ನಟಿ-ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ: ಜೈಲಿನಲ್ಲಿರುವ ಮಾಜಿ ನ್ಯಾಯಾಧೀಶೆ ಮನೆಗೆ ನುಗ್ಗಿದ ಕಳ್ಳರು; ಮಾಡಿದ್ದೇನು?

ಸಿಸಿಟಿವಿ ಕ್ಯಾಮೆರಾಗಳಲ್ಲಿ ನಾಲ್ವರು ಆರೋಪಿಗಳು ಗಿರಿಬಾಲಾ ಸಿಂಗ್ ಅವರ ಕಟಾರಾ ಹಿಲ್ಸ್ ನಿವಾಸದ ಮೊದಲ ಮಹಡಿಗೆ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವುದು ಮತ್ತು ಇಬ್ಬರು ಮನೆಯ ಕೆಳಗೆ ನಿಂತಿರುವುದು ಕಂಡುಬಂದಿದೆ ಎಂದು ಹೇಳಿದರು.
Twisha Sharma with her husband Samarth Singh (R) and mother-in-law Giribala Singh (L).
ಅತ್ತೆ ಗಿರಿಬಾಲಾ ಸಿಂಗ್ ಮತ್ತು ಪತಿ ಸಮರ್ಥ್ ಸಿಂಗ್ ಅವರೊಂದಿಗೆ ತ್ವಿಶಾ ಶರ್ಮಾ.
Updated on

ಭೋಪಾಲ್: ಸೊಸೆ ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರ ಭೋಪಾಲ್ ನಿವಾಸಕ್ಕೆ ಕಳ್ಳರು ನುಗ್ಗಿದ್ದು, ಘಟನೆಯ ತನಿಖೆ ಆರಂಭವಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಪೊಲೀಸ್ ಸೈರನ್‌ಗಳನ್ನು ಕೇಳಿ ಕದ್ದ ವಸ್ತುಗಳಿದ್ದ ಚೀಲವನ್ನು ಅಲ್ಲಿಯೇ ಬಿಟ್ಟು ಶಂಕಿತರು ಪರಾರಿಯಾಗಿದ್ದಾರೆ. ಈಮಧ್ಯೆ, ತ್ವಿಶಾ ಅವರ ಕುಟುಂಬದ ಪರ ವಕೀಲರು ಸ್ಥಳದಲ್ಲಿನ ಎಲ್ಲ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ರಕ್ಷಿಸುವಂತೆ ಮತ್ತು ಸಂಗ್ರಹಿಸುವಂತೆ ಸಿಬಿಐಗೆ ಮನವಿ ಮಾಡಿದ್ದಾರೆ.

ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ರಜನೀಶ್ ಕಶ್ಯಪ್, ಘಟನೆ ನಡೆದ ಸ್ಥಳದ ಬಳಿಯಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ನಾಲ್ವರು ಆರೋಪಿಗಳು ಗಿರಿಬಾಲಾ ಸಿಂಗ್ ಅವರ ಕಟಾರಾ ಹಿಲ್ಸ್ ನಿವಾಸದ ಮೊದಲ ಮಹಡಿಗೆ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವುದು ಮತ್ತು ಇಬ್ಬರು ಮನೆಯ ಕೆಳಗೆ ನಿಂತಿರುವುದು ಕಂಡುಬಂದಿದೆ ಎಂದು ಹೇಳಿದರು.

ಘಟನೆ ನಡೆದಾಗ ಸಿಂಗ್ ಅವರ ಸಹೋದರ, ನಿವೃತ್ತ ಕರ್ನಲ್ ರಣವೀರ್ ಸಿಂಗ್ ಭದೋರಿಯಾ ಅವರು ಮನೆಯಲ್ಲಿ ಮಲಗಿದ್ದರು ಮತ್ತು ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ತ್ವಿಶಾ ಸಾವಿನ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ (SIT) ನೇತೃತ್ವ ವಹಿಸಿದ್ದ ರಜನೀಶ್ ಕಶ್ಯಪ್, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.

Twisha Sharma with her husband Samarth Singh (R) and mother-in-law Giribala Singh (L).
ನಟಿ ತ್ವಿಶಾ ಶರ್ಮಾ ಸಾವು: ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್

ಪೊಲೀಸರ ಪ್ರಕಾರ, ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಳ್ಳತನ ನಡೆದಿದ್ದು, ಆರೋಪಿಗಳು ಚಿನ್ನದ ಹಾರ ಮತ್ತು ಕೆಲವು ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.

ಆದಾಗ್ಯೂ, ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಗಳ ಸೈರನ್ ಕೇಳಿ ಭಯಭೀತರಾದ ಕಳ್ಳರು, ಕದ್ದ ವಸ್ತುಗಳಿದ್ದ ಚೀಲವನ್ನು ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಅವರನ್ನು ಬೆನ್ನಟ್ಟಿದರಾದರೂ, ಅವರು ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀಲದಲ್ಲಿ ಒಂದು ಹಾರ, ಕೆಲವು ಬೆಳ್ಳಿ ವಸ್ತುಗಳು ಮತ್ತು ಒಂದು ಕವೆಗೋಲು, ಕೆಲವು ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರು ಯಾವುದೇ ಫೈಲ್‌ಗಳು ಅಥವಾ ದಾಖಲೆಗಳನ್ನು ಕದ್ದಿಲ್ಲ ಎಂದು ಕಶ್ಯಪ್ ಸ್ಪಷ್ಟಪಡಿಸಿದ್ದಾರೆ.

ಗಿರಿಬಾಲಾ ಸಿಂಗ್ ಅವರ ಸೊಸೆ, 33 ವರ್ಷದ ತ್ವಿಶಾ ಶರ್ಮಾ, ಮೇ 12ರಂದು ಇದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ನಿವೃತ್ತ ನ್ಯಾಯಾಧೀಶೆ ಮತ್ತು ಅವರ ವಕೀಲ ಪುತ್ರ, ತ್ವಿಶಾ ಅವರ ಪತಿ ಸಮರ್ಥ್ ಸಿಂಗ್ ಅವರನ್ನು ಅವರ ಸಾವಿನ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಅವರನ್ನು ಭೋಪಾಲ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಕೇಂದ್ರ ತನಿಖಾ ದಳ (ಸಿಬಿಐ) ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಕಳ್ಳತನದ ಬಗ್ಗೆ ಪ್ರತಿಕ್ರಿಯಿಸಿದ ತ್ವಿಶಾ ಶರ್ಮಾ ಕುಟುಂಬದ ವಕೀಲ ಅನುರಾಗ್ ಶ್ರೀವಾಸ್ತವ, ಸಿಂಗ್ ನಿವಾಸವು ಅಪರಾಧ ನಡೆದ ಸ್ಥಳವಾಗಿರುವುದರಿಂದ, ಅಲ್ಲಿರುವ ಎಲ್ಲ ದಾಖಲೆಗಳನ್ನು ಭದ್ರಪಡಿಸಿ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com