'ದೇಶದ ಇತಿಹಾಸದಲ್ಲೇ ಯುವಜನ ವಿರೋಧಿ ಪ್ರಧಾನಿ ಮೋದಿ' : CJP Protest ವಿಚಾರವಾಗಿ ರಾಹುಲ್ ಗಾಂಧಿ ವಾಗ್ದಾಳಿ

ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿರುವ ವಿದ್ಯಾರ್ಥಿಗಳಿಗೆ ಉತ್ತರಗಳ ಬದಲು ಲಾಠಿ ಪೆಟ್ಟು ಮತ್ತು ಬಂಧನ ಸಿಗುತ್ತಿದೆ..
PM modi-Rahul gandhi
ಪ್ರಧಾನಿ ಮೋದಿ- ರಾಹುಲ್ ಗಾಂಧಿ
Updated on

ನವದೆಹಲಿ: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಭಾರತದ ಇತಿಹಾಸದಲ್ಲೇ ನರೇಂದ್ರ ಮೋದಿ ಅತ್ಯಂತ ಯುವಜನ ವಿರೋಧಿ ಪ್ರಧಾನಮಂತ್ರಿ" ಎಂದು ಆರೋಪಿಸಿದ ಅವರು, "ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿರುವ ವಿದ್ಯಾರ್ಥಿಗಳಿಗೆ ಉತ್ತರಗಳ ಬದಲು ಲಾಠಿ ಪೆಟ್ಟು ಮತ್ತು ಬಂಧನ ಸಿಗುತ್ತಿದೆ" ಎಂದು ಟೀಕಿಸಿದರು.

ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಜೊತೆಗೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಲು ಕೂಡ ಪ್ರಧಾನಿ ಮೋದಿ ಸಿದ್ಧರಿಲ್ಲ ಎಂದು ಕಿಡಿಕಾರಿದರು.

PM modi-Rahul gandhi
'ಪ್ರತಿಭಟನಾಕಾರರ ಮೇಲೆ ಕಣ್ಗಾವಲು? ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಿದ್ದೀರಾ?': ದೆಹಲಿ ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ

'152 ಪ್ರಶ್ನೆಪತ್ರಿಕೆ ಸೋರಿಕೆ, 7.5 ಕೋಟಿ ವಿದ್ಯಾರ್ಥಿಗಳಿಗೆ ಅನ್ಯಾಯ'

ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ, "ಪ್ರಧಾನಿ ಮೋದಿ ಭಾರತದ ಇತಿಹಾಸದಲ್ಲೇ ಅತ್ಯಂತ ಯುವಜನ ವಿರೋಧಿ ಪ್ರಧಾನಿ. ವಿಫಲರಾದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳುವ ಧೈರ್ಯವೂ ಅವರಿಗೆ ಇಲ್ಲ. 152 ಪ್ರಶ್ನೆಪತ್ರಿಕೆ ಸೋರಿಕೆಗಳು ನಡೆದಿವೆ. 7.5 ಕೋಟಿ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಆದರೆ ಒಬ್ಬ ಅಪರಾಧಿಗೂ ಶಿಕ್ಷೆಯಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಶಿಕ್ಷೆ ಅನುಭವಿಸುತ್ತಿರುವವರು ಮಾತ್ರ ಕಷ್ಟಪಟ್ಟು ಓದುತ್ತಿರುವ ವಿದ್ಯಾರ್ಥಿಗಳು. ಶಿಕ್ಷಣ ವ್ಯವಸ್ಥೆಯ ಬಗ್ಗೆ ನ್ಯಾಯಸಮ್ಮತ ಪ್ರಶ್ನೆ ಕೇಳಿದ ಮಕ್ಕಳಿಗೆ ಉತ್ತರದ ಬದಲು ಲಾಠಿ ಮತ್ತು ಬಂಧನ ನೀಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರು ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ.

ಆದರೆ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳನ್ನು ಎಳೆದು ಹೊಡೆದು ಬಂಧಿಸಲಾಗುತ್ತಿದೆ. ಈ ಸರ್ಕಾರ ಯುವಜನರನ್ನು ವಿಫಲಗೊಳಿಸುತ್ತಿಲ್ಲ, ಅವರ ಮೇಲೆಯೇ ದಾಳಿ ನಡೆಸುತ್ತಿದೆ" ಎಂದು ಆರೋಪಿಸಿದರು.

'ವಿದ್ಯಾರ್ಥಿಗಳು ಅಪರಾಧಿಗಳಲ್ಲ, ತಮ್ಮ ಹಕ್ಕು ಕೇಳುತ್ತಿದ್ದಾರೆ'

ಅಂತೆಯೇ ತಮ್ಮ ಪೋಸ್ಟ್‌ಗೆ ವಿಡಿಯೊವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ನ್ಯಾಯಯುತ ಮತ್ತು ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆಯನ್ನು ಮಾತ್ರ ಬೇಡುತ್ತಿದ್ದಾರೆ ಎಂದು ಹೇಳಿದರು.

"ಈ ದೇಶದಲ್ಲಿ ಯುವಕರೇ ಬಹುಸಂಖ್ಯಾತರು. ನರೇಂದ್ರ ಮೋದಿ ಭಾರತ ಕಂಡ ಅತ್ಯಂತ ಯುವಜನ ವಿರೋಧಿ ಪ್ರಧಾನಿ. ದೆಹಲಿಯ ಬೀದಿಗಳಲ್ಲಿ ನಡೆಯುತ್ತಿರುವ ಹುಡುಗ-ಹುಡುಗಿಯರು ಅಪರಾಧಿಗಳಲ್ಲ. ಅವರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ.

ಅವರಿಗೆ ಗೌರವ ನೀಡುವ, ನ್ಯಾಯಯುತವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ವ್ಯವಸ್ಥೆ ಬೇಕೆಂದು ಆಗ್ರಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಸಿಡಿಸುವುದು, ಲಾಠಿ ಚಾರ್ಜ್ ನಡೆಸುವುದು ಪ್ರಜಾಪ್ರಭುತ್ವವಲ್ಲ. ಅದು ಭಾರತದ ಸಂಸ್ಕೃತಿಯೂ ಅಲ್ಲ" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com