

ಕೋಲ್ಕತ್ತಾ: ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷ ವಿಭಜನೆಯಾಗುವ ಆತಂಕ ಸೃಷ್ಟಿಯಾಗಿದೆ.
ಟಿಎಂಸಿಯ ಸುಮಾರು 20 ಸಂಸದರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ನಮ್ಮ ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದರೆ ಅವರು ಕೇಸರಿ ಪಕ್ಷ ಸೇರಲು ಸಿದ್ಧರಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಸೌಮಿತ್ರ ಖಾನ್ ಅವರು ಮಂಗಳವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
"ಬಿಜೆಪಿ ಕೇಂದ್ರ ನಾಯರು ಒಮ್ಮೆ ಹೇಳಿದರೆ, ಟಿಎಂಸಿ ಇನ್ನು ಮುಂದೆ ಪಕ್ಷವಾಗಿ ಉಳಿಯುವುದಿಲ್ಲ. ಎಲ್ಲರೂ ಬರಲು ಸಿದ್ಧರಿದ್ದಾರೆ. ಸುಮಾರು 50 ಟಿಎಂಸಿ ಶಾಸಕರು ಅವರ ಪಕ್ಷದ ನಾಯಕರ ಬಗ್ಗೆ ಅತೃಪ್ತರಾಗಿದ್ದಾರೆ ಮತ್ತು 20 ಸಂಸದರು ಬಿಜೆಪಿ ಸೇರಲು ಸಿದ್ಧರಿದ್ದಾರೆ" ಎಂದು ಖಾನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಬರಾಸತ್ ಕ್ಷೇತ್ರದ ಟಿಎಂಸಿ ಸಂಸದೆಯಾದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಇನ್ನೂ ಸುಮಾರು ಆರು ಟಿಎಂಸಿ ಶಾಸಕರು ರಾಜ್ಯದ ಮುಖ್ಯಮಂತ್ರಿಯಾದ ಸುವೇಂದು ಅಧಿಕಾರಿ ಅವರೊಂದಿಗಿನ ಆಡಳಿತಾತ್ಮಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಇದರ ನಂತರ ಪಕ್ಷದೊಳಗೆ ಉದ್ವಿಗ್ನತೆ ಹೆಚ್ಚಾಗಿದೆ. ಕಾಕೋಲಿ ಅವರನ್ನು ಟಿಎಂಸಿ ಲೋಕಸಭೆಯ ಮುಖ್ಯ ಸಚೇತಕರ ಸ್ಥಾನದಿಂದ ತೆಗೆದುಹಾಕಲಾಗಿದೆ. ಕೆಲವೇ ದಿನಗಳಲ್ಲೇ ಕೇಂದ್ರ ಸರ್ಕಾರ ಅವರಿಗೇ ವೈ-ಕೆಟಗರಿ ಭದ್ರತೆ ನೀಡಿದೆ. ಇದು ರಾಜಕೀಯ ವಲಯದಲ್ಲಿ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.
ಪ್ರಸ್ತುತ, ಪಶ್ಚಿಮ ಬಂಗಾಳದಿಂದ ಟಿಎಂಸಿ 29 ಲೋಕಸಭಾ ಸಂಸದರನ್ನು ಹೊಂದಿದ್ದರೆ, ಬಿಜೆಪಿ 12 ಮತ್ತು ಕಾಂಗ್ರೆಸ್ ಒಬ್ಬರನ್ನು ಹೊಂದಿದೆ.
ತೃಣಮೂಲ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿ, ಅವರನ್ನು "ಪಾಪಿ" ಎಂದು ಟೀಕಿಸಿದ್ದು, ಈ "ಪಾಪಿಗಳು ಜೈಲಿಗೆ ಹೋಗಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
Advertisement