'ಅತೀವ ದುಃಖ, ಭಾರವಾದ ಹೃದಯದಿಂದ ಹೋಗುತ್ತಿದ್ದೇನೆ': Annamalai ಬೆನ್ನಲ್ಲೇ ಪಕ್ಷ ತೊರೆದ ಮತ್ತೋರ್ವ ನಾಯಕಿ, BJPಗೆ ಶಾಕ್!

ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್ ಪಕ್ಷ ತೊರೆದ ಬೆನ್ನಲ್ಲೇ, ಮತ್ತೊಬ್ಬ ಪ್ರಮುಖ ನಾಯಕಿ ಮತ್ತು ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ಕೂಡ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
K Annamalai
ಕೆ. ಅಣ್ಣಾಮಲೈ
Updated on

ಚೆನ್ನೈ: ತಮಿಳುನಾಡು ಬಿಜೆಪಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದ್ದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪಕ್ಷ ತೊರೆದ ಬೆನ್ನಲ್ಲೇ ಇದೀಗ ಮತ್ತೋರ್ವ ಪ್ರಮುಖ ನಾಯಕಿ ಕೂಡ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಹೌದು.. ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್ ಪಕ್ಷ ತೊರೆದ ಬೆನ್ನಲ್ಲೇ, ಮತ್ತೊಬ್ಬ ಪ್ರಮುಖ ನಾಯಕಿ ಮತ್ತು ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ಕೂಡ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅವರು, ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದರ ಜೊತೆಗೆ ಪಕ್ಷದೊಂದಿಗಿನ ತಮ್ಮ ಸಂಬಂಧವನ್ನೂ ಅಂತ್ಯಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಈ ನಿರ್ಧಾರವನ್ನು ಸಾಕಷ್ಟು ಯೋಚಿಸಿ ತೆಗೆದುಕೊಂಡಿದ್ದು, ದುಃಖದ ಮನಸ್ಥಿತಿಯಲ್ಲೇ ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

"ತೀವ್ರ ಭಾರವಾದ ಹೃದಯದಿಂದ ನಾನು ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ಹಾಗೂ ಪಕ್ಷದೊಂದಿಗಿನ ನನ್ನ ಸಂಬಂಧವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದ್ದೇನೆ. ಈ ಪಕ್ಷಕ್ಕೆ ಸೇವೆ ಸಲ್ಲಿಸಿರುವುದು ನನಗೆ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ" ಎಂದು ಸುಮತಿ ವೆಂಕಟೇಶ್ ಬರೆದಿದ್ದಾರೆ.

K Annamalai
ರೌಡಿ ನಿಗ್ರಹ ದಳ ಅಂತೆ.. ಜನ ನಗ್ತಾರೆ.. ಡಿಕೆಶಿ ಮಾತು ಬರಿ ಬೊಗಳೆ..!: ಆರ್ ಅಶೋಕ್ ವ್ಯಂಗ್ಯ

"ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಬಿಜೆಪಿ ಪ್ರತಿಪಾದಿಸುವ ರಾಷ್ಟ್ರೀಯತೆ, ದೇಶಭಕ್ತಿ ಹಾಗೂ ರಾಷ್ಟ್ರಸೇವೆಯ ಆದರ್ಶಗಳಿಂದ ನಾನು ಸದಾ ಪ್ರೇರಿತಳಾಗಿದ್ದೇನೆ. ಈ ಮೌಲ್ಯಗಳು ನನ್ನ ರಾಜಕೀಯ ಪಯಣವನ್ನು ಮುನ್ನಡೆಸಿವೆ ಮತ್ತು ಮುಂದೆಯೂ ಮಾರ್ಗದರ್ಶನ ಮಾಡಲಿವೆ," ಎಂದು ಅವರು ಹೇಳಿದ್ದಾರೆ.

"ಈ ನಿರ್ಧಾರವನ್ನು ನಾನು ಸಾಕಷ್ಟು ಚಿಂತನೆ ನಡೆಸಿದ ಬಳಿಕ ಕೈಗೊಂಡಿದ್ದೇನೆ. ಇದರಲ್ಲಿ ದುಃಖವೂ ಇದೆ. ನನ್ನ ಅವಧಿಯಲ್ಲಿ ಮಾರ್ಗದರ್ಶನ, ಬೆಂಬಲ ಮತ್ತು ಪ್ರೋತ್ಸಾಹ ನೀಡಿದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಎಲ್ಲಾ ಪಕ್ಷದ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಿ, ಜವಾಬ್ದಾರಿಗಳಿಂದ ನನ್ನನ್ನು ಬಿಡುಗಡೆ ಮಾಡುವಂತೆ ವಿನಂತಿಸುತ್ತೇನೆ," ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಉದ್ದೇಶಿಸಿ ಬರೆದಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮುಂದಿನ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಸುಮತಿ ವೆಂಕಟೇಶ್ ಇನ್ನೂ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಹೊಸ ರಾಜಕೀಯ ಚಳುವಳಿ ಆರಂಭಿಸಿದ ಅಣ್ಣಾಮಲೈ

ಇದಕ್ಕೂ ಮೊದಲು ಬಿಜೆಪಿ ತೊರೆದಿದ್ದ ಕೆ. ಅಣ್ಣಾಮಲೈ, "ಸಾಮಾನ್ಯ ಜನರ ರಾಜಕೀಯ"ವನ್ನು ಮುನ್ನೆಲೆಗೆ ತರುವ ಹೊಸ ರಾಜಕೀಯ ಪಯಣ ಆರಂಭಿಸುತ್ತಿರುವುದಾಗಿ ಹೇಳಿದ್ದರು. ವ್ಯಕ್ತಿಪೂಜೆ, ಹೊಗಳಿಕೆ ರಾಜಕಾರಣ ಹಾಗೂ ವಂಶಪಾರಂಪರ್ಯ ರಾಜಕೀಯದಿಂದ ದೂರವಿರುವ ಪರ್ಯಾಯ ರಾಜಕೀಯವನ್ನು ನಿರ್ಮಿಸುವುದೇ ತಮ್ಮ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದರು.

ರಾಜಕೀಯ ವಿಶ್ಲೇಷಕರ ಪ್ರಕಾರ, ನಟ-ರಾಜಕಾರಣಿ ಸಿ. ಜೋಸೆಫ್ ವಿಜಯ್ ಸ್ಥಾಪಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ವೇಗದ ಬೆಳವಣಿಗೆ ಅಣ್ಣಾಮಲೈ ಅವರ ಹೊಸ ರಾಜಕೀಯ ಪ್ರಯತ್ನಕ್ಕೆ ಪ್ರೇರಣೆಯಾಗಿರಬಹುದು. ಹಲವು ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾಬಲ್ಯ ಹೊಂದಿರುವ ತಮಿಳುನಾಡಿನಲ್ಲಿ ಹೊಸ ರಾಜಕೀಯ ಪರ್ಯಾಯಕ್ಕೆ ಅವಕಾಶವಿದೆ ಎಂಬ ಅಂದಾಜು ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

K Annamalai
BJP ತೊರೆದ ಬೆನ್ನಲ್ಲೇ ಅಣ್ಣಾಮಲೈ ಸಂಚಲನ: 'We The Leaders' ಆಂದೋಲನಕ್ಕೆ ಕೆಲ ಗಂಟೆಯಲ್ಲೇ 10 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರ ನೋಂದಣಿ!

ಬಿಜೆಪಿಗೆ ನಷ್ಟವಿಲ್ಲ

ಅತ್ತ ಅಣ್ಣಾಮಲೈ ನಿರ್ಗಮನದ ಬೆನ್ನಲ್ಲೇ ಇತ್ತ ಬಿಜೆಪಿ ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಅಣ್ಣಾಮಲೈ ಅವರ ನಿರ್ಗಮನದಿಂದ ಬಿಜೆಪಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನಾಯಿನಾರ್ ನಾಗೇಂದ್ರನ್ ಪ್ರತಿಕ್ರಿಯಿಸಿದ್ದಾರೆ.

"ಅಣ್ಣಾಮಲೈ ಅವರ ರಾಜೀನಾಮೆಯಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ತನ್ನ ಸಿದ್ಧಾಂತಗಳಿಗೆ ಬದ್ಧವಾಗಿಯೇ ಮುಂದುವರಿಯಲಿದೆ," ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೀಗ ಅಣ್ಣಾಮಲೈ ಆರಂಭಿಸಿರುವ ಹೊಸ ಸಂಘಟನೆ ಯುವಜನರನ್ನು ತನ್ನತ್ತ ಸೆಳೆಯುವ ಉದ್ದೇಶ ಹೊಂದಿದ್ದು, ಮುಂದಿನ ದಿನಗಳಲ್ಲಿ ಅದನ್ನು ರಾಜಕೀಯ ಪಕ್ಷವಾಗಿ ರೂಪಿಸಿ, ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಜನೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com