ಚೆನ್ನೈ: ತಂತ್ರಜ್ಞಾನ ಆಧರಿತ ಪ್ರಗತಿ ಹೊಂದಿದರೆ ಮಾತ್ರ ಭಾರತವು 2047ರ ವೇಳೆಗೆ ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಗುರಿಯನ್ನು ಸಾಧಿಸಬಹುದು ಮತ್ತು ಆ ದೃಷ್ಟಿಕೋನವನ್ನು ಸಾಕಾರಗೊಳಿಸಲು ಭಾರತದ ಜನಸಂಖ್ಯೆಯು ಉದಯೋನ್ಮುಖ ತಂತ್ರಜ್ಞಾನಗಳನ್ನು, ವಿಶೇಷವಾಗಿ ಕೃತಕ ಬುದ್ಧಿಮತ್ತೆಯನ್ನು (AI) ಕರಗತ ಮಾಡಿಕೊಳ್ಳಬೇಕು ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಸೋಮವಾರ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಥಿಂಕ್‌ಎಡು ಕಾನ್ಕ್ಲೇವ್‌ನ 14ನೇ ಆವೃತ್ತಿಯಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು, ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದು 'ಕೇವಲ ಆಕಾಂಕ್ಷೆಯಲ್ಲ, ಬದಲಿಗೆ ಅವಶ್ಯಕತೆಯಾಗಿದೆ'. ಈ ಗುರಿ ಸಾಧಿಸುವಲ್ಲಿ ವಿಫಲವಾದರೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. 2020 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ಅಳವಡಿಸಿರುವಂತೆ ಶಿಕ್ಷಣಕ್ಕೆ ಕ್ರಾಂತಿಕಾರಿ ವಿಧಾನದ ಅಗತ್ಯವಿದೆ ಎಂದು ಹೇಳಿದರು.
'ಭಾರತವು ಒಂದು ಕಾಲದಲ್ಲಿ ಆರ್ಥಿಕ ಶಕ್ತಿ ಕೇಂದ್ರವಾಗಿತ್ತು. ವಸಾಹತುಶಾಹಿ ಆಳ್ವಿಕೆಗೂ ಮುನ್ನ ಜವಳಿ, ಕೃಷಿ ಮತ್ತು ಲೋಹಶಾಸ್ತ್ರದಲ್ಲಿ ಶ್ರೇಷ್ಠತೆಯನ್ನು ಗಳಿಸಿತ್ತು. ವಸಾಹತುಶಾಹಿ ಆಳ್ವಿಕೆಯ ನಂತರ, ಗನ್‌ಪೌಡರ್ ಮತ್ತು ಉಗಿ ಯಂತ್ರದಂತಹ ತಾಂತ್ರಿಕ ಪ್ರಗತಿಯಿಂದಾಗಿ ಯುರೋಪ್ 300 ವರ್ಷಗಳ ಕಾಲ ಜಗತ್ತನ್ನು ಮುನ್ನಡೆಸಿತು' ಎಂದರು.
'ಮಾನವ ನಾಗರಿಕತೆಯ ಪ್ರಗತಿಯು ಯಾವಾಗಲೂ ತಂತ್ರಜ್ಞಾನದ ಪ್ರಗತಿಯಿಂದಲೇ ಸಾಗಿದೆ. 20ನೇ ಶತಮಾನದ ಮಧ್ಯಭಾಗದಲ್ಲಿ, ಯುನೈಟೆಡ್ ಸ್ಟೇಟ್ಸ್ ಪರಮಾಣು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದಾಗ ಜಾಗತಿಕ ಶಕ್ತಿಯು ಬದಲಾಯಿತು, ಇದು ವಿಶ್ವದ ಮಿಲಿಟರಿ ಸಮತೋಲನವನ್ನು ಬದಲಾಯಿಸಿತು ಮತ್ತು ಇಂಗ್ಲೆಂಡ್‌ನಿಂದ ಅಮೆರಿಕಕ್ಕೆ ಸ್ಥಳಾಂತರಗೊಳ್ಳಲು ಪ್ರಭಾವ ಬೀರಿತು. ಅಮೆರಿಕವು ಹೊಸತನವನ್ನು ಮುಂದುವರೆಸುವ ಮೂಲಕ, ವಿಶೇಷವಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿ (ಐಸಿಟಿ) ಮುನ್ನಡೆ ಸಾಧಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ ' ಎಂದು ಹೇಳಿದರು.
ಪ್ರತಿಯೊಂದು ಪ್ರಮುಖ ತಾಂತ್ರಿಕ ಪ್ರಗತಿಯು, ಅದನ್ನು ಹೊಂದಿರುವವರು ಮತ್ತು ಹೊಂದಿರದವರ ನಡುವಿನ ಅಂತರವನ್ನು ಹೆಚ್ಚಿಸಿದೆ. ಕೃತಕ ಬುದ್ಧಿಮತ್ತೆ, ಆ ವಿಭಜನೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. 'ಕೃತಕ ಬುದ್ಧಿಮತ್ತೆ (AI) ವ್ಯಕ್ತಿಗಳು ಮತ್ತು ದೇಶಗಳನ್ನು ಗಣನೀಯವಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ'. ಸಿಲಿಕಾನ್ ವ್ಯಾಲಿಯಲ್ಲಿ ಬಳಸಲಾಗುವ ಹೆಚ್ಚಿನ ಶಕ್ತಿ-ಸೇವಿಸುವ ಮಾದರಿಗಳನ್ನು ನಕಲು ಮಾಡುವ ಬದಲು, ಭಾರತವು ತನ್ನ ಅಗತ್ಯಗಳಿಗೆ ಅನುಗುಣವಾಗಿ ತನ್ನದೇ ಆದ ವಿಶೇಷ, ಡೊಮೇನ್-ನಿರ್ದಿಷ್ಟ AI ಮಾದರಿಗಳನ್ನು ರಚಿಸಬೇಕು ಎಂದು ಅವರು ತಿಳಿಸಿದರು.
'ಮುಂಬರುವ ವರ್ಷಗಳಲ್ಲಿ ವ್ಯಕ್ತಿಯೊಬ್ಬನ ಸಾಕ್ಷರತೆಯನ್ನು AI-ಸಾಕ್ಷರನೇ ಅಥವಾ ಇಲ್ಲವೇ ಎಂಬುದರ ಮೇಲೆ ನಿರ್ಣಯಿಸಲಾಗುತ್ತದೆ. ಕೃತಕ ಬುದ್ಧಿಮತ್ತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ಹೇಗೆ ಬಳಸಬೇಕೆಂದು ತಿಳಿದಿರುವವರು ಬೆಳವಣಿಗೆ ಹೊಂದುತ್ತಾರೆ. ಅದರ ಬಗ್ಗೆ ತಿಳಿಯದವರು, ಅವುಗಳಿಂದ ನಿಯಂತ್ರಿಸಲ್ಪಡುವ ಅಪಾಯ ಎದುರಿಸುತ್ತಾರೆ. ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು ನಾವು ಉಪಕರಣವನ್ನು ಬಳಸುತ್ತೇವೆಯೇ ಅಥವಾ ಉಪಕರಣಗಳೇ ನಮ್ಮನ್ನು ನಿಯಂತ್ರಿಸಲು ಬಿಡುತ್ತೇವೆಯೇ ಎಂಬುದಾಗಿದೆ. ನಾವು ಸಾಧ್ಯವಾದಷ್ಟು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ನಮ್ಮನ್ನು ನಾವು ಸ್ಯಾಚುರೇಟ್ ಮಾಡಿಕೊಳ್ಳಬೇಕು' ಎಂದು ಹೇಳಿದರು.
Advertisement