

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಮೊಹರಂ ಮೆರವಣಿಗೆ ವೇಳೆ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸಾರ್ವಜನಿಕರಿಗೆ ವಿಷದ ಮಾತ್ರೆಗಳನ್ನು ಹಂಚುತ್ತಿದ್ದ ಫಯಾಜ್ ಫ್ರೇಮ್ ಜೀ ಎಂಬ ವ್ಯಕ್ತಿಯನ್ನು ಬೈಕುಲ್ಲಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಷ್ಟರಾಗಲೇ ಮಾತ್ರೆ ಸೇವಿಸಿದ್ದ ಸುಮಾರು ಒಂದು ಡಜನ್ ನಷ್ಟು ಜನರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮಾತ್ರೆಗಳಲ್ಲಿ ಇಲಿ ಪಾಷಾಣ ಮತ್ತು ಕ್ರಿಮಿನಾಶಕಗಳಲ್ಲಿ ಬಳಸಲಾಗುವ 'ಜಿಂಕ್ ಫಾಸ್ಫೈಡ್' ಮತ್ತಿತರ ವಿಷಕಾರಿ ರಾಸಾಯನಿಕ ಇತ್ತೆಂದು ಆರೋಪಿಸಲಾಗಿದೆ. ಬಂಧಿತ ಆರೋಪಿ ಫಯಾಜ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ನಾನು ಆ ದಿನ ಕನಿಷ್ಠ 15,000 ಜನರ ಹತ್ಯೆಗೆ ಸಂಚು ರೂಪಿಸಿದ್ಧೆ ಎಂದು ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ನ್ಯಾಯಾಲಯವು ಆರೋಪಿಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ರಾಯ್ ರೋಡ್ ಬಳಿಯ ರೆಹಮತಾಬಾದ್ ಸ್ಮಶಾನದ ಬಳಿ ಅಶುರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಫಯಾಜ್, ತಾನು ತಂದಿದ್ಧ ಕ್ಯಾಪ್ಸೂಲ್ ಗಳನ್ನು ನೋವು ನಿವಾರಕ (ಪೇನ್ ಕಿಲ್ಲರ್) ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳು ಎಂದು ಸುಳ್ಳು ಹೇಳಿ ಜನರಿಗೆ ಹಂಚಲು ಪ್ರಾರಂಭಿಸಿದ್ದಾನೆ. ಇದನ್ನು ನಂಬಿ ಮಾತ್ರೆ ನುಂಗಿದ ಸಲ್ಮಾನ್ ಸಯೀದ್ ಸೇರಿದಂತೆ 11 ಜನರಿಗೆ ತಕ್ಷಣವೇ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಸ್ವಸ್ಥರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಹಂಚುತ್ತಿದ್ದ ಮಾತ್ರೆಗಳಲ್ಲಿ ವಿಷಕಾರಿ ರಾಸಾಯನಿಕ ಇರುವುದು ಪತ್ತೆಯಾಗಿದೆ. ಇದನ್ನು ಇಲಿ ಪಾಷಾಣ ಮತ್ತಿತರ ಕ್ರಿಮಿನಾಶಕಗಳಲ್ಲಿ ಬಳಸಲಾಗುತ್ತದೆ. ಪೊಲೀಸರು ಆತನ ಬಳಿಯಿದ್ದ 14,900 ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆತ ಈಗಾಗಲೇ 30,000 ಖಾಲಿ ಮಾತ್ರೆಗಲು ಮತ್ತು 50 ಕೆಜಿ ಫಾಸ್ಫರಸ್ ಗೆ ಆರ್ಡರ್ ಮಾಡಿದದ್ದು ತಿಳಿದುಬಂದಿದೆ ಎಂದು ಡಿಸಿಪಿ ಜಯಂತ್ ಮೀನಾ ತಿಳಿಸಿದ್ದಾರೆ.
ಮಹಾ ದುರಂತ ತಪ್ಪಿದ್ದು ಹೇಗೆ?
ಮೂವರು ಮಹಿಳಾ ಸ್ವಯಂ ಸೇವಕಿಯರು ತೋರಿದ ಜಾಗರಕತೆಯಿಂದ ಸಾವಿರಾರು ಜನರ ಜೀವ ಉಳಿದಿದೆ. ಆರೋಪಿ ಫಯಾಜ್ ಅನುಮಾನಾಸ್ಪದವಾಗಿ ಮಾತ್ರೆಗಳನ್ನು ಹಂಚುತ್ತಿರುವುದನ್ನು ಒಬ್ಬ ಮಹಿಳೆ ಗಮನಿಸಿದ್ದಾರೆ. ತಕ್ಷಣ ಆತನನ್ನು ತಡೆದು ನಿಲ್ಲಿಸಿದ ಮಹಿಳೆಯರು ಒಂದು ಮಾತ್ರೆಯನ್ನು ಬಿಚ್ಚಿ ನೋಡಿದ್ದಾರೆ. ಅದರೊಳಗೆ ಕಪ್ಪು ಪುಡಿ ಇರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಧ್ವನಿ ವರ್ಧಕದ ಮೂಲಕ ಅನೌನ್ಸ್ ಮಾಡಿ, ಯಾರೂ ಆ ಮಾತ್ರೆಯನ್ನು ಸೇವಿಸಬಾರದು ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದು, ಆತನ ಬಳಿಯಿದ್ದ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಸಾವಿರಾರು ಜನರು ಬದುಕುಳಿದಿದ್ದಾರೆ.
'15,000 ಜನರನ್ನು ಕೊಲ್ಲಲು ಬಯಸಿದ್ದ ಆರೋಪಿ: ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಸಾವಿರಾರು ಜನರನ್ನು ಕೊಲ್ಲುವ ಗುರಿಯನ್ನು ಹೊಂದಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. 15,000 ಜನರನ್ನು ಕೊಲ್ಲಲು ಬಯಸಿದ್ದೆ" ಎಂದು ಆತ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಿಬಿಎ ಪದವೀಧರ ಎಂದು ಗುರುತಿಸಲಾಗಿದೆ. ಆತನ ಬಂಧನದ ನಂತರ ಆತನ ವಿದೇಶ ಪ್ರಯಾಣದ ಇತಿಹಾಸವೂ ಬೆಳಕಿಗೆ ಬಂದಿದೆ. ಈ ಹಿಂದೆ ಇರಾನ್ ಮತ್ತು ಇರಾಕ್‌ಗೆ ಹೋಗಿರುವ ಮಾಹಿತಿ ತಿಳಿದುಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೈಕುಲ್ಲಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 123 (ಅಪರಾಧ ಮಾಡುವ ಉದ್ದೇಶದಿಂದ ವಿಷ ಸೇವಿಸಿ ಗಾಯಗೊಳಿಸುವುದು ಇತ್ಯಾದಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈಗ ಯಾವುದೇ ಸಂಭಾವ್ಯ ಭಯೋತ್ಪಾದನಾ ಸಂಪರ್ಕ ಮತ್ತು ಪಿತೂರಿಯ ಹಿಂದಿನ ಮಾಸ್ಟರ್‌ಮೈಂಡ್‌ಗಳ ಕುರಿತು ತನಿಖೆ ಮಾಡುತ್ತಿದ್ದಾರೆ.
ಜಿಂಕ್ ಫಾಸ್ಫೈಡ್ ಎಷ್ಟು ಅಪಾಯಕಾರಿ? ಜಿಂಕ್ ಫಾಸ್ಫೈಡ್ ಹೆಚ್ಚು ವಿಷಕಾರಿ ರಾಸಾಯನಿಕ ವಸ್ತುವಾಗಿದೆ. ಸೇವಿಸಿದರೆ, ಅದು ಗ್ಯಾಸ್ಟ್ರಿಕ್ ಆಮ್ಲದೊಂದಿಗೆ ಪ್ರತಿಕ್ರಿಯಿಸಿ ಫಾಸ್ಫೈನ್ ಅನಿಲವನ್ನು ಉತ್ಪಾದಿಸುತ್ತದೆ. ಈ ಅನಿಲವು ಮಾನವ ದೇಹಕ್ಕೆ ಅತ್ಯಂತ ಮಾರಕವಾಗಿದ್ದು, ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡಗಳು ಮತ್ತು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ವಿಷಕಾರಿ ಸಂಯುಕ್ತಕ್ಕೆ ನಿರ್ದಿಷ್ಟ ಪ್ರತಿವಿಷವಿಲ್ಲ.ಇರುವ ಒಂದೇ ಒಂದು ಮಾರ್ಗವೆಂದರೆ ತಕ್ಷಣ ಆಸ್ಪತ್ರೆಗೆ ಸೇರಿಸುವುದು, ಅಲ್ಲಿ ರೋಗಲಕ್ಷಣ ಆಧಾರಿತ ಚಿಕಿತ್ಸೆ ಮತ್ತು ವೆಂಟಿಲೇಟರ್ ಬೆಂಬಲದ ಮೂಲಕ ವ್ಯಕ್ತಿಯ ಜೀವವನ್ನು ಉಳಿಸಬಹುದು.