'ನಿಮ್ಮ ಅಂತ್ಯ ನೋಡುವವರೆಗೂ ನಾನು ಸಾಯಲ್ಲ': BJP ವಿರುದ್ಧ ದೀದಿ ಗುಡುಗು; 'ಮತ್ತೆ ಶೂನ್ಯದಿಂದ ಪಕ್ಷ ಕಟ್ಟುತ್ತೇನೆ' - Mamata Banerjee

ಯಾರೂ ನನ್ನನ್ನು ತಡೆಯಲು ಸಾಧ್ಯವಿಲ್ಲ. 2004ರ ನಂತರ ಮತ್ತೆ ಪಕ್ಷವನ್ನು ಕಟ್ಟಿದ್ದೇನೆ. ಅಗತ್ಯವಿದ್ದರೆ 2026ರ ನಂತರವೂ ಮತ್ತೆ ಆರಂಭಿಸುತ್ತೇನೆ..
Mamata Banerjee warns BJP as growing dissent grips TMC
ಮಮತಾ ಬ್ಯಾನರ್ಜಿ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬಂಡಾಯ ಮುಂದುವರೆದಿರುವಂತೆಯೇ ತಮ್ಮ ವಿರೋಧಿಗಳ ಗುಡುಗಿರುವ ಮಾಜಿ ಸಿಎಂ ಮಮತಾ ಬ್ಯಾನರ್ಜಿ 'ನಿಮ್ಮ ಅಂತ್ಯ ನೋಡುವವರೆಗೂ ನಾನು ಸಾಯಲ್ಲ' ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ)ಯಲ್ಲಿ ಬಂಡಾಯ ತೀವ್ರಗೊಳ್ಳುತ್ತಿರುವ ನಡುವೆಯೇ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬುಧವಾರ ಬಿಜೆಪಿ ಮತ್ತು ವಿರೋಧಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ರಾಜಕೀಯ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ ಅವರು, "ಅವರು (ಬಿಜೆಪಿ) ನನಗೆ ಹೃದಯಾಘಾತವಾಗಲಿ ಎಂದು ಬಯಸಿದ್ದರು. ಆದರೆ ನಿಮ್ಮ ಅಂತ್ಯ ನೋಡುವವರೆಗೂ ನಾನು ಬದುಕಿರುತ್ತೇನೆ" ಎಂದು ಗುಡುಗಿದರು.

ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಪಕ್ಷ ತೊರೆದ ನಾಯಕರನ್ನು "ದ್ರೋಹಿಗಳು" ಎಂದು ಕರೆದಿದ್ದು, ಅವರ ಪರವಾಗಿ ರಾಜ್ಯದ ಜನರ ಕ್ಷಮೆ ಯಾಚಿಸಿದರು. "ದ್ರೋಹಿಗಳ ಪರವಾಗಿ ನಾನು ಜನರ ಬಳಿ ಕ್ಷಮೆ ಕೇಳುತ್ತೇನೆ. ರಾಜಕೀಯ ಉಳಿವಿಗಾಗಿ ನಾನು ಅಥವಾ ನನ್ನ ಕುಟುಂಬ ಎಂದಿಗೂ ಆತ್ಮಸಾಕ್ಷಿಯನ್ನು ಮಾರಿಕೊಂಡಿಲ್ಲ. ನಾವು ರಾಜಿ ಮಾಡಿಕೊಂಡಿದ್ದರೆ ಇಷ್ಟೊಂದು ಕಿರುಕುಳ ಅನುಭವಿಸಬೇಕಾಗುತ್ತಿರಲಿಲ್ಲ" ಎಂದು ಅವರು ಹೇಳಿದರು.

Mamata Banerjee warns BJP as growing dissent grips TMC
ಇಡಿ ಸಮನ್ಸ್ ಬೆನ್ನಲ್ಲೇ ಮಮತಾ ಬಣಕ್ಕೆ ಮತ್ತೊಂದು ಆಘಾತ; ಬಂಡಾಯ ಬಣ ಸೇರಿದ ಹಿರಿಯ TMC ಶಾಸಕ ಮದನ್ ಮಿತ್ರ

ಬಿಜೆಪಿ ವಿರುದ್ಧ ವಾಗ್ದಾಳಿ

ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಪೊಲೀಸರನ್ನು ಬಳಸಿಕೊಂಡು ಟಿಎಂಸಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಮಮತಾ, "ಬಿಜೆಪಿ ಪೊಲೀಸರನ್ನು ಬಳಸಿಕೊಂಡು ಟಿಎಂಸಿಯನ್ನು ಒಡೆಯಲು ಪ್ರಯತ್ನಿಸುತ್ತಿದೆ. ಬೆದರಿಕೆ ಮತ್ತು ಭಯದ ಮೂಲಕ ಪುರಸಭೆಗಳನ್ನು ಅಸ್ಥಿರಗೊಳಿಸುತ್ತಿದೆ" ಎಂದು ಹೇಳಿದರು.

ವಿಚಾರಣೆ ಎದುರಿಸುತ್ತಿರುವ ನಾಯಕರು ರಾಜಕೀಯ ಅನುಕೂಲಕ್ಕಾಗಿ ಬಿಜೆಪಿಗೆ ಸೇರುತ್ತಿದ್ದಾರೆ. ಯಾರಿಗಾದರೂ ಸೆಟ್ಟಿಂಗ್ ಇದ್ದರೆ ಅವರು ಬಿಜೆಪಿಯ ವಾಷಿಂಗ್ ಮಷೀನ್‌ಗೆ ಹೋಗುತ್ತಿದ್ದಾರೆ. ಭಯದಿಂದ ಶಾಸಕರು ಮತ್ತು ಸಂಸದರು 'ಸೆಟ್ಟಿಂಗ್ ಕಂಪನಿ' ಸೇರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಭಿಷೇಕ್ ಬ್ಯಾನರ್ಜಿ ಪರ ಮಮತಾ ಬ್ಯಾಟಿಂಗ್

ಇದೇ ವೇಳೆ ಪಕ್ಷದಲ್ಲಿ ಉಂಟಾಗಿರುವ ಬಂಡಾಯಕ್ಕೆ ಅಭಿಷೇಕ್ ಬ್ಯಾನರ್ಜಿ ಅವರ ಏಕಪಕ್ಷೀಯ ವರ್ತನೆಯೇ ಕಾರಣ ಎಂದು ಕೆಲವು ಬಂಡಾಯ ನಾಯಕರು ಆರೋಪಿಸಿರುವ ಬೆನ್ನಲ್ಲೇ, ಮಮತಾ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದರು.

"ಅಭಿಷೇಕ್ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ. ಅವರ ಕುಟುಂಬದ ಸದಸ್ಯರಿಗೂ ಸಮನ್ಸ್ ನೀಡಲಾಗಿದೆ. ಅವರು ಬಯಸಿದ್ದರೆ ಸುಲಭವಾಗಿ ಅದರಿಂದ ಹೊರಬರಬಹುದಿತ್ತು. ಆದರೆ ಅವರು ಹೋರಾಟದಿಂದ ಹಿಂದೆ ಸರಿಯಲಿಲ್ಲ. ಹುಲಿಯಂತೆ ಹೋರಾಡುತ್ತಿದ್ದಾರೆ. ಅದರಿಂದ ಅವರ ಎಲ್ಲಾ ತಪ್ಪುಗಳು ಕ್ಷಮಿಸಲ್ಪಟ್ಟಿವೆ" ಎಂದು ಮಮತಾ ಹೇಳಿದರು.

ಮದನ್ ಮಿತ್ರ ನಿರ್ಧಾರಕ್ಕೆ ಇಡಿ ಸಮನ್ಸ್ ಕಾರಣ

ಇನ್ನು ಇಂದು ಬಂಡಾಯ ಶಾಸಕರ ಬಣ ಸೇರಿದ ಶಾಸಕ ಮದನ್ ಮಿತ್ರ ಕುರಿತು ಮಾತನಾಡಿದ ದೀದಿ, "ಇಂದು ಪಕ್ಷ ತೊರೆದ ವ್ಯಕ್ತಿ ನಿನ್ನೆ ತನ್ನ ಕುಟುಂಬಕ್ಕೆ ಇಡಿ ಸಮನ್ಸ್ ಬಂದಿದೆ ಎಂದು ನಮಗೆ ತಿಳಿಸಿದ್ದರು. ಆಗಲೇ ಅವರು ಬಣ ಬದಲಾಯಿಸಬಹುದು ಎಂಬುದು ನಮಗೆ ಅರ್ಥವಾಗಿತ್ತು. ಅವರ ನಿರ್ಧಾರಕ್ಕೂ ಅಭಿಷೇಕ್‌ಗೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದರು.

ಇದಕ್ಕೆ ತದ್ವಿರುದ್ಧ ಎಂಬಂತೆ ಮದನ್ ಮಿತ್ರ ಈ ಹಿಂದೆ, ಅಭಿಷೇಕ್ ಬ್ಯಾನರ್ಜಿ ಆರು ತಿಂಗಳು ನಾಯಕತ್ವದಿಂದ ಹಿಂದೆ ಸರಿಯಬೇಕು ಎಂಬ ತಮ್ಮ ಬೇಡಿಕೆಯನ್ನು ಪಕ್ಷ ತಿರಸ್ಕರಿಸಿದ್ದರಿಂದಲೇ ತಾವು ಪಕ್ಷ ತೊರೆದಿದ್ದಾಗಿ ಹೇಳಿದ್ದರು.

Mamata Banerjee warns BJP as growing dissent grips TMC
Bankipur bypoll: ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಮುಂದಾದ ಪ್ರಶಾಂತ್‍ಗೆ ಭಾರಿ ಹಿನ್ನಡೆ; BJP ಸೇರಿದ ಕೆ.ಸಿ ಸಿನ್ಹಾ!

ಶೂನ್ಯದಿಂದ ಪಕ್ಷ ಕಟ್ಟುತ್ತೇನೆ

ಇದೇ ವೇಳೆ ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ ಕುರಿತು ಮಾತನಾಡಿದ ಮಮತಾ ಬ್ಯಾನರ್ಜಿ, ಪಕ್ಷದಿಂದ ನಾಯಕರ ನಿರ್ಗಮನವಾಗುತ್ತಿರುವ ನಡುವೆಯೂ ಹೋರಾಟ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದರು. "ಯಾರೂ ನನ್ನನ್ನು ತಡೆಯಲು ಸಾಧ್ಯವಿಲ್ಲ. 2004ರ ನಂತರ ಮತ್ತೆ ಪಕ್ಷವನ್ನು ಕಟ್ಟಿದ್ದೇನೆ. ಅಗತ್ಯವಿದ್ದರೆ 2026ರ ನಂತರವೂ ಮತ್ತೆ ಆರಂಭಿಸುತ್ತೇನೆ" ಎಂದು ಸವಾಲು ಹಾಕಿದರು.

ಸಿಂಗೂರ್ ಭೂಸ್ವಾಧೀನ ವಿರೋಧಿ ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವು ಜನಾಂದೋಲನಗಳಲ್ಲಿ ಭಾಗಿಯಾಗಿದ್ದನ್ನು ನೆನಪಿಸಿಕೊಂಡ ಮಮತಾ, ಕಮ್ದುನಿ ಮತ್ತು ಆರ್‌ಜಿ ಕರ್ ವೈದ್ಯಕೀಯ ಕಾಲೇಜು-ಆಸ್ಪತ್ರೆ ದುರಂತಗಳ ಸ್ಥಳಕ್ಕೂ ಭೇಟಿ ನೀಡಿದ್ದಾಗಿ ಹೇಳಿದರು. ಇದೇ ವೇಳೆ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾಗಿ ಮಮತಾ ಬ್ಯಾನರ್ಜಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com