಣಾ ಕ್ರಮಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಪ್ರಧಾನಿಗೆ ಪ್ರತ್ಯೇಕವಾಗಿ ಪ್ರಸ್ತುತಿ ನೀಡಿದರು.
narendra modi
ಪ್ರಧಾನಿ ನರೇಂದ್ರ ಮೋದಿ ANI
Updated on

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ಸಮನ್ವಯವನ್ನು ಮತ್ತಷ್ಟು ಬಲಪಡಿಸಿ, ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಬದಲು 'ಸಂಪೂರ್ಣ ಸರ್ಕಾರದ (Whole of the Government)' ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ನವದೆಹಲಿಯ ಸೇವಾ ತೀರ್ಥ (Seva Teerth)ದಲ್ಲಿ ನಡೆದ ಸುಮಾರು ನಾಲ್ಕು ಗಂಟೆಗಳ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ 80 ಕಾರ್ಯದರ್ಶಿಗಳೊಂದಿಗೆ ಸರ್ಕಾರದ ಸುಧಾರಣಾ ಕಾರ್ಯಸೂಚಿ, ಯೋಜನೆಗಳ ಅನುಷ್ಠಾನ ಹಾಗೂ ಭವಿಷ್ಯದ ಕಾರ್ಯತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಈ ವೇಳೆ ಸರ್ಕಾರದ ಯೋಜನೆಗಳು ನಿಗದಿತ ಸಮಯದೊಳಗೆ ಪೂರ್ಣಗೊಳ್ಳಬೇಕು ಮತ್ತು ಜನರಿಗೆ ಅದರ ಪ್ರಯೋಜನಗಳು ಪರಿಣಾಮಕಾರಿಯಾಗಿ ತಲುಪಬೇಕು ಎಂದು ಒತ್ತಿ ಹೇಳಿದರು.

ಮೂಲಗಳ ಪ್ರಕಾರ, ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿ ಟಿ ವಿ ಸೋಮನಾಥನ್ ಸಭೆಯ ಕಾರ್ಯಸೂಚಿಯನ್ನು ನಿರ್ವಹಿಸಿದರು.

ಸಭೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕಾರ್ಯದರ್ಶಿಯೂ ತಮ್ಮ ಇಲಾಖೆಯ ಕಾರ್ಯಚಟುವಟಿಕೆಗಳು, ಸುಧಾರಣಾ ಕ್ರಮಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಪ್ರಧಾನಿಗೆ ಪ್ರತ್ಯೇಕವಾಗಿ ಪ್ರಸ್ತುತಿ ನೀಡಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಇಲಾಖೆಗಳು ಪ್ರತ್ಯೇಕವಾಗಿ ಕೆಲಸ ಮಾಡುವ ಪದ್ಧತಿಯನ್ನು ಬಿಟ್ಟು ಪರಸ್ಪರ ಸಮನ್ವಯ ಮತ್ತು ಸಮಗ್ರ ಯೋಜನೆಯೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಪಾರದರ್ಶಕವಾಗಿ ಸುಧಾರಣೆಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರದ ಯೋಜನೆಗಳಿಂದ ಗರಿಷ್ಠ ಫಲಿತಾಂಶ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

narendra modi
ರಾಮ ಮಂದಿರ ದೇಣಿಗೆ ದುರ್ಬಳಕೆ ಆರೋಪ: 'ಕೋಟ್ಯಾಂತರ ಭಕ್ತರ ನಂಬಿಕೆಗೆ ಮಾಡಿದ ಅಪಮಾನ': ಪ್ರಧಾನಿ ಮೋದಿ ಮೌನದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಇದೇ ವೇಳೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಹಾಗೂ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಪಿಎಂ ಗತಿಶಕ್ತಿ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಮೂಲಗಳ ಪ್ರಕಾರ, ಸಭೆಯಲ್ಲಿ ಎರಡು ಪ್ರಮುಖ ವಿಷಯಗಳ ಕುರಿತು ವಿಶೇಷ ಚರ್ಚೆ ನಡೆಯಿತು. ಮೊದಲನೆಯದಾಗಿ 'Ease of Doing Business' ಹಾಗೂ 'Ease of Living' ಅನ್ನು ಮತ್ತಷ್ಟು ಸುಧಾರಿಸಲು ಅಗತ್ಯವಿರುವ ನಿಯಂತ್ರಣ ಸಡಿಲಿಕೆ (Deregulation) ಮತ್ತು ಆಡಳಿತಾತ್ಮಕ ಸುಧಾರಣೆಗಳ ಕುರಿತು ಚರ್ಚಿಸಲಾಯಿತು.

ಎರಡನೆಯದಾಗಿ 'ಆತ್ಮನಿರ್ಭರ ಭಾರತ' (Aatmanirbhar Bharat) ಗುರಿಯನ್ನು ವೇಗಗೊಳಿಸುವ ಕ್ರಮಗಳ ಕುರಿತು ಕಾರ್ಯದರ್ಶಿಗಳು ತಮ್ಮ ಇಲಾಖೆಗಳ ಯೋಜನೆಗಳನ್ನು ವಿವರಿಸಿದರು.

ಸಭೆಯಲ್ಲಿ ಕಾರ್ಯದರ್ಶಿಗಳು ತಮ್ಮ ಸಚಿವಾಲಯಗಳಲ್ಲಿ ಕೈಗೊಂಡಿರುವ ಪ್ರಮುಖ ಕ್ರಮಗಳು, ಎದುರಾಗಿರುವ ಸವಾಲುಗಳು ಹಾಗೂ ಭವಿಷ್ಯದ ಕಾರ್ಯತಂತ್ರಗಳನ್ನು ಪ್ರಧಾನಿಯ ಮುಂದಿಟ್ಟರು.

ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರ ಜೀವನದಲ್ಲಿ ನೈಜ ಬದಲಾವಣೆ ತರಬಲ್ಲ ರೀತಿಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಕೂಡ ಚರ್ಚೆ ನಡೆಯಿತು.

ಪ್ರಧಾನಿ ಮೋದಿ, ಸರ್ಕಾರದ ಪ್ರತಿಯೊಂದು ಸುಧಾರಣಾ ಯೋಜನೆಯ ಪರಿಣಾಮ ಜನರ ಬದುಕಿನಲ್ಲಿ ಸ್ಪಷ್ಟವಾಗಿ ಕಾಣಿಸಬೇಕು ಎಂದು ಒತ್ತಿ ಹೇಳಿದರು.

ಯೋಜನೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ, ಅವುಗಳ ಫಲಿತಾಂಶವನ್ನು ನಿಯಮಿತವಾಗಿ ಪರಿಶೀಲಿಸುವ ವ್ಯವಸ್ಥೆ ಸರ್ಕಾರದ ಆಡಳಿತದ ಅವಿಭಾಜ್ಯ ಅಂಗವಾಗಬೇಕು ಎಂದು ಸೂಚಿಸಿದರು.

ಇದರ ಜೊತೆಗೆ, ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಆಡಳಿತದಲ್ಲಿ ವ್ಯಾಪಕವಾಗಿ ಬಳಸುವ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆಯಿಂದ ಸೇವೆಗಳ ಗುಣಮಟ್ಟ ಹೆಚ್ಚಿಸಲು ಮತ್ತು ಜನಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಪ್ರಧಾನಿ ಮೋದಿ ಈಗಾಗಲೇ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ (Viksit Bharat)ವನ್ನಾಗಿ ರೂಪಿಸುವ ಗುರಿ ಘೋಷಿಸಿದ್ದು, ಮುಂದಿನ ಹತ್ತು ವರ್ಷಗಳ ಆಡಳಿತ ಸುಧಾರಣೆಗೆ ಅಗತ್ಯವಾದ ಆದ್ಯತೆಗಳನ್ನು ಸರ್ಕಾರ ನಿಗದಿಪಡಿಸಿದೆ. ಈ ಸಭೆಯ ಮೂಲಕ ಆ ಗುರಿ ಸಾಧನೆಗೆ ವಿವಿಧ ಸಚಿವಾಲಯಗಳ ಸಿದ್ಧತೆ ಹಾಗೂ ಕಾರ್ಯಗತಗೊಳಿಸುವ ಪ್ರಗತಿಯನ್ನು ಪ್ರಧಾನಿ ಸಮಗ್ರವಾಗಿ ಪರಿಶೀಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com