

ನವದೆಹಲಿ: ಸಿಲಿಂಡರ್ ಗಳಿಲ್ಲದೆ ಪರದಾಡುತ್ತಿದ್ದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಕೇಂದ್ರ ಸರ್ಕಾರ ಶನಿವಾರ ಗುಡ್ ನ್ಯೂಸ್ ನೀಡಿದ್ದು, ವಾಣಿಜ್ಯ ಬಳಕೆ LPG ಸಿಲಿಂಡರ್ ಹಂಚಿಕೆಯನ್ನು ಶೇ. 50ಕ್ಕೆ ಹೆಚ್ಚಿಸಿದೆ.
ಮನೆಗಳಿಗೆ ಅಡಿಗೆ ಅನಿಲ ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದು, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡುತ್ತಿದೆ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಶೇ. 20 ರಷ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರೊಂದಿಗೆ ಒಟ್ಟು ಹಂಚಿಕೆಯನ್ನು ಶೇ. 50 ಕ್ಕೆ ಹೆಚ್ಚಿಸಲಾಗಿದೆ.
ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಪಶ್ಚಿಮ ಏಷ್ಯಾ ಯುದ್ಧದಿಂದ ಭಾರತಕ್ಕೆ ಇಂಧನ ಸರಬರಾಜಿನಲ್ಲಿ ವ್ಯತ್ಯವಾಗಿದೆ. ಇದರಿಂದಾಗಿ ಮನೆಗಳಿಗೆ ಎಲ್ ಪಿಜಿ ಸರಬರಾಜು ಮಾಡಲು ಆದ್ಯತೆ ನೀಡಲು ಹೋಟೆಲ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಸರಬರಾಜಿನಲ್ಲಿ ಕಡಿತ ಮಾಡಲಾಗಿತ್ತು.
ಇದೀಗ ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಅನಿಲ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಇದರಿಂದ ಒಟ್ಟು ಹಂಚಿಕೆ ಪ್ರಮಾಣ ಶೇಕಾಡ. ಶೇಕಾಡ 50ಕ್ಕೆ ತಲುಪಲಿದೆ.
ಮಾರ್ಚ್ 23, 2026ರಿಂದ (ಸೋಮವಾರ) ಜಾರಿಗೆ ಬರುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಶೇ. 20ರಷ್ಟು ವಾಣಿಜ್ಯ ಬಳಕೆ LPG ಹಂಚಿಕೆ ಮಾಡಲಾಗುವುದು. ಮುಂದಿನ ಆದೇಶದವರೆಗೆ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.
ಈ ಹೆಚ್ಚುವರಿ ಅನಿಲವನ್ನು ಪ್ರಮುಖವಾಗಿ ರೆಸ್ಟೋರೆಂಟ್, ಧಾಬಾ, ಹೋಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣೆ ಮತ್ತು ಡೈರಿ ಕ್ಷೇತ್ರಗಳಿಗೆ ಆದ್ಯತೆಯ ಮೇಲೆ ನೀಡಲು ಸೂಚಿಸಲಾಗಿದೆ. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ಊಟದ ಕೇಂದ್ರಗಳು ಮತ್ತು ಸಮುದಾಯ ಅಡುಗೆ ಮನೆಗಳಿಗೆ ತಡೆರಹಿತ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿ ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮನೆಗಳಿಗೆ ಎಲ್‌ಪಿಜಿ ಪೂರೈಕೆ ಸ್ಥಿರವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದ್ದು, ವಿತರಕರಲ್ಲಿ ಯಾವುದೇ ಕೊರತೆ ಇಲ್ಲ ಮತ್ತು ಸಾಮಾನ್ಯ ವಿತರಣಾ ಕಾರ್ಯಾಚರಣೆಗಳು ಮುಂದುವರೆದಿವೆ.
ಪ್ಯಾನಿಕ್ ಬುಕಿಂಗ್‌ಗಳು ಕಡಿಮೆಯಾಗಿವೆ ಮತ್ತು ನಾಗರಿಕರು ಜನದಟ್ಟಣೆಯನ್ನು ತಪ್ಪಿಸಲು ಮತ್ತು ಮನೆ ವಿತರಣೆಯನ್ನು ಅವಲಂಬಿಸುವಂತೆ ಸೂಚಿಸಲಾಗಿದೆ.
Advertisement