

ಕೋಲ್ಕತ್ತಾ: ಪಕ್ಷದ ನಾಯಕತ್ವದ ಬಗ್ಗೆ ಸಾರ್ವಜನಿಕವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೆಲವು ದಿನಗಳ ನಂತರ, ಲೋಕಸಭಾ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಬುಧವಾರ ತೃಣಮೂಲ ಕಾಂಗ್ರೆಸ್‌ನ ಎಲ್ಲಾ ಸಾಂಸ್ಥಿಕ ಹುದ್ದೆಗಳಿಗೆ ರಾಜೀನಾಮೆ ನೀಡಿದರು.
ಬರಾಸತ್ ಕ್ಷೇತ್ರದ ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ನಿನ್ನೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗಿನ ಆಡಳಿತಾತ್ಮಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಭಾಗವಹಿಸದಂತೆ ಟಿಎಂಸಿ ಸೂಚಿಸಿದೆ ಎಂದು ಹೇಳಲಾಗಿದ್ದು, ಇದರ ಬೆನ್ನಲ್ಲೇ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ದಸ್ತಿದಾರ್ ಅವರು ಟಿಎಂಸಿಯ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು ಮತ್ತು ಪಕ್ಷದ "ಬಂಗಾ ಜನನಿ" ಕಾರ್ಯಕ್ರಮದೊಂದಿಗೆ ನಂಟು ಹೊಂದಿದ್ದರು.
ನಾಲ್ಕು ಬಾರಿ ಬರಾಸತ್ ಸಂಸದೆಯಾಗಿರುವ ದಸ್ತಿದಾರ್, ಟಿಎಂಸಿ ರಾಜ್ಯಾಧ್ಯಕ್ಷೆ ಸುಬ್ರತಾ ಬಕ್ಷಿ ಅವರಿಗೆ ಬರೆದ ಪತ್ರದಲ್ಲಿ, ಪಕ್ಷದ ಎಲ್ಲಾ ಸಾಂಸ್ಥಿಕ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಜವಾಬ್ದಾರಿಗಳಲ್ಲಿ ಇನ್ನು ಮುಂದೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ಪಕ್ಷಕ್ಕೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲಿ ಈಗ ಭಿನ್ನಮತ ಸ್ಫೋಟಗೊಂಡಿದೆ.
Advertisement