

ನವದೆಹಲಿ: ದೇಶಾದ್ಯಂತ ಏಕಕಾಲದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ನಡೆಸಲು ಉದ್ದೇಶಿಸಿರುವ 'ಒಂದು ರಾಷ್ಟ್ರ-ಒಂದು ಚುನಾವಣೆ' (One Nation, One Election) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (JPC) ತನ್ನ ವರದಿಯನ್ನು ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿಯೂ ಸಲ್ಲಿಸುವ ಸಾಧ್ಯತೆ ಕ್ಷೀಣವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಗಳೊಂದಿಗೆ ಸಮಾಲೋಚನೆ ಇನ್ನೂ ಪೂರ್ಣಗೊಳ್ಳದಿರುವುದರಿಂದ ಸಮಿತಿಯು ತನ್ನ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆಯು ಜೆಪಿಸಿಯ ಅವಧಿಯನ್ನು ಮುಂಗಾರು ಅಧಿವೇಶನದ ಕೊನೆಯ ದಿನದವರೆಗೆ ವಿಸ್ತರಿಸಿದ್ದರೂ, ದೇಶದ ವಿವಿಧ ರಾಜ್ಯಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಅಂತಿಮ ಶಿಫಾರಸುಗಳನ್ನು ಸಿದ್ಧಪಡಿಸಲು ಸಮಿತಿಯು ಹೆಚ್ಚುವರಿ ಸಮಯ ಕೋರಲಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ ಮೂರನೇ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇರುವ ಮುಂಗಾರು ಅಧಿವೇಶನದಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ ಹಾಗೂ ಕ್ಷೇತ್ರ ಮರುವಿಂಗಡಣೆ (Delimitation) ಕುರಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಆಸಕ್ತಿ ಹೊಂದಿದೆ ಎಂಬ ಚರ್ಚೆಗಳು ನಡೆಯುತ್ತಿರುವ ನಡುವೆ ಜೆಪಿಸಿ ವರದಿ ವಿಳಂಬವಾಗುತ್ತಿರುವುದು ಮಹತ್ವ ಪಡೆದಿದೆ.
ಬಿಜೆಪಿ ಸಂಸದ ಪಿ.ಪಿ. ಚೌಧರಿ ನೇತೃತ್ವದ 39 ಸದಸ್ಯರ ಜಂಟಿ ಸಂಸದೀಯ ಸಮಿತಿ, ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ-2024ಗಳನ್ನು ಪರಿಶೀಲಿಸುತ್ತಿದೆ. ಈ ಮಸೂದೆಗಳನ್ನು 2024ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಬಳಿಕ ಹೆಚ್ಚಿನ ಪರಿಶೀಲನೆಗಾಗಿ ಜೆಪಿಸಿಗೆ ಕಳುಹಿಸಲಾಗಿತ್ತು.
ಪದೇಪದೆ ಚುನಾವಣೆ ನಡೆಸುವುದರಿಂದ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತದೆ. ಜೊತೆಗೆ, ಚುನಾವಣಾ ನೀತಿ ಸಂಹಿತೆ (Model Code of Conduct) ಪದೇಪದೆ ಜಾರಿಯಾಗುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತದೆ. ಏಕಕಾಲದಲ್ಲಿ ಚುನಾವಣೆ ನಡೆದರೆ ಆಡಳಿತದ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ.
ಆದರೆ, ಈ ಪ್ರಸ್ತಾವನೆಯು ದೇಶದ ಒಕ್ಕೂಟ ವ್ಯವಸ್ಥೆ (Federal Structure) ಹಾಗೂ ರಾಜ್ಯಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಮೂಲಗಳ ಪ್ರಕಾರ, ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಯನ್ನು 'ಒಂದು ರಾಷ್ಟ್ರ-ಒಂದು ಚುನಾವಣೆ' ಮಸೂದೆಯೊಂದಿಗೆ ಜೋಡಿಸಿ ರಾಜಕೀಯ ಬೆಂಬಲ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳನ್ನೂ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿದುಬದಿದೆ.
ಕಳೆದ ಬಜೆಟ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಕ್ಷೇತ್ರ ಮರುವಿಂಗಡಣೆಯನ್ನು ಕಡ್ಡಾಯಗೊಳಿಸುವ ಸಾಂವಿಧಾನಿಕ ತಿದ್ದುಪಡಿಗೆ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ವಿರೋಧ ವ್ಯಕ್ತಪಡಿಸಿದ್ದವು.
ಆದಾಗ್ಯೂ, 2029ರ ಲೋಕಸಭೆ ಚುನಾವಣೆಯೊಳಗೆ ಮಹಿಳಾ ಮೀಸಲಾತಿ ಜಾರಿಗೊಳಿಸುವ ಉದ್ದೇಶದಿಂದ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಇದಕ್ಕಾಗಿ 540 ಸದಸ್ಯರ ಲೋಕಸಭೆಯಲ್ಲಿ ಎನ್‌ಡಿಎಗೆ ಎರಡು-ಮೂರರಷ್ಟು ಬಹುಮತ (360 ಸದಸ್ಯರ ಬೆಂಬಲ) ಅಗತ್ಯವಿದೆ.
ಜೆಪಿಸಿ ಈಗಾಗಲೇ 10 ರಾಜ್ಯಗಳಿಗೆ ಭೇಟಿ ನೀಡಿ, ವಿವಿಧ ವಲಯಗಳೊಂದಿಗೆ ಸಮಾಲೋಚನೆ ನಡೆಸಿದೆ. ಬುಧವಾರ ದೆಹಲಿ ವಿಧಾನಸಭೆಯಲ್ಲೂ ಸಮಾಲೋಚನೆ ನಡೆಸಲಿರುವ ಸಮಿತಿಯು ಇನ್ನೂ ಹಲವು ರಾಜ್ಯಗಳಿಗೆ ಭೇಟಿ ನೀಡಬೇಕಿದೆ.
ಸಮಿತಿಯ ಅಧ್ಯಕ್ಷ ಪಿ.ಪಿ. ಚೌಧರಿ ಅವರು, ಶಾಸನ ಪ್ರಕ್ರಿಯೆ ಪೂರ್ಣಗೊಂಡರೂ ದೇಶದಲ್ಲಿ ಏಕಕಾಲದ ಚುನಾವಣೆ 2034ಕ್ಕೂ ಮುನ್ನ ನಡೆಯುವ ಸಾಧ್ಯತೆ ಕಡಿಮೆಯಿದೆ ಎಂಬ ಸುಳಿವು ನೀಡಿದ್ದಾರೆ.