

ನವದೆಹಲಿ: ಯೂಸರ್ ನೇಮ್ ಫೀಚರ್ ಗೆ ಸಂಬಂಧಿಸಿದಂತೆ ಮೆಟಾ ಒಡೆತನದ ವಾಟ್ಸಾಪ್ ಗೆ ಬುಧವಾರ ನೋಟಿಸ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಇತರೆ ಮೆಸೇಜಿಂಗ್ ಆ್ಯಪ್ ಗಳಾದ ಟೆಲಿಗ್ರಾಮ್ ಮತ್ತು ಸಿಗ್ನಲ್ ಗೂ ನೋಟಿಸ್ ನೀಡಿದೆ.
ಈ ಆ್ಯಪ್ ಗಳಲ್ಲಿ ಇರುವ ಯುಸರ್ ನೇಮ್ ವೈಶಿಷ್ಟ್ಯದ ಕುರಿತು ಸರ್ಕಾರ ಪ್ರಶ್ನೆಗಳನ್ನು ಎತ್ತಿದ್ದು, ವಂಚನೆ ಮತ್ತು ನಕಲು ಮಾಡುವ ಅಪಾಯಗಳಿಗೆ ಸಂಬಂಧಿಸಿದ ಕಳವಳಗಳನ್ನು ಈ ವೇದಿಕೆಗಳು ಹೇಗೆ ಪರಿಹರಿಸುತ್ತವೆ ಎಂದು ಪ್ರಶ್ನಿಸಿದೆ.
ಯೂಸರ್ ನೇಮ್ ವೈಶಿಷ್ಟ್ಯವನ್ನು ಹೊಂದಲು ಅನುಮತಿಸುವ ಅಗತ್ಯವೇನು?ಎಂದು ಸರ್ಕಾರ ಟೆಲಿಗ್ರಾಮ್ ಗೆ ನೀಡಿದ ನೋಟಿಸ್ ನಲ್ಲಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಈ ವೈಶಿಷ್ಟ್ಯವು ಬಳಕೆದಾರರಿಗೆ ಫೋನ್ ಸಂಖ್ಯೆಗಳನ್ನು ಹಂಚಿಕೊಳ್ಳದೆಯೇ ಪ್ಲಾಟ್ ಫಾರ್ಮ್ ನ್ನು ಬಳಸಬಹುದಾದ ಯುಸರ್ ನೇಮ್ ರಚಿಸಲು ಅವಕಾಶ ನೀಡುತ್ತದೆ.
ವಾಟ್ಸಾಪ್ ಬಳಕೆಗೆ ಯೂಸರ್ ನೇಮ್ ವೈಶಿಷ್ಟ್ಯ ಪರಿಚಯಿಸಲು ಮುಂದಾಗಿದ್ದ ಮೆಟಾಗೆ ಬುಧವಾರ ನೋಟಿಸ್ ನೀಡಿದ್ದ ಕೇಂದ್ರ ಐಟಿ ಸಚಿವಾಲಯ, ಇದರಿಂದ ಆನ್ ಲೈನ್ ವಂಚನೆ, ಡಿಜಿಟಲ್ ಅರೆಸ್ಟ್, ಅನ್ಯರ ಸೋಗಿನಲ್ಲಿ ನಡೆಯುವ ದಾಳಿಗಳು ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿತ್ತು.
ಇದೀಗ ಈಗಾಗಲೇ ಯೂಸರ್ ನೇಮ್ ಫೀಚರ್ ಹೊಂದಿರುವ ಟೆಲಿಗ್ರಾಮ್ ಮತ್ತು ಸಿಗ್ನಲ್ ಗೂ ನೋಟಿಸ್ ನೀಡಿದ್ದು, ಈ ವೈಶಿಷ್ಟ್ಯ ಯಾಕೆ ಇರಬೇಕು ಎಂದು ಪ್ರಶ್ನಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.