ಇಡಿ ಸಮನ್ಸ್ ಬೆನ್ನಲ್ಲೇ ಮಮತಾ ಬಣಕ್ಕೆ ಮತ್ತೊಂದು ಆಘಾತ; ಬಂಡಾಯ ಬಣ ಸೇರಿದ ಹಿರಿಯ TMC ಶಾಸಕ ಮದನ್ ಮಿತ್ರ

ಮಮತಾ ಬ್ಯಾನರ್ಜಿ ನೇತೃತ್ವದ 'ಕಾಳಿಘಾಟ್ ಟಿಎಂಸಿ ಘಟಕದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಎಲ್ಲಾ ಸಾಂಸ್ಥಿಕ ಸಮಿತಿಗಳ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಮದನ್ ಮಿತ್ರಾ ಘೋಷಿಸಿದ್ದಾರೆ.
MLA Madan Mitra joins Ritabrata-led rebel camp
ಬಂಡಾಯ ಶಾಸಕರ ಬಣ ಸೇರಿದ ಮದನ್ ಮಿತ್ರಾ
Updated on

ಕೋಲ್ಕತ್ತಾ: ಜಾರಿ ನಿರ್ದೇಶನಾಲಯ (ಇಡಿ) ತನ್ನ ಪತ್ನಿ ಮತ್ತು ಇಬ್ಬರು ಪುತ್ರರಿಗೆ ಸಮನ್ಸ್ ಜಾರಿ ಮಾಡಿದ ಮರುದಿನವೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ಶಾಸಕ ಮದನ್ ಮಿತ್ರ ಅವರು ಪ್ರತಿಪಕ್ಷ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ ಸೇರ್ಪಡೆಯಾಗಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ 'ಕಾಳಿಘಾಟ್ ಟಿಎಂಸಿ ಘಟಕದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಎಲ್ಲಾ ಸಾಂಸ್ಥಿಕ ಸಮಿತಿಗಳ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಮದನ್ ಮಿತ್ರಾ ಘೋಷಿಸಿದ್ದಾರೆ.

ಜೊತೆಗೆ ಪಶ್ಚಿಮ ಬಂಗಾಳ ವಿಧಾನಸಭೆಯ ಮುಖ್ಯ ಸಚೇತಕ (Chief Whip) ಸ್ಥಾನಕ್ಕೂ ತಕ್ಷಣದಿಂದಲೇ ರಾಜೀನಾಮೆ ನೀಡಿದ್ದಾರೆ. ಆದರೆ, ತಾವು ಇನ್ನೂ ತೃಣಮೂಲ ಕಾಂಗ್ರೆಸ್‌ನ ಸದಸ್ಯರಾಗಿಯೇ ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ರಿತಬ್ರತ ಬ್ಯಾನರ್ಜಿ ಅವರನ್ನು ಅವರ ಕೊಠಡಿಯಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮದನ್ ಮಿತ್ರ, "ನಾನು ಮನೆ ಬದಲಿಸಿಲ್ಲ, ಕೇವಲ ನನ್ನ ಕೊಠಡಿಯನ್ನು ಮಾತ್ರ ಬದಲಿಸಿದ್ದೇನೆ. ನಾನು ಈಗಲೂ ಟಿಎಂಸಿಯಲ್ಲೇ ಇದ್ದೇನೆ" ಎಂದು ಹೇಳಿದರು.

ಬಿಳಿ ಕುರ್ಥಾ ಧರಿಸಿ, ತಮ್ಮ ಟ್ರೇಡ್‌ಮಾರ್ಕ್ ಕಪ್ಪು ಕನ್ನಡಕ ಧರಿಸಿದ್ದ ಮದನ್ ಮಿತ್ರ, ರಿತಬ್ರತ ಬ್ಯಾನರ್ಜಿ ಅವರ ಪಕ್ಕದಲ್ಲಿ ಕುಳಿತು ಮಾತನಾಡುತ್ತಾ, ಮಮತಾ ಬ್ಯಾನರ್ಜಿ ಬಣದ ಯಾವುದೇ ಸಾಂಸ್ಥಿಕ ಜವಾಬ್ದಾರಿಯನ್ನು ಇನ್ನು ಮುಂದೆ ನಿರ್ವಹಿಸುವುದಿಲ್ಲ. ಆದರೆ ಟಿಎಂಸಿ ಶಾಸಕರಾಗಿ ಮುಂದುವರಿಯುವುದಾಗಿ ಘೋಷಿಸಿದರು.

MLA Madan Mitra joins Ritabrata-led rebel camp
ನಿರ್ಣಾಯಕ ಘಟ್ಟಕ್ಕೆ ಟಿಎಂಸಿ ಮೇಲಿನ ಅಧಿಕಾರದ ಹೋರಾಟ: ಜು.06 ರಂದು ಉಭಯ ಬಣಗಳಿಂದ ಚುನಾವಣಾ ಆಯೋಗಕ್ಕೆ ಭೇಟಿ; ದಾಖಲೆ ಸಲ್ಲಿಕೆ

ಬಂಡಾಯ ಬಣಕ್ಕೆ ಸೇರ್ಪಡೆ

ಇದೇ ವೆಳೆ "ಕಾಳಿಘಾಟ್ ಟಿಎಂಸಿಯ ರಾಷ್ಟ್ರೀಯ ಮತ್ತು ರಾಜ್ಯ ಸಮಿತಿಗಳ ಎಲ್ಲ ಹುದ್ದೆಗಳಿಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಮುಖ್ಯ ಸಚೇತಕ ಸ್ಥಾನವನ್ನೂ ತೊರೆಯುತ್ತಿದ್ದೇನೆ. ಆದರೆ ನಾನು ಟಿಎಂಸಿ ಶಾಸಕರಾಗಿಯೇ ಮುಂದುವರಿಯುತ್ತೇನೆ" ಎಂದು ಅವರು ಹೇಳಿದರು.

ಟಿಎಂಸಿಯಲ್ಲಿ ಬಣ ವಿಭಜನೆ ಬಹಿರಂಗವಾದ ಬಳಿಕ ರಿತಬ್ರತ ಬ್ಯಾನರ್ಜಿ ಬಣಕ್ಕೆ ಸೇರ್ಪಡೆಯಾದವರಲ್ಲಿ ಮದನ್ ಮಿತ್ರ ಅತ್ಯಂತ ಪ್ರಮುಖ ನಾಯಕರಾಗಿದ್ದು, ಇದು ಮಮತಾ ಬ್ಯಾನರ್ಜಿ ಬಣದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಟಿಎಂಸಿಯ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿರುವ ಮದನ್ ಮಿತ್ರ, ಹಲವು ವರ್ಷಗಳಿಂದ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಚರರಾಗಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ಅವರು ಪಕ್ಷದ ಕೆಲವು ನಾಯಕತ್ವದ ನಿರ್ಧಾರಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರೂ, ಪಕ್ಷ ತೊರೆಯುವ ಉದ್ದೇಶ ಇಲ್ಲ ಎಂದು ಪದೇ ಪದೇ ಹೇಳುತ್ತಿದ್ದರು.

ಆದರೆ ಇದೀಗ ಅವರು ರಿತಬ್ರತ ಬ್ಯಾನರ್ಜಿ ಬಣದೊಂದಿಗೆ ಕೈಜೋಡಿಸಿರುವುದು ಬಂಡಾಯ ಬಣಕ್ಕೆ ಇದುವರೆಗಿನ ಅತ್ಯಂತ ದೊಡ್ಡ ರಾಜಕೀಯ ಬಲವನ್ನು ನೀಡಿದೆ. ಜೊತೆಗೆ ಟಿಎಂಸಿಯೊಳಗಿನ ಅಸಮಾಧಾನ ಕೆಲವೇ ಶಾಸಕರಿಗೆ ಸೀಮಿತವಾಗಿಲ್ಲ ಎಂಬ ಬಂಡಾಯ ಬಣದ ವಾದಕ್ಕೂ ಇದು ಮತ್ತಷ್ಟು ಬಲ ನೀಡಿದೆ.

ಟಿಎಂಸಿ ಕಚ್ಚಾಟ

ಕಳೆದ ಕೆಲವು ತಿಂಗಳುಗಳಿಂದ ರಿತಬ್ರತ ಬ್ಯಾನರ್ಜಿ ಬಣವು ಮಮತಾ ಬ್ಯಾನರ್ಜಿ ಅವರ ನಾಯಕತ್ವವನ್ನು ಪ್ರಶ್ನಿಸುತ್ತಿದ್ದು, ತಾವೇ "ನಿಜವಾದ ತೃಣಮೂಲ ಕಾಂಗ್ರೆಸ್" ಎಂದು ಹೇಳಿಕೊಂಡಿದೆ. ಬಂಡಾಯ ಬಣವು ಪ್ರತ್ಯೇಕ ಸಂಘಟನಾ ರಚನೆಯನ್ನು ಘೋಷಿಸಿದ್ದು, ಪಕ್ಷದ ಕೇಂದ್ರ ಕಚೇರಿಯ ಮೇಲೂ ತಮ್ಮದೇ ನಿಯಂತ್ರಣವಿದೆ ಎಂದು ಹೇಳಿಕೊಂಡಿದೆ. ಆದರೆ ಈ ಎಲ್ಲ ಹೇಳಿಕೆಗಳನ್ನು ಮಮತಾ ಬ್ಯಾನರ್ಜಿ ಬಣ ತಳ್ಳಿಹಾಕಿದೆ.

ಮದನ್ ಮಿತ್ರ ಅವರ ನಡೆ ಕುರಿತು ಮಂಗಳವಾರ ರಾತ್ರಿ ಭಾರಿ ಊಹಾಪೋಹಗಳು ಜೋರಾಗಿದ್ದವು. ಅವರು ಬಂಡಾಯ ಶಾಸಕ ಸಂದೀಪನ್ ಸಾಹಾ ಅವರ ಎಂಟಾಲಿಯ ನಿವಾಸಕ್ಕೆ ಭೇಟಿ ನೀಡಿದ್ದರು. ಸಂದೀಪನ್ ಸಾಹಾ ಆ ವೇಳೆ ಮನೆಯಲ್ಲಿ ಇರದಿದ್ದರೂ, ಅವರ ತಂದೆ ಹಾಗೂ ಮಾಜಿ ಶಾಸಕ ಸ್ವರ್ಣಕಮಲ್ ಸಾಹಾ ಅವರೊಂದಿಗೆ ಮದನ್ ಮಿತ್ರ ಸುದೀರ್ಘ ಚರ್ಚೆ ನಡೆಸಿದ್ದರು.

ನಂತರ ಸಂದೀಪನ್ ಸಾಹಾ ದೂರವಾಣಿ ಮೂಲಕ ಮದನ್ ಮಿತ್ರ ಅವರೊಂದಿಗೆ ಮಾತನಾಡಿದ್ದು, ಭೇಟಿಯಾಗುವ ಇಚ್ಛೆಯನ್ನು ಹಿರಿಯ ಶಾಸಕ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಗಳು ಅವರ ರಾಜಕೀಯ ನಡೆ ಬಗ್ಗೆ ಕುತೂಹಲ ಹೆಚ್ಚಿಸಿತ್ತು.

ಈ ರಾಜಕೀಯ ಬೆಳವಣಿಗೆಗೆ ಮತ್ತೊಂದು ಮಹತ್ವದ ಆಯಾಮವೆಂದರೆ, ನಗರಪಾಲಿಕೆ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮದನ್ ಮಿತ್ರ ಅವರ ಪತ್ನಿ ಹಾಗೂ ಇಬ್ಬರು ಪುತ್ರರಿಗೆ ಸಮನ್ಸ್ ಜಾರಿ ಮಾಡಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.

ಆದರೆ ಇಡಿ ಸಮನ್ಸ್ ಮತ್ತು ತಮ್ಮ ಬಂಡಾಯ ಬಣ ಸೇರ್ಪಡೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಮದನ್ ಮಿತ್ರ ಅಥವಾ ರಿತಬ್ರತ ಬ್ಯಾನರ್ಜಿ ಬಣ ಹೇಳಿಲ್ಲ. ಆದರೂ ಈ ಬೆಳವಣಿಗೆಯ ಸಮಯ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಟಿಎಂಸಿಯೊಳಗಿನ ಅಧಿಕಾರದ ಪೈಪೋಟಿ ತೀವ್ರಗೊಳ್ಳುತ್ತಿರುವ ನಡುವೆಯೇ, ಪಕ್ಷದ ರಾಜಕೀಯ ಪರಂಪರೆ, ಸಂಘಟನೆ ಹಾಗೂ ಬೆಂಬಲಿಗರ ಮೇಲೆ ತಮ್ಮದೇ ಹಕ್ಕು ಇದೆ ಎಂದು ಎರಡೂ ಬಣಗಳು ಪ್ರತಿಪಾದಿಸುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com