

ಪೂರ್ವ ಗೋದಾವರಿ: ಪ್ರೀತಿಯನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರೂ ಭವ್ಯ ಸ್ಮಾರಕಗಳನ್ನೇ ನಿರ್ಮಿಸಬೇಕೆಂದಿಲ್ಲ. ಕೆಲವೊಮ್ಮೆ ಪ್ರೀತಿ ಕಾಳಜಿ, ದೃಢಸಂಕಲ್ಪ ಮತ್ತು ಹೊಸತನದ ರೂಪದಲ್ಲಿ ಮೂಡಿಬರುತ್ತದೆ.
ಇದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅರ್ಥಮೂರು ಗ್ರಾಮದ 65 ವರ್ಷದ ರೈತ ಮತ್ತು ಮೆಕಾನಿಕ್ ಸಟ್ಟಿ ಶಿವನಾರಾಯಣ ರೆಡ್ಡಿ.
ಆಂಧ್ರ ಪ್ರದೇಶದ ರಾಜಮಹೇಂದ್ರವರಂನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಅರ್ಥಮೂರು ಗ್ರಾಮದ ನಿವಾಸಿಯಾದ ಸಟ್ಟಿ ಶಿವನಾರಾಯಣ ರೆಡ್ಡಿ ಅವರ ಪತ್ನಿ ಸತ್ಯವೇಣಿ (58) ಹಲವು ವರ್ಷಗಳಿಂದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದರು.
ಪ್ರತಿದಿನ ಮನೆಯ ಮೊದಲ ಮಹಡಿಗೆ ಹೋಗಲು ಇರುವ 21 ಮೆಟ್ಟಿಲುಗಳನ್ನು ಏರುವುದು ಅವರಿಗೆ ತುಂಬಾ ಕಷ್ಟವಾಗುತ್ತಿತ್ತು.
ಕೇವಲ 20 ದಿನದಲ್ಲೇ ಎಸ್ಕಲೇಟರ್ ಸಿದ್ಧ
ನಿತ್ಯ ಪತ್ನಿಯ ಸಂಕಷ್ಟ ನೋಡುತ್ತಿದ್ದ ಶಿವನಾರಾಯಣ ರೆಡ್ಡಿ ಹೇಗಾದರೂ ಸರಿ ಪತ್ನಿಯ ಸಂಕಷ್ಟ ನಿವಾರಣೆಗೆ ಪಣ ತೊಟ್ಟರು.
ಅದರಂತೆ ಯಾವುದೇ ಇಂಜಿನಿಯರಿಂಗ್ ಪದವಿ ಅಥವಾ ತಾಂತ್ರಿಕ ಶಿಕ್ಷಣವಿಲ್ಲದಿದ್ದರೂ, ರೆಡ್ಡಿ ತಮ್ಮ ಸ್ವಂತ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಮನೆಯಲ್ಲಿ ಸ್ವದೇಶಿ ಎಸ್ಕಲೇಟರ್ ಅನ್ನು ವಿನ್ಯಾಸಗೊಳಿಸಿ ನಿರ್ಮಿಸಿದರು. ಈ ಯೋಜನೆ ಪೂರ್ಣಗೊಳ್ಳಲು ಕೇವಲ 20 ದಿನಗಳು ಬೇಕಾಗಿದ್ದು, ಸುಮಾರು 70 ಸಾವಿರ ರೂಪಾಯಿ ವೆಚ್ಚವಾಗಿದೆ.
ಮೆಕಾನಿಕ್ ರೈತ
ಮಂಡಪೇಟೆ ಸಮೀಪದ ಹಸಿರು ಭತ್ತದ ಗದ್ದೆಗಳು ಮತ್ತು ನೀರಾವರಿ ಕಾಲುವೆಗಳಿಂದ ಆವೃತವಾಗಿರುವ ಅರ್ಥಮೂರು ಗ್ರಾಮದಲ್ಲಿ ಬೆಳೆದ ಶಿವನಾರಾಯಣ ರೆಡ್ಡಿ, ಶಾಲೆ ದೂರದಲ್ಲಿದ್ದ ಕಾರಣ ಐದನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದರು.
ಬಾಲ್ಯದಿಂದಲೇ ಯಂತ್ರಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ಕೃಷಿ ಯಂತ್ರೋಪಕರಣಗಳೊಂದಿಗೆ ಕೆಲಸ ಮಾಡುತ್ತಾ ಸಾಕಷ್ಟು ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಂಡರು. ಪ್ರಸ್ತುತ ಅವರು ನಾಲ್ಕು ಟ್ರ್ಯಾಕ್ಟರ್‌ಗಳು, ಒಂದು ಅಕ್ಕಿ ಗಿರಣಿ ಹೊಂದಿದ್ದು, ಐದು ಎಕರೆ ಗದ್ದೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್, ಅಕ್ಕಿ ಗಿರಣಿ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಸ್ವತಃ ದುರಸ್ತಿ ಮಾಡುವ ಪರಿಣತಿಯೂ ಅವರಿಗೆ ಇದೆ.
ಪತ್ನಿ ನೋವು ನೋಡಿ ಆವಿಷ್ಕಾರದ ಯೋಚನೆ ಬಂತು
ಇನ್ನು ತಮ್ಮ ಸಾಧನೆ ಕುರಿತು ಮಾತನಾಡಿದ ಶಿವನಾರಾಯಣ ರೆಡ್ಡಿ, ತಮ್ಮ ಪತ್ನಿ ನಿತ್ಯ ಅನುಭವಿಸುತ್ತಿದ್ದ ನೋವು ಕಂಡು ಈ ಆವಿಷ್ಕಾರದ ಯೋಚನೆ ಮೂಡಿತು ಎಂದು ಹೇಳಿದ್ದಾರೆ.
"ವಾಸ್ತು ಪ್ರಕಾರ ಮನೆಯ ಮಾಲೀಕರು ಮೊದಲ ಮಹಡಿಯಲ್ಲಿ ವಾಸಿಸಬೇಕು ಎಂದು ಹೇಳಿದ್ದರಿಂದ ನಾವು ಮೇಲ್ಮಹಡಿಯಲ್ಲಿ ವಾಸಿಸುತ್ತಿದ್ದೇವೆ. ಪ್ರತಿದಿನ ನನ್ನ ಪತ್ನಿ ಮೆಟ್ಟಿಲು ಏರುವಾಗ ಅನುಭವಿಸುತ್ತಿದ್ದ ನೋವನ್ನು ನೋಡುತ್ತಿದ್ದೆ. ಒಂದು ದಿನ ಅವರು, 'ನೀವು ತಂತ್ರಜ್ಞರು, ನಮ್ಮ ಮನೆಗೆ ಲಿಫ್ಟ್‌ನಂತಹದ್ದನ್ನು ಯಾಕೆ ಮಾಡಬಾರದು?' ಎಂದು ಕೇಳಿದರು. ಆ ಮಾತು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯಿತು" ಎಂದು ಅವರು ಹೇಳಿದರು.
"ದೃಢಸಂಕಲ್ಪ, ಪ್ರಾಯೋಗಿಕ ಜ್ಞಾನ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸಿದ್ದರೆ ಯಾರಾದರೂ ಅರ್ಥಪೂರ್ಣವಾದದ್ದನ್ನು ಸೃಷ್ಟಿಸಬಹುದು," ಎಂದು ಅವರು ಹೇಳಿದ್ದಾರೆ.
ಯುವಕರಿಗೆ ಸಂದೇಶ ನೀಡಿದ ಅವರು, "ಸಮಯವನ್ನು ವ್ಯರ್ಥ ಮಾಡಬೇಡಿ. ಹೊಸತನದ ಬಗ್ಗೆ ಯೋಚಿಸಿ. ನಿಮ್ಮ ಮೇಲೆ ವಿಶ್ವಾಸವಿರಲಿ. ಕಠಿಣ ಪರಿಶ್ರಮದಿಂದ ನಿಮ್ಮ ಆಲೋಚನೆಗಳನ್ನು ಸಾಕಾರಗೊಳಿಸಿ. ಆತ್ಮವಿಶ್ವಾಸವೇ ಯಶಸ್ಸಿನ ಮೊದಲ ಹೆಜ್ಜೆ," ಎಂದು ಹೇಳಿದರು.
"ಪ್ರೀತಿಯನ್ನು ಸಾಬೀತುಪಡಿಸಲು ಶಹಜಹಾನ್‌ನಂತೆ ತಾಜ್‌ಮಹಲ್ ಕಟ್ಟಬೇಕಾಗಿಲ್ಲ. ನಾವು ಪ್ರೀತಿಸುವವರ ದೈನಂದಿನ ಕಷ್ಟವನ್ನು ಕಡಿಮೆ ಮಾಡುವಂತಹ ಕಾಳಜಿಯ ಕಾರ್ಯಗಳೇ ನಿಜವಾದ ಪ್ರೀತಿಯ ಸಂಕೇತ," ಎಂದು ಅವರು ಅಭಿಪ್ರಾಯಪಟ್ಟರು.
ಸಾಕಷ್ಟು ಸಂಶೋಧನೆ
ಪತ್ನಿಯ ಕಷ್ಟವನ್ನು ಕಡಿಮೆ ಮಾಡಲು ಶಿವನಾರಾಯಣ ರೆಡ್ಡಿ ಹಲವು ತಿಂಗಳು ವಿವಿಧ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಿದರು. ಬಳಿಕ ಮೋಟಾರ್, ವಿದ್ಯುತ್ ವೈರಿಂಗ್ ಸೇರಿದಂತೆ ಅಗತ್ಯ ಉಪಕರಣಗಳನ್ನು ಖರೀದಿಸಿ 1.5 ಹಾರ್ಸ್‌ಪವರ್ ಮೋಟಾರ್‌ನಿಂದ ಕಾರ್ಯನಿರ್ವಹಿಸುವ ಎಸ್ಕಲೇಟರ್ ನಿರ್ಮಿಸಿದರು.
ಈ ವ್ಯವಸ್ಥೆ ಕಡಿಮೆ ವಿದ್ಯುತ್ ಬಳಕೆ ಮಾಡುತ್ತದೆ. 300 ಕಿಲೋಗ್ರಾಂವರೆಗೆ ಭಾರ ಹೊರುವ ಸಾಮರ್ಥ್ಯ ಹೊಂದಿದ್ದು, ಸುರಕ್ಷತೆಗಾಗಿ ಸ್ವಯಂಚಾಲಿತ ನಿಲುಗಡೆ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ವಿದ್ಯುತ್ ಕಡಿತವಾದ ಸಂದರ್ಭದಲ್ಲೂ 1400 VA ಇನ್ವರ್ಟರ್ ಅಳವಡಿಸಿರುವುದರಿಂದ ಅದದ ಮೂಲಕವೂ ಇದು ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಈಗ ಪತ್ನಿ ಸತ್ಯವೇಣಿ ಮಾತ್ರವಲ್ಲದೆ, ಶಿವನಾರಾಯಣ ರೆಡ್ಡಿ ಹಾಗೂ ಅವರ ಮಕ್ಕಳು ಸಹ ಈ ಎಸ್ಕಲೇಟರ್ ಬಳಸುತ್ತಿದ್ದಾರೆ. ಮಾತ್ರವಲ್ಲದೇ ರೆಡ್ಡಿ ಅವರ ಈ ಆವಿಷ್ಕಾರ ದೇಶದಾದ್ಯಂತ ಗಮನ ಸೆಳೆದಿದ್ದು, ಅನೇಕರು ಇದರ ವಿನ್ಯಾಸದ ಬಗ್ಗೆ ಮಾಹಿತಿ ಪಡೆಯಲು ಅವರನ್ನು ಸಂಪರ್ಕಿಸುತ್ತಿದ್ದಾರೆ.
ಸಮಾಜಸೇವೆಯಲ್ಲೂ ಖ್ಯಾತಿ
ಯಂತ್ರೋಪಕರಣಗಳ ಪರಿಣತಿಯ ಜೊತೆಗೆ ಶಿವನಾರಾಯಣ ರೆಡ್ಡಿ ಸಮಾಜಸೇವೆಯಲ್ಲೂ ಹೆಸರುವಾಸಿಯಾಗಿದ್ದಾರೆ. ಹಲವು ದೇವಾಲಯಗಳ ನಿರ್ಮಾಣಕ್ಕೆ ಅವರು ಸಹಾಯ ಮಾಡಿದ್ದು, ದೇವಾಲಯಗಳಲ್ಲಿ ಧ್ವಜಸ್ತಂಭ ಅಳವಡಿಸುವ ಪರಿಣತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯಿದ್ದು, ಇಬ್ಬರೂ ಉತ್ತಮವಾಗಿ ನೆಲೆಗೊಂಡಿದ್ದಾರೆ.