ಭಾರೀ ಭೂಕಂಪಕ್ಕೆ ವೆನೆಜುವೆಲಾ ತತ್ತರ: ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ, ಮಾನವೀಯ ನೆರವಿಗೆ ಭಾರತ ಸಜ್ಜು..!

ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಪ್ರಧಾನಿ, ಈ ಕಠಿಣ ಸಮಯದಲ್ಲಿ ಭಾರತವು ವೆನೆಜುವೆಲಾ ಜನರೊಂದಿಗೆ ಒಟ್ಟಾಗಿ ನಿಂತಿದ್ದು, ಸಾಧ್ಯವಾದ ಎಲ್ಲ ನೆರವು ನೀಡಲು ಸಿದ್ಧವಿದೆ.
File photo
ಸಂಗ್ರಹ ಚಿತ್ರ
Updated on

ನವದೆಹಲಿ: ಪ್ರಬಲ ಭೂಕಂಪಗಳಿಂದ ವೆನೆಜುವೆಲಾದಲ್ಲಿ ಸಂಭವಿಸಿದ ಭಾರೀ ಹಾನಿ ಮತ್ತು ಜೀವಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅವರು, ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ತೀವ್ರ ದುಃಖವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಭಾರತವು ವೆನೆಜುವೆಲಾಕ್ಕೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧವಿದೆ ಎಂದು ಹೇಳಿದ್ದಾರೆ.

“ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಉಂಟಾದ ಭಾರೀ ಹಾನಿಯಿಂದ ನನಗೆ ತೀವ್ರ ದುಃಖವಾಗಿದೆ. ಭಾರತದ ಜನರ ಪರವಾಗಿ, ವೆನೆಜುವೆಲಾ ಸರ್ಕಾರ ಮತ್ತು ಜನತೆಗೆ, ವಿಶೇಷವಾಗಿ ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆಂದು ತಿಳಿಸಿದ್ದಾರೆ. .

ಇದೇ ವೇಳೆ, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಪ್ರಧಾನಿ, ಈ ಕಠಿಣ ಸಮಯದಲ್ಲಿ ಭಾರತವು ವೆನೆಜುವೆಲಾ ಜನರೊಂದಿಗೆ ಒಟ್ಟಾಗಿ ನಿಂತಿದ್ದು, ಸಾಧ್ಯವಾದ ಎಲ್ಲ ನೆರವು ನೀಡಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಬುಧವಾರ ಸಂಜೆ ವೆನೆಜುವೆಲಾ ಕರಾವಳಿಯಲ್ಲಿ ಈ ಭೂಕಂಪಗಳು ಸಂಭವಿಸಿವೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗಬಹುದು ಎಂದು ಕಾರ್ಯನಿರ್ವಹಣಾ ಅಧ್ಯಕ್ಷೆ ಡೆಲ್ಸಿ ರೋಡ್ರಿಗ್ಸ್ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಸಂಜೆ 6 ಗಂಟೆಯ ಬಳಿಕ ಅಲ್ಪ ಅವಧಿಯಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಇದರಿಂದ ಹಲವಾರು ರಾಜ್ಯಗಳಲ್ಲಿ ಭಾರೀ ಹಾನಿ ಉಂಟಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ರಾಜಧಾನಿ ಕಾರಾಕಾಸ್ ಸಮೀಪದ ಲಾ ಗ್ವೈರಾ ಪ್ರದೇಶವೇ ಹೆಚ್ಚು ಹಾನಿಗೊಳಗಾಗಿದೆ ಎಂದು ವರದಿಯಾಗಿದೆ. ಅಲ್ಲಿ ಅನೇಕ ಕಟ್ಟಡಗಳು ಕುಸಿದಿದ್ದು, ರಕ್ಷಣಾ ಸಿಬ್ಬಂದಿ ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

“ಕಾರಾಕಾಸ್‌ನ ಉತ್ತರಕ್ಕೆ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶದಲ್ಲಿ ಅನೇಕ ಕಟ್ಟಡಗಳು ಕುಸಿದಿವೆ. ಜೀವ ರಕ್ಷಣೆಗಾಗಿ ನಾವು ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ,” ಎಂದು ರೋಡ್ರಿಗ್ಸ್ ಹೇಳಿದ್ದಾರೆ.

File photo
Venezuela Earth quake: 40 ಸೆಕೆಂಡ್​​ ನಲ್ಲಿ 2 ಬಾರಿ ಭೂಕಂಪ, ಭಾರೀ ವಿನಾಶ, ಕನಿಷ್ಠ 32 ಸಾವು, ಸಾವಿನ ಸಂಖ್ಯೆ 1 ಲಕ್ಷಕ್ಕೇರುವ ಸಾಧ್ಯತೆ!

ಭೂಕಂಪದ ಪರಿಣಾಮ ಸಾರಿಗೆ ಮತ್ತು ಸಾರ್ವಜನಿಕ ಮೂಲಸೌಕರ್ಯಕ್ಕೂ ಹಾನಿಯಾಗಿದ್ದು, ಕಾರಾಕಾಸ್ ಸಮೀಪದ ಸಿಮೋನ್ ಬೊಲಿವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ರಾಜಧಾನಿಯ ಮೆಟ್ರೋ ಮತ್ತು ನೈಸರ್ಗಿಕ ಅನಿಲ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಶಾಲೆಗಳಿಗೂ ಕೆಲವು ದಿನಗಳ ಕಾಲ ರಜೆ ಘೋಷಿಸಲಾಗಿದ್ದು, ಕೆಲವು ಶಾಲಾ ಕಟ್ಟಡಗಳನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳು ಮತ್ತು ದೇಣಿಗೆ ಸಂಗ್ರಹ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ.

ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೇ (USGS) ಆರಂಭದಲ್ಲಿ ಭೂಕಂಪದ ತೀವ್ರತೆಯನ್ನು 7.1 ಎಂದು ತಿಳಿಸಿದ್ದರೂ, ನಂತರ ಅದನ್ನು 7.2 ಎಂದು ಪರಿಷ್ಕರಿಸಿದೆ. ಮೊದಲ ಭೂಕಂಪವು ವೆನೆಜುವೆಲಾದ ಕ್ಯಾರಿಬಿಯನ್ ಕರಾವಳಿಯ ಮೊರೋನ್ ಪಶ್ಚಿಮ ಭಾಗದಲ್ಲಿ, ಸುಮಾರು 22 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಅದಾದ ಒಂದು ನಿಮಿಷದೊಳಗೆ 10 ಕಿಲೋಮೀಟರ್ ಆಳದಲ್ಲಿ ಎರಡನೇ 7.5 ತೀವ್ರತೆಯ ಭೂಕಂಪ ಸಂಭವಿಸಿದೆ.

ಅಧಿಕಾರಿಗಳ ಪ್ರಕಾರ, ಸಾವಿರಾರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ವೆನೆಜುವೆಲಾದ ಗೃಹ ಸಚಿವ ಡಿಯೋಸ್ಡಾಡೋ ಕಬೆಲ್ಲೊ ಅವರು ಮಾತನಾಡಿ, ಭೂಕಂಪದ ನಂತರದ ಕಂಪನಗಳು (aftershocks) ಇನ್ನಷ್ಟು ಅಪಾಯ ಉಂಟುಮಾಡುವ ಸಾಧ್ಯತೆಯಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ಲ್ಯಾಟಿನ್ ಅಮೆರಿಕದ ಇತರ ಭಾಗಗಳಿಗೆ ಹೋಲಿಸಿದರೆ ವೆನೆಜುವೆಲಾದಲ್ಲಿ ಭೂಕಂಪಗಳು ಅಪರೂಪವಾದರೂ, ದೇಶವು ದಕ್ಷಿಣ ಅಮೆರಿಕ ಮತ್ತು ಕ್ಯಾರಿಬಿಯನ್ ಟೆಕ್ಟಾನಿಕ್ ಪ್ಲೇಟ್‌ಗಳ ಗಡಿಭಾಗದ ಸಮೀಪದಲ್ಲಿರುವುದರಿಂದ ಭೂಕಂಪದ ಅಪಾಯ ಹೆಚ್ಚಾಗಿದೆ.

ಭಾರತವು ಈ ಹಿಂದೆಯೂ ಭೂಕಂಪ ಪೀಡಿತ ಹಲವು ದೇಶಗಳಿಗೆ ಮಾನವೀಯ ನೆರವು ನೀಡಿತ್ತು. 2025ರ ಮಾರ್ಚ್‌ನಲ್ಲಿ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ಬಳಿಕ ‘ಆಪರೇಷನ್ ಬ್ರಹ್ಮ’ ಮೂಲಕ ರಕ್ಷಣಾ ತಂಡಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿತ್ತು.

ಇದಕ್ಕೂ ಮೊದಲು, 2023ರಲ್ಲಿ ಟರ್ಕಿ ಮತ್ತು ಸಿರಿಯಾದ ಭೂಕಂಪದ ನಂತರ ‘ಆಪರೇಷನ್ ದೋಸ್ತ್’ ಮೂಲಕ ಶೋಧ ಮತ್ತು ರಕ್ಷಣಾ ತಂಡಗಳು, ಫೀಲ್ಡ್ ಆಸ್ಪತ್ರೆಗಳು, ವೈದ್ಯರು ಹಾಗೂ ಅಗತ್ಯ ನೆರವನ್ನು ಭಾರತ ಒದಗಿಸಿತ್ತು. 2015ರ ನೇಪಾಳ ಭೂಕಂಪದ ನಂತರ ‘ಆಪರೇಷನ್ ಮೈತ್ರಿ’ ಮೂಲಕವೂ ಭಾರತ ದೊಡ್ಡ ಮಟ್ಟದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com