

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ(ಇಸ್ರೋ) 120ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ಹಾಗೂ ತಾಂತ್ರಿಕ ತಜ್ಞರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವರ್ಷದಲ್ಲಿ ಒಟ್ಟು 120ಕ್ಕೂ ಹೆಚ್ಚು ತಜ್ಞರು ರಾಜೀನಾಮೆ ನೀಡಿದ್ದು, ಇದರಲ್ಲಿ ಚಂದ್ರಯಾನ -3 ಹಾಗೂ ಸ್ಪೇಡೆಕ್ಸ್ ಯೋಜನೆಗಳ ಪ್ರಮುಖ ವಿಜ್ಞಾನಿಗಳು ಸೇರಿರುವುದು ಕಳವಳಕ್ಕೆ ಕಾರಣವಾಗಿದೆ.
ಕೇಂದ್ರ ಬಾಹ್ಯಾಕಾಶ ಇಲಾಖೆ (DOS) ವಿಜ್ಞಾನಿಗಳ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ (ವಿಆರ್ ಎಸ್) ನಿಯಮಗಳನ್ನು ಬಿಗಿಗೊಳಿಸಿದೆ. ವಿಜ್ಞಾನಿಗಳ ರಾಜೀನಾಮೆಗೆ ಇದೇ ಕಾರಣ ಎನ್ನಲಾಗುತ್ತಿದೆ. ಇಂತಹ ಸಲಹೆಗಳನ್ನು ಕೇಂದ್ರ ಸರ್ಕಾರ ಗುರುವಾರ ನಿರಾಕರಿಸಿದೆ.
ಸಂಪೂರ್ಣವಾಗಿ ಆಡಳಿತಾತ್ಮಕ ಕಾರಣಗಳಿಗಾಗಿ" ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಬಾಹ್ಯಾಕಾಶ ಇಲಾಖೆಯ ಇತ್ತೀಚಿನ ಸುತ್ತೋಲೆಯ ಕುರಿತಾದ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿಂಗ್, ವಿಜ್ಞಾನಿಗಳು ಇಸ್ರೋ ತೊರೆಯಲು ಇದೇ ಕಾರಣ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದರು. ಇಲ್ಲ, ಆಡಳಿತಾತ್ಮಕ ಕಾರಣಗಳಿಗಾಗಿ ಹಾಗೆ ಮಾಡಲಾಗಿದೆ. ಇದರಿಂದಾಗಿ ಸಾಕಷ್ಟು ಪರಿಕವ್ವವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇಸ್ರೋದಂತಹ ದೊಡ್ಡ ಸಂಸ್ಥೆಯಲ್ಲಿ ಸಿಬ್ಬಂದಿಯ ಬದಲಾವಣೆ ಅಥವಾ ವರ್ಗಾವಣೆ ಎಂಬುದು ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳುವ ಮೂಲಕ, ಸಿಬ್ಬಂದಿ ಸಂಸ್ಥೆ ತೊರೆಯುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ವ್ಯಕ್ತವಾದ ಕಳವಳವನ್ನೂ ಸಚಿವರು ತಳ್ಳಿಹಾಕಿದರು.
ಅನೇಕರು ಹೋಗಿದ್ದಾರೆ, ಅನೇಕರು ಬಂದಿದ್ದಾರೆ," ಎಂದು ಹೇಳಿದ ಸಿಂಗ್, ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದವಿಲ್ಲ" ಎಂದು ಸ್ಪಷ್ಟಪಡಿಸಿದರು.