

ಗುವಾಹಟಿ: ಮಾದಕ ವಸ್ತು ಹಾವಳಿ ತಡೆಯಲು ಹಾಗೂ ಜನರಲ್ಲಿ ಅದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಸ್ಸಾಂನಲ್ಲಿ ಭಾನುವಾರ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೊಲೀಸರು ವಶಕ್ಕೆ ಪಡೆದಿದ್ದ 472.51 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ನಾಶಪಡಿಸಲಾಯಿತು.
ಗುವಾಹಟಿಯ ಹೊರವಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಸಂಪುಟ ಸಚಿವರಾದ ಜಯಂತ ಮಲ್ಲಾ ಬರುವಾ ಮತ್ತು ನಾರಾಯಣ್ ದೇಕಾ, ಹಿರಿಯ ಅಸ್ಸಾಂ ಪೊಲೀಸ್ ಅಧಿಕಾರಿಗಳು ಮತ್ತಿತರ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.
ಮುಖ್ಯಮಂತ್ರಿ ತಾವೇ ಸ್ವತ: ರೋಡ್ ರೋಲರ್ ಬಳಸಿ ಮಾದಕವಸ್ತುಗಳನ್ನು ನಾಶಪಡಿಸಿದ್ದಾರೆ.ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಹಂಚಿಕೊಂಡಿದ್ದಾರೆ. ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುತ್ತಿದೆ" ಎಂದು ಅವರು ಘೋಷಿಸಿದ್ದಾರೆ.
ಮಾದಕವಸ್ತುಗಳ ವಿರುದ್ಧದ ನಮ್ಮ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ದು, ಇಂದು ಅಮೂಲ್ಯ ಜೀವಗಳನ್ನು ನಾಶಪಡಿಸಬಹುದಾಗಿದ್ದ 472 ಕೋಟಿ ರೂ.ಗಳಷ್ಟು ಮೌಲ್ಯದ ಮಾದಕವಸ್ತುಗಳನ್ನು ನಾಶಪಡಿಸಿದ್ದೇವೆ. ಮಾದಕ ವಸ್ತುಗಳ ಬಳಕೆ ವಿರುದ್ಧ ನಿರಂತರ ಪ್ರಯತ್ನದಲ್ಲಿದ್ದೇವೆ. ಅದರ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದ್ದೇವೆ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ
ಅಸ್ಸಾಂನಾದ್ಯಂತ ದಾಖಲಾಗಿರುವ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಕೇಂದ್ರ ಸರ್ಕಾರ ಒದಗಿಸಿದ ಹೆಚ್ಚಿನ ತಾಪಮಾನದ ದಹನಕಾರಕವನ್ನು ಬಳಸಿ ನಾಶಪಡಿಸಲಾಗಿದೆ. ವೈಜ್ಞಾನಿಕ ವಿಲೇವಾರಿ ಪ್ರಕ್ರಿಯೆಯು ಪರಿಸರಕ್ಕೆ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಶಪಡಿಸಲಾದ ಡ್ರಗ್ಸ್ ನಲ್ಲಿ 39.068 ಕೆಜಿ ಮಾರ್ಫಿನ್, 79.770 ಕೆಜಿ ಅಫೀಮು, 58.877 ಕೆಜಿ ಹೆರಾಯಿನ್, 0.0471 ಕೆಜಿ ಕೊಕೇನ್, 19.02 ಲಕ್ಷ ಯಾಬಾ ಮಾತ್ರೆಗಳು, 2.29 ಲಕ್ಷ ಬಾಟಲಿಗಳ ಕೆಮ್ಮು ಸಿರಪ್, 37,796.34 ಕೆಜಿ ಗಾಂಜಾ (ಗಾಂಜಾ) ಮತ್ತು 9.49 ಕೆಜಿ ಪಾಪಿ ಸ್ಟ್ರಾ ಸೇರಿವೆ.
ಮಾದಕ ವಸ್ತುಗಳ ವಿರುದ್ಧದ ಅಸ್ಸಾಂನ ಅಭಿಯಾನಕ್ಕೆ ಪಕ್ಷಾತೀತವಾಗಿ ಬೆಂಬಲ ದೊರೆತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.