'ನಮ್ಮ ವರ್ತನೆ-ಮಕ್ಕಳೊಂದಿಗೆ ನಡೆದುಕೊಳ್ಳುವ ರೀತಿ ಬದಲಾಗಬೇಕು': ಮೋಹನ್ ಭಾಗವತ್; Video

ಇಂದಿನ ಯುವಜನರು ಪ್ರತಿಯೊಂದು ವಿಷಯವನ್ನೂ ಪ್ರಶ್ನಿಸುವ ಮನೋಭಾವ ಹೊಂದಿದ್ದು, ಅವರಿಗೆ ಯಾವುದೇ ವಿಷಯದ ಹಿಂದಿರುವ ಕಾರಣವನ್ನು ವಿವರಿಸಬೇಕಾಗಿದೆ. ಅವರೊಂದಿಗೆ ಪ್ರೀತಿ, ಸಂವಹನ ಮತ್ತು ಅರ್ಥಪೂರ್ಣ ಒಡನಾಟ ಬೆಳೆಸುವುದು ಅತ್ಯಗತ್ಯ ಎಂದು RSS ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
Mohan Bhagawat
ಮೋಹನ್ ಭಾಗವತ್
Updated on

ನವದೆಹಲಿ: ಇಂದಿನ ಯುವಜನರು ಪ್ರತಿಯೊಂದು ವಿಷಯವನ್ನೂ ಪ್ರಶ್ನಿಸುವ ಮನೋಭಾವ ಹೊಂದಿದ್ದು, ಅವರಿಗೆ ಯಾವುದೇ ವಿಷಯದ ಹಿಂದಿರುವ ಕಾರಣವನ್ನು ವಿವರಿಸಬೇಕಾಗಿದೆ. ಅವರೊಂದಿಗೆ ಪ್ರೀತಿ, ಸಂವಹನ ಮತ್ತು ಅರ್ಥಪೂರ್ಣ ಒಡನಾಟ ಬೆಳೆಸುವುದು ಅತ್ಯಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ವಿಶ್ವ ಮಾಂಗಲ್ಯ ಸಭೆಯ 'ಸಮಕಾಲೀನ ಮಾತೃತ್ವ' ಕುರಿತ ರಾಷ್ಟ್ರೀಯ ಪ್ರಬೋಧನ ಸಭೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾವು ಚಿಕ್ಕವರಿದ್ದಾಗ ಹಿರಿಯರು ಹೇಳಿದ್ದನ್ನು ಪ್ರಶ್ನಿಸದೆ ಪಾಲಿಸುವ ಕಾಲವಿತ್ತು. ಈಗ ಹಾಗಿಲ್ಲ. ಇಂದಿನ ಯುವಜನರು ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಗೆ ಅದರ ಹಿಂದಿರುವ ಕಾರಣವನ್ನು ವಿವರಿಸಬೇಕು. ಅವರಿಗೆ ಸಾಕಷ್ಟು ಪ್ರೀತಿ ನೀಡಬೇಕು. ಅವರೊಂದಿಗೆ ಸಮಯ ಕಳೆಯಬೇಕು. ಅವರೊಂದಿಗೆ ಸಂವಾದ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಕುಟುಂಬಗಳೊಳಗೇ ಸಂಭಾಷಣೆ ಕಡಿಮೆಯಾಗುತ್ತಿದೆ ಎಂದು ಭಾಗವತ್ ಹೇಳಿದರು.

ಮಾತೃತ್ವವಿಲ್ಲದೆ ಸೃಷ್ಟಿ, ಪೋಷಣೆ ಮತ್ತು ಜೀವನದ ನಿರಂತರತೆ ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಮಾತೃತ್ವವೇ ಮಾನವ ನಾಗರಿಕತೆಯ ಅಡಿಪಾಯ ಎಂದು ಅವರು ಹೇಳಿದರು.

ಮಾತೃತ್ವದ ಕುರಿತು ಪುರುಷನಾದ ತಾವು ಮಾತನಾಡುವುದು ಒಂದು ರೀತಿಯ "ವಿರೋಧಾಭಾಸ" ಎಂದು ಹೇಳಿದ ಭಾಗವತ್, ಈ ವಿಷಯದಲ್ಲಿ ವಿಶ್ವ ಮಾಂಗಲ್ಯ ಸಭೆ ಈಗಾಗಲೇ ವ್ಯಾಪಕ ಚರ್ಚೆ ನಡೆಸಿದೆ ಎಂದರು. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟಾಗೋರ್ ಅವರಂತಹ ಮಹನೀಯರು ಮಾತೃತ್ವದ ಮಹತ್ವವನ್ನು ಒತ್ತಿಹೇಳಿದ್ದಾರೆ ಎಂದು ಅವರು ಉಲ್ಲೇಖಿಸಿದರು.

"ಮಾತೃತ್ವವಿಲ್ಲದೆ ಸೃಷ್ಟಿ, ಪೋಷಣೆ ಮತ್ತು ಜೀವನದ ನಿರಂತರತೆ ಸಾಧ್ಯವಿಲ್ಲ. ತಾಯಿಯೇ ಮಗುವಿನ ಮೊದಲ ಗುರು. ಜೀವನದುದ್ದಕ್ಕೂ ಮಗುವಿಗೆ ಭಾವನಾತ್ಮಕ ಶಕ್ತಿ ನೀಡುವ ಪ್ರಮುಖ ವ್ಯಕ್ತಿ ತಾಯಿ ಎಂದು ಅವರು ಹೇಳಿದರು.

ಮನುಷ್ಯನಲ್ಲಿ ಯೋಚಿಸುವ ಸಾಮರ್ಥ್ಯವಿದ್ದರೂ, ಆ ಚಿಂತನೆಗೆ ಸರಿಯಾದ ದಿಕ್ಕು ತೋರಿಸುವವರು ತಾಯಂದಿರೇ ಎಂದು ಅವರು ಹೇಳಿದರು.

ಕುಟುಂಬ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದ ಭಾಗವತ್, ಮನೆಗಳಲ್ಲಿ ಅರ್ಥಪೂರ್ಣ ಸಂಭಾಷಣೆ ನಡೆಯಬೇಕು ಎಂದು ಕರೆ ನೀಡಿದರು.

Mohan Bhagawat
Watch | ಒಬ್ಬರೇ 'ಮನ್ ಕಿ ಬಾತ್' ಬದಲು ಸಂಸತ್ತಿನಲ್ಲೇ ಹೇಳಿಕೆ ನೀಡಿ: ಖರ್ಗೆ

ಮಕ್ಕಳು ಕೇಳುವ ಪ್ರಶ್ನೆಗಳಿಗೆ ಪೋಷಕರು ತಾಳ್ಮೆಯಿಂದ ಉತ್ತರಿಸಬೇಕು. ತಮ್ಮ ಜ್ಞಾನವನ್ನು ನಿರಂತರವಾಗಿ ವಿಸ್ತರಿಸಿಕೊಳ್ಳಬೇಕು. ಮಕ್ಕಳು ಉಪದೇಶಕ್ಕಿಂತ ನಡೆನುಡಿಗಳಿಂದಲೇ ಹೆಚ್ಚು ಕಲಿಯುತ್ತಾರೆ. ಆದ್ದರಿಂದ ಪೋಷಕರು ತಮ್ಮ ವರ್ತನೆಯ ಮೂಲಕ ಮಾದರಿಯಾಗಬೇಕು ಎಂದು ಅವರು ಸಲಹೆ ನೀಡಿದರು.

ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, ಭಾರತದ ನಾಗರಿಕತೆಯ ಅಡಿಪಾಯ ಅತ್ಯಂತ ಬಲಿಷ್ಠವಾಗಿದೆ ಎಂದು ಹೇಳಿದರು. ಭಾರತದ ಸಾಂಸ್ಕೃತಿಕ ಪರಂಪರೆ, ಜ್ಞಾನ ವ್ಯವಸ್ಥೆ ಮತ್ತು ಇತಿಹಾಸದ ಬಗ್ಗೆ ಆತ್ಮವಿಶ್ವಾಸದಿಂದ ಸಮಾಜ ಮುಂದುವರಿಯಬೇಕು ಎಂದರು.

ವೈವಿಧ್ಯತೆಯ ನಡುವಿನ ಏಕತೆಯೇ ಭಾರತೀಯ ಸಂಸ್ಕೃತಿಯ ಸಾರ ಎಂದು ಹೇಳಿದ ಅವರು, ಯೋಚನೆ ಮಾಡದೆ ಇತರರ ಜೀವನಶೈಲಿಯನ್ನು ಅನುಸರಿಸುವ ಬದಲು ಕುಟುಂಬ ಮೌಲ್ಯಗಳು ಮತ್ತು ಸಾಮಾಜಿಕ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com