ಜಮ್ಮು-ಕಾಶ್ಮೀರದಲ್ಲಿ ಮಳೆಯ ರೌದ್ರನರ್ತನ: ಭೂಕುಸಿತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ; ಸಾವಿನ ಸಂಖ್ಯೆ 27ಕ್ಕೆ ಏರಿಕೆ, Video

ಪೂಂಚ್ ಜಿಲ್ಲೆಯ ಲೋರನ್ ದುಮಿಲಾನ್ (Loran Dumilan) ಗ್ರಾಮದ ಮೇಲ್ಭಾಗದಲ್ಲಿರುವ ಮಣ್ಣಿನ ಮನೆಯ ಮೇಲೆ ಭೂಕುಸಿತ ಸಂಭವಿಸಿದ್ದು, ಘಟನೆಯ ವೇಳೆ ಮನೆಯೊಳಗಿದ್ದ ಏಳು ಮಂದಿ ಮಣ್ಣಿನಡಿ ಸಿಲುಕಿದ್ದರು.
Jammu and Kashmir floods
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ
Updated on

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭೀಕರ ಅವಾಂತರ ಸೃಷ್ಟಿಸಿದ್ದು, ಪೂಂಚ್ ಜಿಲ್ಲೆಯಲ್ಲಿ ಭೂಕುಸಿತಕ್ಕೆ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ ಪರಿಣಾಮ ರಾಜ್ಯದಲ್ಲಿನ ಮಳೆ ಸಂಬಂಧಿತ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಪೂಂಚ್ ಜಿಲ್ಲೆಯ ಲೋರನ್ ದುಮಿಲಾನ್ (Loran Dumilan) ಗ್ರಾಮದ ಮೇಲ್ಭಾಗದಲ್ಲಿರುವ ಮಣ್ಣಿನ ಮನೆಯ ಮೇಲೆ ಭೂಕುಸಿತ ಸಂಭವಿಸಿದ್ದು, ಘಟನೆಯ ವೇಳೆ ಮನೆಯೊಳಗಿದ್ದ ಏಳು ಮಂದಿ ಮಣ್ಣಿನಡಿ ಸಿಲುಕಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ನಾಗರಿಕ ಆಡಳಿತ ಹಾಗೂ ಸ್ಥಳೀಯ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ದಿನವಿಡೀ ನಡೆದ ಕಾರ್ಯಾಚರಣೆಯ ಬಳಿಕ ಏಳು ಮೃತದೇಹಗಳನ್ನು ಹೊರತೆಗೆಯಲಾಯಿತು.

ಮೃತರನ್ನು 38 ವರ್ಷದ ಜಾಹಿದಾ ಬೇಗಂ, ಅವರ ಮಕ್ಕಳಾದ 6 ವರ್ಷದ ಮನಾನ್ ರಫೀಕ್ ಮತ್ತು 4 ವರ್ಷದ ಅಲೀಸಾ, ಜಾಹಿದಾ ಅವರ ಮೈದುನ 27 ವರ್ಷದ ತನ್ವೀರ್ ಅಹ್ಮದ್ ಭಟ್, ನಾದಿನಿಯರಾದ 33 ವರ್ಷದ ಶಮೀಮ್ ಅಖ್ತರ್ ಹಾಗೂ 31 ವರ್ಷದ ಶಬ್ನಮ್ ಬಾನೋ, ಮತ್ತು 17 ವರ್ಷದ ಮೊಹಮ್ಮದ್ ಇರ್ಫಾನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಂಡಿ ತಹಸೀಲಿನ ಅರಿಗಾಂ ಗ್ರಾಮದ ನಿವಾಸಿಗಳಾಗಿದ್ದರು ಎನ್ನಲಾಗಿದೆ.

ಪೂಂಚ್ ಜಿಲ್ಲಾಧಿಕಾರಿ ಅಶೋಕ್ ಕುಮಾರ್ ಶರ್ಮಾ ಘಟನೆ ದೃಢಪಡಿಸಿದ್ದು, ಮೃತದೇಹಗಳನ್ನು ವೈದ್ಯಕೀಯ-ಕಾನೂನು ಪ್ರಕ್ರಿಯೆಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

Jammu and Kashmir floods
ಮಳೆ ಕೊರತೆ: ವಲಸೆ ತಡೆಯಲು ಸರ್ಕಾರ ಮಾಸ್ಟರ್ ಪ್ಲ್ಯಾನ್; VB-G RAM G ಉದ್ಯೋಗ ನೀಡಲು ಮುಂದು!

ರಾಜೌರಿ, ಪೂಂಚ್‌ನಲ್ಲಿ ಭಾರೀ ಹಾನಿ

ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಜಮ್ಮು ವಿಭಾಗದಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, ರಾಜೌರಿ ಮತ್ತು ಪೂಂಚ್ ಜಿಲ್ಲೆಗಳು ತೀವ್ರ ಹಾನಿಗೊಳಗಾಗಿವೆ. ಈ ಮೊದಲು ರಾಜೌರಿ ಜಿಲ್ಲೆಯ ಸುರಾನ್ ನದಿಯ ತೀರದಲ್ಲಿದ್ದ ಮನೆಯೊಂದು ಪ್ರವಾಹಕ್ಕೆ ಕೊಚ್ಚಿ ಹೋಗಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದರು.

ರಾಜೌರಿ ಶಾಸಕ ಇಫ್ತಿಖಾರ್ ಚೌಧರಿ ಅವರ ಪ್ರಕಾರ, ಇತ್ತೀಚಿನ ಭೂಕುಸಿತಕ್ಕೂ ಮುನ್ನ ರಾಜೌರಿಯಲ್ಲಿ 3 ಮಂದಿ ಹಾಗೂ ಪೂಂಚ್‌ನಲ್ಲಿ 15 ಮಂದಿ ಮೃತಪಟ್ಟಿದ್ದರು. ಹಲವಾರು ಮನೆಗಳು ನಾಶವಾಗಿದ್ದು, ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಕೆಲವೆಡೆ ವಿದ್ಯುತ್ ಮರುಸ್ಥಾಪನೆಯಾಗಿದ್ದರೂ, ಅನೇಕ ಪ್ರದೇಶಗಳು ಇನ್ನೂ ಕತ್ತಲೆಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.

ದೋಡಾದಲ್ಲೂ ಇಬ್ಬರ ಸಾವು

ಜುಲೈ 20ರಂದು ಡೋಡಾ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜಮ್ಮು-ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿಯ ರಗ್ಗಿ ನಲ್ಲಾ ಬಳಿ ಬೆಟ್ಟದಿಂದ ಉರುಳಿದ ಬಂಡೆ ಪ್ರಯಾಣಿಕರ ಬಸ್‌ಗೆ ಅಪ್ಪಳಿಸಿದ ಪರಿಣಾಮ ಮನೀಶ್ ಕುಮಾರ್ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಕಷ್ಟಿಗಢ ಪ್ರದೇಶದಲ್ಲಿ ಮನೆಯ ಮೇಲೆ ಬಂಡೆ ಬಿದ್ದ ಪರಿಣಾಮ ಶಿವದೇವಿ ಎಂಬ ಮಹಿಳೆ ಮೃತಪಟ್ಟಿದ್ದಾರೆ.

ಕೊಚ್ಚಿ ಹೋದ ವಾಹನಗಳು

ಇತ್ತ ರಾಜೌರಿ ಪಟ್ಟಣದ ಬೇಲಾ ಕಾಲೋನಿಯಲ್ಲಿ ದರ್ಹಾಲಿ ನದಿಯ ಪ್ರವಾಹಕ್ಕೆ ಸ್ಥಳೀಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸುಮಾರು 30 ವಾಹನಗಳು ಕೊಚ್ಚಿಹೋಗಿವೆ. ಸಮೀಪದ ಹಲವು ಮನೆಗಳು ಹಾಗೂ ಅಂಗಡಿಗಳಿಗೂ ಹಾನಿಯಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದ ಸುರನ್‌ಕೋಟೆ, ದರ್ಹಾಲ್, ಥಾನಮಂಡಿ ಹಾಗೂ ಮಂಜಕೋಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೊಬೈಲ್ ಟವರ್‌ಗಳು, ಆಪ್ಟಿಕಲ್ ಫೈಬರ್ ಕೇಬಲ್‌ಗಳು ಹಾಗೂ ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ದೂರಸಂಪರ್ಕ ಮತ್ತು ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೂ ಒಬ್ಬ ಮಹಿಳೆ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ವಿಕಾಸ್ ಅಹ್ಮದ್ ಅವರ ಮೃತದೇಹ ಜುಲೈ 19ರಂದು ರಾಜೌರಿಯ ಸಲಾನಿ ಪ್ರದೇಶದಲ್ಲಿ ಪತ್ತೆಯಾಗಿದೆ.

ಭಾರೀ ಮಳೆಯಿಂದ ಕಾರ್ಗಿಲ್‌ನಲ್ಲಿ ಮನೆಗಳು, ವಾಹನಗಳು ಮತ್ತು ಕೃಷಿಭೂಮಿಗೆ ಹಾನಿಯಾಗಿದೆ. ಗುರೆಜ್ ಪ್ರದೇಶದಲ್ಲಿ ಮೇಘಸ್ಫೋಟದಿಂದ ಕೆಸರು ಪ್ರವಾಹ ಹಾಗೂ ಬೆಳೆ ನಷ್ಟ ಸಂಭವಿಸಿದೆ. ರಾಂಬನ್‌ನಲ್ಲಿ ಚೆನಾಬ್ ನದಿಯ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ನದಿ ತೀರದಿಂದ ದೂರವಿರಲು ಸೂಚಿಸಿದ್ದಾರೆ. ಅಬ್ದುಲ್ಲಾ ಸೇತುವೆ ಸಮೀಪದ ಕೊಳಗೇರಿ ಪ್ರದೇಶಕ್ಕೆ ಪ್ರವಾಹ ನುಗ್ಗಿದ ಪರಿಣಾಮ 50ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ತಾರಿಕ್ ಸೇತುವೆ ಸಮೀಪದ ನಿವಾಸಿಗಳನ್ನೂ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.

Jammu and Kashmir floods
ಪ್ರತಿ ಮಳೆಗಾಲದಲ್ಲೂ ದೇಶದ ಪ್ರಮುಖ ನಗರಗಳಲ್ಲಿ ಪ್ರವಾಹ ಆಗೋದು ಯಾಕೆ? ನಿಜವಾದ ಕಾರಣವೇನು?

ಇನ್ನೂ ಮಳೆ ಸಾಧ್ಯತೆ

ಕೆಲವು ಪ್ರದೇಶಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಜುಲೈ 25ರವರೆಗೆ ಭಾರೀ ಮಳೆ ಮತ್ತು ಮೇಘಸ್ಫೋಟ ಸಂಭವಿಸುವ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಲಾಗಿದೆ. ನದಿ ತೀರ ಹಾಗೂ ತಗ್ಗು ಪ್ರದೇಶಗಳಿಗೆ ತೆರಳದಂತೆ ಜನರಿಗೆ ಮತ್ತೆ ಎಚ್ಚರಿಕೆ ನೀಡಲಾಗಿದೆ.

ಅಮರನಾಥ ಯಾತ್ರೆ ಸ್ಥಗಿತ

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಪಹಲ್ಗಾಮ್ ಮತ್ತು ಬಾಲ್ತಾಲ್ ಮಾರ್ಗಗಳಿಂದ ನಡೆಯುತ್ತಿದ್ದ ಅಮರನಾಥ ಯಾತ್ರೆಯನ್ನು ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರಾರ್ಥಿಗಳು ಸಮೀಪದ ಶಿಬಿರಗಳಲ್ಲಿ ಉಳಿದುಕೊಂಡು ಆಡಳಿತದೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ.

ಸಿಎಂ ಓಮರ್ ಅಬ್ದುಲ್ಲಾ ದೆಹಲಿ ಪ್ರವಾಸ ಮೊಟಕು

ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ರಾಜ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ತಮ್ಮ ದೆಹಲಿ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಜಮ್ಮುವಿಗೆ ಮರಳಿದ್ದಾರೆ. ರಾಜ್ಯದ ಪರಿಸ್ಥಿತಿಯನ್ನು ಸ್ವತಃ ಮೇಲ್ವಿಚಾರಣೆ ಮಾಡುವುದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ಪ್ರತಿಪಕ್ಷ ನಾಯಕ ಸುನೀಲ್ ಶರ್ಮಾ ನೇತೃತ್ವದ ಬಿಜೆಪಿ ನಿಯೋಗವು ಪೂಂಚ್ ಹಾಗೂ ರಾಜೌರಿಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದೆ.

Jammu and Kashmir floods
ರಾಜ್ಯದಲ್ಲಿ ಮುಂಗಾರು ಚುರುಕು: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ yellow ಅಲರ್ಟ್; ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಬದ್ಗಾಂನಲ್ಲಿ ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋದ ಡಜನ್‌ಗಟ್ಟಲೆ ಅಂಗಡಿಗಳು

ಜಮ್ಮು-ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾದ ಪ್ರವಾಹದ ಅಬ್ಬರಕ್ಕೆ ಬುದ್ಗಾಂ ಜಿಲ್ಲೆಯ ಬೀರವಾ (Beerwah) ಪ್ರದೇಶದಲ್ಲಿ ಡಜನ್‌ಗಟ್ಟಲೆ ಅಂಗಡಿಗಳು ಕೊಚ್ಚಿಹೋಗಿವೆ. ಹಠಾತ್ ಉಂಟಾದ ಪ್ರವಾಹದಿಂದ ನದಿಗಳು ಮತ್ತು ಹೊಳೆಗಳು ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ, ಪ್ರವಾಹದ ನೀರು ವ್ಯಾಪಾರ ಸಂಕೀರ್ಣಗಳಿಗೆ ನುಗ್ಗಿ ಹಲವು ಅಂಗಡಿಗಳನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಘಟನೆಯಿಂದ ವ್ಯಾಪಾರಿಗಳಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಸ್ಥಳೀಯ ಆಡಳಿತ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕಾರ್ಯಾಚರಣೆ ನಡೆಸುತ್ತಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು, ಹಾನಿಯ ನಿಖರ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಜನರು ನದಿ, ಹೊಳೆಗಳ ಸಮೀಪ ಹೋಗದಂತೆ ಆಡಳಿತ ಎಚ್ಚರಿಕೆ ನೀಡಿದ್ದು, ತಗ್ಗು ಪ್ರದೇಶದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com