

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಮಾನ್ಸೂನ್ ಮಾರುತಗಳು 4 ದಿನಗಳ ತಡವಾಗಿ ಕೊನೆಗೂ ಕೇರಳ ಪ್ರವೇಶ ಮಾಡಿದ್ದು, ಭಾರಿ ಮಳೆ ಸುರಿಸುತ್ತಿದೆ.
ಮೇ 26ಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಆದ್ರೆ, ಒಂದು ವಾರ ತಡವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ. ಇದರ ಬೆನ್ನಲ್ಲೇ ಇತ್ತ ಕರ್ನಾಟಕದಲ್ಲೂ ಮುಂಗಾರು ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದ್ದರಿಂದ ಕರ್ನಾಟಕದಲ್ಲೂ ಮಳೆಗಾಲ ಆರಂಭವಾಗಲಿದ್ದು, ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗಲಿದೆ.
ಕರ್ನಾಟಕದಲ್ಲಿ ಭಾರಿ ಮಳೆ
ಕರ್ನಾಟಕದ (Karnataka) ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆಯ ಅಬ್ಬರ ಶುರುವಾಗಿದೆ. ಇನ್ನುಳಿಂದಂತೆ ಇಂದಿನಿಂದ ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮುಂಗಾರು ಮಳೆ ವ್ಯಾಪಿಸಲಿದೆ ಎನ್ನಲಾಗಿದೆ.
ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಇಂದಿನಿಂದ ಜೂನ್ 9ರವರೆಗೂ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಕರಾವಳಿಗೆ ಆರೆಂಜ್ ಅಲರ್ಟ್
ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೂನ್ 4 ರಂದು ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಜೂನ್ 5 ರಿಂದ ಜೂ. 10 ರವರೆಗೆ ಮಳೆಯ ತೀವ್ರತೆ ಗಮನಾರ್ಹವಾಗಿ ಹೆಚ್ಚಾಗಲಿದ್ದು, ಕರಾವಳಿ ಭಾಗದಲ್ಲಿ ವ್ಯಾಪಕ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮುನ್ಸೂಚನೆಯ ಸಂಪೂರ್ಣ ಅವಧಿಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಮಲೆನಾಡು ಜಿಲ್ಲೆಗಳಲ್ಲಿ ಜೂನ್ 9 ರವರೆಗೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಮಾನ್ಸೂನ್‌ನ ಉತ್ತರ ಮಿತಿಯು ಮತ್ತಷ್ಟು ಪ್ರಗತಿ ಸಾಧಿಸಿದ್ದು, ಅರೇಬಿಯನ್ ಸಮುದ್ರದ ಹೆಚ್ಚಿನ ಭಾಗಗಳು, ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡಿನ ಒಂದು ಸಣ್ಣ ಭಾಗ, ದಕ್ಷಿಣ ತಮಿಳುನಾಡಿನ ಕೆಲವು ಭಾಗಗಳಿಗೆ ಮುಂದುವರಿಯುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಐಎಂಡಿ ನಿರ್ದೇಶಕಿ ನೀತಾ ಕೆ ಗೋಪಾಲ್ ಅವರು, 'ನೈಋತ್ಯ ಮಾನ್ಸೂನ್ ಕೇರಳಕ್ಕೆ ಆಗಮಿಸಿದೆ; ಎಲ್ ನಿನೊ ಬಲಗೊಳ್ಳುವುದರಿಂದ ಈ ವರ್ಷದ ಭಾರತೀಯ ಬೇಸಿಗೆ ಮಾನ್ಸೂನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ" ಎಂದು ಹೇಳಿದರು.
Advertisement