ಅಸ್ಸಾಂ ವಿಧಾನಸಭೆಯಲ್ಲಿ ಹೈಡ್ರಾಮ: ವಿಪಕ್ಷಗಳ ಪ್ರತಿಭಟನೆ ನಡುವೆಯೇ UCC ಮಸೂದೆ ಅಂಗೀಕಾರ! ಬಹು ಪತ್ನಿತ್ವಕ್ಕೆ ಜೈಲು ಶಿಕ್ಷೆ

ಎಲ್ಲಾ ಮದುವೆಗಳನ್ನೂ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ದ್ವಿವಿವಾಹ ಮತ್ತು ಬಹುಪತ್ನಿತ್ವಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಮಸೂದೆ ಹೇಳುತ್ತದೆ.
Assam Asembly passes UCC Bill amid Opposition protests
ಅಸ್ಸಾಂ ನಲ್ಲಿ ಯುಸಿಸಿ ಮಸೂದೆ ಅಂಗೀಕಾರ
Updated on

ಗುವಾಹತಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರದ ಏಕರೂಪ ನಾಗರೀಕ ಸಂಹಿತೆ (UCC) ಮಸೂದೆಗೆ ಅಸ್ಸಾಂ ಸರ್ಕಾರ ಅನುಮೋದನೆ ನೀಡಿದ್ದು ಆ ಮೂಲಕ UCC ಮಸೂದೆ ಅಂಗೀಕರಿಸಿದ ಮೂರನೇ ರಾಜ್ಯ ಎಂಬ ಕೀರ್ತಿಗೆ ಅಸ್ಸಾಂ ಭಾಜನವಾಗಿದೆ.

ಹೌದು.. ಮದುವೆ, ವಿಚ್ಛೇದನ, ಉತ್ತರಾಧಿಕಾರ ಹಾಗೂ ಲಿವ್-ಇನ್ ಸಂಬಂಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಲಾ ನಿವಾಸಿಗಳಿಗೆ ಒಂದೇ ರೀತಿಯ ನಾಗರಿಕ ಕಾನೂನು ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆ (UCC) ಮಸೂದೆಯನ್ನು ಅಸ್ಸಾಂ ವಿಧಾನಸಭೆ ಬುಧವಾರ ಅಂಗೀಕರಿಸಿತು.

ಈ ಮೂಲಕ ಅಸ್ಸಾಂ ಏಕರೂಪ ನಾಗರೀಕ ಸಂಹಿತೆಯನ್ನು ಅಂಗೀಕರಿಸಿದ ಮೊದಲ ಈಶಾನ್ಯ ಭಾರತದ ಮೊದಲ ರಾಜ್ಯವಾಗಿದೆ.

ಅಂತೆಯೇ ಉತ್ತರಾಖಂಡ ಮತ್ತು ಗುಜರಾತ್ ನಂತರ ದೇಶದಲ್ಲಿ UCC ಮಸೂದೆ ಅಂಗೀಕರಿಸಿದ ಮೂರನೇ ರಾಜ್ಯವಾಗಿದೆ.

Assam Asembly passes UCC Bill amid Opposition protests
ಮಮತಾಗೆ ಮತ್ತೊಂದು ಶಾಕ್; ಪಕ್ಷದ ಎಲ್ಲಾ ಹುದ್ದೆಗಳಿಗೆ TMC ಸಂಸದೆ ಕಾಕೋಲಿ ಘೋಷ್ ರಾಜೀನಾಮೆ

ಅಸ್ಸಾಂ ವಿಧಾನಸಭೆಯಲ್ಲಿ ಹೈಡ್ರಾಮಾ, ವಿಪಕ್ಷಗಳ ತೀವ್ರ ವಿರೋಧ

ವಿಸ್ತೃತ ಚರ್ಚೆಯ ಬಳಿಕ ಸ್ಪೀಕರ್ ರಂಜೀತ್ ಕುಮಾರ್ ದಾಸ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಮಸೂದೆಯನ್ನು ಅಂಗೀಕಾರಕ್ಕೆ ಮಂಡಿಸಲು ಸೂಚಿಸಿದರು. ಈ ವೇಳೆ ಈ ಮಸೂದೆಯನ್ನು ಹೆಚ್ಚಿನ ಸಮಾಲೋಚನೆಗಾಗಿ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು.

ಆದರೆ ಸ್ಪೀಕರ್ ಆ ಬೇಡಿಕೆಯನ್ನು ತಿರಸ್ಕರಿಸಿದ ಬಳಿಕ, ವಿರೋಧ ಪಕ್ಷದ ಸದಸ್ಯರು ಸದನದ ಮಧ್ಯಭಾಗಕ್ಕೆ ಧಾವಿಸಿ ಘೋಷಣೆಗಳನ್ನು ಕೂಗುತ್ತಾ ಮಸೂದೆ ಅಂಗೀಕಾರವಾಗುವವರೆಗೆ ಪ್ರತಿಭಟನೆ ಮುಂದುವರಿಸಿದರು. ವಿರೋಧ ಪಕ್ಷದ ಶಾಸಕರು UCC ಅನ್ನು ಆಡಳಿತಾರೂಢ ಬಿಜೆಪಿ ಪಕ್ಷದ “ರಾಜಕೀಯ ಅಜೆಂಡಾ” ಎಂದು ಟೀಕಿಸಿದರು.

ಅದರದ್ದೇ ಆದ ಕಾನೂನುಗಳಿರುವಾಗ UCCಯ ಅಗತ್ಯವೇನು?

“ಬಹುಪತ್ನಿತ್ವ, ಬಾಲ್ಯ ವಿವಾಹ, ಮದುವೆ ಹಾಗೂ ವಿಚ್ಛೇದನ ನೋಂದಣಿ, ಪಾಲನಾ ಭತ್ಯೆ ಮುಂತಾದ UCCಯಲ್ಲಿರುವ ವಿಷಯಗಳು ಈಗಾಗಲೇ ಬೇರೆ ಬೇರೆ ಕಾನೂನುಗಳ ಮೂಲಕ ಜಾರಿಯಲ್ಲಿವೆ. ಹಾಗಿದ್ದರೆ UCCಯ ಅಗತ್ಯವೇನು?” ಎಂದು ಕಾಂಗ್ರೆಸ್ ವಿಧಾನಮಂಡಲ ಪಕ್ಷದ ನಾಯಕ ವಾಜಿದ್ ಅಲಿ ಚೌದರಿ (Wajed Ali Choudhury) ಪ್ರಶ್ನಿಸಿದರು.

ಇದಕ್ಕೆ ಧನಿಗೂಡಿಸಿದ All India United Democratic Front ನಾಯಕ ಮುಜಿಬ್ ಉರ್ ರೆಹಮಾನ್ (Mazibur Rahman) ಅವರು ಸಮಾಜದ ಕೆಲವು ವರ್ಗಗಳ ಹಕ್ಕುಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದರು. ಆದರೆ ಇದಾವುದಕ್ಕೂ ಸೊಪ್ಪು ಹಾಕದ ಸ್ಪೀಕರ್ ಹಾಗೂ ಅಸ್ಸಾಂ ಸರ್ಕಾರ ಮಸೂದೆ ಮಂಡಿಸಿ ಅಂಗೀಕಾರವನ್ನೂ ಮಾಡಿತು.

Assam Asembly passes UCC Bill amid Opposition protests
SIR ತೀರ್ಪು: ಯಾರು ಮತ ಚಲಾಯಿಸಬಹುದು ಎಂಬುದನ್ನು ಬಿಜೆಪಿ ನಿರ್ಧರಿಸುತ್ತೆ- ಯೋಗೇಂದ್ರ ಯಾದವ್

ಇತಿಹಾಸದ ಮಹತ್ವದ ಘಟ್ಟ

ಈ ವೇಳೆ ಮಾತನಾಡಿದ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು, ಈ ಮಸೂದೆ ಅಂಗೀಕಾರವನ್ನು ಅಸ್ಸಾಂ ಇತಿಹಾಸದ ಮಹತ್ವದ ಘಟ್ಟ ಎಂದು ಬಣ್ಣಿಸಿದರು. ಇದು ಸಂವಿಧಾನದ ವಿಧಿ 44 ಜಾರಿ, BJPಯ ಮೂಲ ಸಿದ್ಧಾಂತಗಳು ಹಾಗೂ ಪಕ್ಷದ ಅಸ್ಸಾಂ ಚುನಾವಣಾ ಭರವಸೆಗಳನ್ನು ಈಡೇರಿಸಿದೆ ಎಂದು ಅವರು ಹೇಳಿದರು.

“UCC ಅಂಗೀಕಾರದೊಂದಿಗೆ ಅಸ್ಸಾಂನ ಯಾವುದೇ ಭಾಗದಲ್ಲಿರುವ ಎಲ್ಲಾ ಧರ್ಮಗಳ ಜನರು ಆರನೇ ಅನುಸೂಚಿ ಪ್ರದೇಶಗಳನ್ನು ಹೊರತುಪಡಿಸಿ ಈ ನಾಗರಿಕ ವಿಷಯಗಳಲ್ಲಿ ಕಾನೂನಿನ ಮುಂದೆ ಸಮಾನರಾಗುತ್ತಾರೆ. ಈ ಮಹತ್ವದ ಮಸೂದೆಗೆ ಸಂಪೂರ್ಣ ಬೆಂಬಲ ನೀಡಿದ ಎಲ್ಲಾ NDA ಶಾಸಕರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ,” ಎಂದು ಅವರು ಹೇಳಿದರು.

UCCಯಲ್ಲೇನಿದೆ?

ಈ ಮಸೂದೆ ಲಿವ್-ಇನ್ ಸಂಬಂಧಗಳನ್ನು ಮಾನ್ಯಗೊಳಿಸಿದ್ದು, ಅಸ್ಸಾಂ ನಿವಾಸಿಗಳಾಗಿರಲಿ ಅಥವಾ ಇಲ್ಲದಿರಲಿ, ಉಪ ನೋಂದಣಾಧಿಕಾರಿಯ ಬಳಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂದು ಹೇಳಿದೆ. ಒಂದು ತಿಂಗಳೊಳಗೆ ಲಿವ್-ಇನ್ ಸಂಬಂಧವನ್ನು ನೋಂದಣಿ ಮಾಡಿಸದಿದ್ದರೆ ಮೂರು ತಿಂಗಳ ಜೈಲು ಶಿಕ್ಷೆ, 10,000 ರೂ. ದಂಡ ಅಥವಾ ಎರಡೂ ವಿಧಿಸಲಾಗುತ್ತದೆ. ನೋಂದಾಯಿತ ಲಿವ್-ಇನ್ ಸಂಬಂಧದಿಂದ ಜನಿಸುವ ಮಕ್ಕಳನ್ನು ಕಾನೂನಾತ್ಮಕ ಮಕ್ಕಳಾಗಿ ಪರಿಗಣಿಸಲಾಗುತ್ತದೆ.

ಒಬ್ಬ ಪುರುಷ ತನ್ನ ಲಿವ್-ಇನ್ ಸಂಗಾತಿಯನ್ನು ತೊರೆದರೆ, ಆಕೆ ನ್ಯಾಯಾಲಯದಲ್ಲಿ ಪಾಲನಾ ಭತ್ಯೆ ಕೇಳಬಹುದಾಗಿದೆ. ಪಾಲುದಾರರು ಹತ್ತಿರದ ಸಂಬಂಧಿಕರಾಗಿದ್ದರೆ, ಅಥವಾ ಅವರಲ್ಲಿ ಯಾರಾದರೂ ಈಗಾಗಲೇ ಮದುವೆಯಾಗಿದ್ದರೆ ಅಥವಾ ಮತ್ತೊಂದು ಲಿವ್-ಇನ್ ಸಂಬಂಧದಲ್ಲಿದ್ದರೆ, ಅಥವಾ ಯಾರಾದರೂ ಅಪ್ರಾಪ್ತರಾಗಿದ್ದರೆ, ಅಥವಾ ಬಲವಂತ ಅಥವಾ ವಂಚನೆಯ ಮೂಲಕ ಒಪ್ಪಿಗೆ ಪಡೆದಿದ್ದರೆ, ಆ ಲಿವ್-ಇನ್ ಸಂಬಂಧವನ್ನು ನೋಂದಣಿ ಮಾಡಲು ಅವಕಾಶ ಇರುವುದಿಲ್ಲ.

ಮಸೂದೆ ಪ್ರಕಾರ, ಪತಿ ಅತ್ಯಾಚಾರ ಅಥವಾ ಅಸಹಜ ಲೈಂಗಿಕ ಅಪರಾಧಗಳಲ್ಲಿ ತಪ್ಪಿತಸ್ಥನಾಗಿದ್ದರೆ, ಅಥವಾ ಈ ಸಂಹಿತೆ ಜಾರಿಗೆ ಬರುವ ಮೊದಲು ಅವನಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರಿದ್ದರೆ, ಮಹಿಳೆಯರಿಗೆ ವಿಚ್ಛೇದನಕ್ಕೆ ಹೆಚ್ಚುವರಿ ಆಧಾರಗಳು ದೊರೆಯುತ್ತವೆ.

ತ್ರಿವಳಿ ತಲಾಖ್ ಗೂ ನಿಷೇಧ, ಬಹುಪತ್ನಿತ್ವಕ್ಕೆ ಶಿಕ್ಷೆ

ಅಂತೆಯೇ ಈ ಮಸೂದೆ ತಕ್ಷಣದ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುತ್ತದೆ. ವಿಚ್ಛೇದನ ಕೇವಲ ನ್ಯಾಯಾಲಯದ ಆದೇಶದ ಮೂಲಕ ಮಾತ್ರ ಸಾಧ್ಯ ಎಂದು ಮಸೂದೆ ಹೇಳುತ್ತದೆ. ಏಕಪತ್ನಿತ್ವವನ್ನು ಕಡ್ಡಾಯಗೊಳಿಸಿರುವ ಈ ಮಸೂದೆ, ವರರಿಗೆ 21 ವರ್ಷ ಹಾಗೂ ವಧುಗಳಿಗೆ 18 ವರ್ಷಗಳ ಕಾನೂನುಬದ್ಧ ವಿವಾಹ ವಯಸ್ಸನ್ನು ನಿಗದಿಪಡಿಸಿದೆ. ಎಲ್ಲಾ ಮದುವೆಗಳನ್ನೂ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಮಸೂದೆ ಹೇಳುತ್ತದೆ. ದ್ವಿವಿವಾಹ ಮತ್ತು ಬಹುಪತ್ನಿತ್ವಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಸಂವಿಧಾನಾತ್ಮಕ ರಕ್ಷಣೆಯನ್ನು ಉಳಿಸಿಕೊಳ್ಳಲು ಅನುಸೂಚಿತ ಜನಾಂಗಗಳನ್ನು ಈ ಮಸೂದೆಯಿಂದ ಸ್ಪಷ್ಟವಾಗಿ ಹೊರತಾಗಿಸಲಾಗಿದೆ.

ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಪಾಡುವ ಉದ್ದೇಶದಿಂದ “ವೇದಿಕ್ ವಿವಾಹ್, ಅಹೋಂ ಚಕ್ಲಾಂಗ್, ಸಪ್ತಪದಿ, ಆಶೀರ್ವಾದ್, ನಿಕಾಹ್, ಹೋಲಿ ಯೂನಿಯನ್, ಆನಂದ್ ಕರಜ್” ಸೇರಿದಂತೆ ಯಾವುದೇ ಪ್ರಸ್ತುತ ಧಾರ್ಮಿಕ ಆಚರಣೆ ಅಥವಾ ಸಂಪ್ರದಾಯದ ಮೂಲಕ ಮದುವೆ ನೆರವೇರಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com