ವಿಜಯ್ ಸುನಾಮಿಯೂ ಅಲ್ಲ.. ಆಡಳಿತ ವಿರೋಧಿ ಅಲೆ ಕೂಡ ಇರ್ಲಿಲ್ಲ: DMKಗೆ ಮುಳುವಾಗಿದ್ದೇನು?

ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಧುಮುಕಿ ಮೊದಲ ಚುನಾವಣೆಯಲ್ಲೇ ಭರ್ಜರಿ ಫಲಿತಾಂಶ ನೀಡಿರುವ ನಟ ವಿಜಯ್ ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದ್ದು,ಆರಂಭದಿಂದಲೂ ಈ ಬಾರಿ ಚುನಾವಣೆಯಲ್ಲಿ ಡಿಎಂಕೆ ಪಕ್ಷವೇ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಲಾಗುತ್ತಿತ್ತು.
What went wrong for Confident DMK?
Updated on

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷ ನಿರೀಕ್ಷೆ ಹುಸಿಗೊಳಿಸಿ ಹೀನಾಯ ಸೋಲುಕಂಡಿದ್ದು, ಅಚ್ಚರಿ ರೀತಿಯಲ್ಲಿ ದ್ರಾವಿಡ ಪಕ್ಷಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ನಟ ವಿಜಯ್ ರ ಟಿವಿಕೆ ಪಕ್ಷ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.

ಹೌದು.. ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಧುಮುಕಿ ಮೊದಲ ಚುನಾವಣೆಯಲ್ಲೇ ಭರ್ಜರಿ ಫಲಿತಾಂಶ ನೀಡಿರುವ ನಟ ವಿಜಯ್ ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದ್ದು,ಆರಂಭದಿಂದಲೂ ಈ ಬಾರಿ ಚುನಾವಣೆಯಲ್ಲಿ ಡಿಎಂಕೆ ಪಕ್ಷವೇ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಲಾಗುತ್ತಿತ್ತು.

ಆದರೆ ಟಿವಿಕೆ ಈ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಭರ್ಜರಿಯಾಗಿ 108 ಸ್ಥಾನಗಳಲ್ಲಿ ಜಯಗಳಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಹಾಗೆ ನೋಡಿದರೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವನ್ನು ಕಿತ್ತೊಗೆಯಲು ಕಾರಣಗಳೇ ಇರಲಿಲ್ಲ ಎಂದೂ ಹೇಳಲಾಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯೂ ಇರಲಿಲ್ಲ, ಅಥವಾ ನಟ ವಿಜಯ್ ರ ಅಭಿಮಾನದ ಅಲೆಯೂ ಇರಲಿಲ್ಲ. ಹೀಗಿದ್ದೂ ಹಾಲಿ ಚುನಾವಣಾ ಫಲಿತಾಂಶ ಡಿಎಂಕೆ ಪಕ್ಷದ ನಿರೀಕ್ಷೆಗೆ ವಿರುದ್ಧವಾಗಿ ಭಾರೀ ಹಿನ್ನಡೆ ಕಂಡುಬಂದಿದೆ.

What went wrong for Confident DMK?
ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದ TVK, ಹೇಗಿರಲಿದೆ ನಟ ವಿಜಯ್ ಸಚಿವ ಸಂಪುಟ, ಯಾವ ನಾಯಕರು ಇರಬಹುದು?

ಸಿಎಂ ಸ್ಟಾಲಿನ್ ಸೇರಿ 15 ಸಚಿವರಿಗೇ ಸೋಲು

ಇನ್ನೂ ಅಚ್ಚರಿ ಎಂದರೆ ಹಾಲಿ ಮುಖ್ಯಮಂತ್ರಿ M. K. Stalin ಸೇರಿದಂತೆ 17 ಸಚಿವರು ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇದು ಪಕ್ಷದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ವಿರೋಧಿ ಅಲೆ ಅಥವಾ “ವಿಜಯ್ ಅಲೆ” ಪರಿಣಾಮವಲ್ಲ; ಬದಲಾಗಿ ಜನರಲ್ಲಿ ಹೆಚ್ಚಾದ ಬೇಸರ ಮತ್ತು ಆಡಳಿತದ ಬಗ್ಗೆ ಅಸಮಾಧಾನವೇ ಕಾರಣ.

ತಮ್ಮ ಸ್ಥಾನ ಕಳೆದುಕೊಂಡ 17 ಮಂದಿ ಸಚಿವರಲ್ಲಿ M. K. Stalin (ಕೊಲತ್ತೂರು), ದುರೈಮುರಗನ್ (ಕಾಟ್ಪಾಡಿ), ಎಸ್. ಮುತ್ತುಸಾಮಿ (ಈರೋಡ್ ವೆಸ್ಟ್), ಟಿ.ಎಂ. ಅಂಬರಸನ್ (ಅಲಂದೂರು), ಎಂ.ಪಿ. ಸಾಮಿನಾಥನ್ (ಕಂಗಾಯಂ), ಪಿ. ಗೀತಾ ಜೀವನ (ತುತಿಕೊರಿನ್), ಆರ್. ರಾಜೇಂದ್ರನ್ (ಸೇಲಂ ನಾರ್ಥ್), ಆರ್. ಸಕ್ಕರಪಾಣಿ (ಒಡ್ಡಂಚತ್ರಂ), ಆರ್. ಗಾಂಧಿ (ರಣಿಪೇಟ್), ಮಾಸ್ ಸುಬ್ರಮಣಿಯನ್ (ಸೈದಾಪೇಟ್), ಪಿ. ಮೂರ್ಥಿ (ಮದುರೈ ಈಸ್ಟ್), ಪಳನಿವೆಲ್ ತಿಯಾಗರಾಜನ್ (ಮದುರೈ ಸೆಂಟ್ರಲ್), ಎಸ್.ಎಂ. ನಾಸರ್ (ಅವಡಿ), ಅನ್ಬಿಲ್ ಮಹೇಶ್ ಪೊಯ್ಯಮೊಳಿ (ತಿರುವೆರುಂಬೂರು), ಟಿ.ಆರ್.ಬಿ. ರಾಜಾ (ಮನ್ನಾರ್ಗುಡಿ), ಎಂ. ಮಧಿವೇಂಧನ್ (ರಾಸಿಪುರಂ) ಮತ್ತು ಕೆ.ಆರ್. ಪೆರಿಯಕಾರುಪ್ಪನ್ (ತಿರುವತ್ತೂರು) ಸೇರಿದ್ದಾರೆ.

ಆತ್ಮತೃಪ್ತಿ, ದ್ರಾವಿಡ ದ್ವಿಪಕ್ಷೀಯ ರಾಜಕೀಯದ ಬೇಸರ

ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಬಾರಿ ಚುನಾವಣೆಯಲ್ಲಿ ವಿರೋಧಿ ಅಲೆ (anti-incumbency) ಅಥವಾ ವಿಜಯ್ ಅಲೆ ಯಾವುದೂ ಇರಲಿಲ್ಲ. ಬದಲಾಗಿ ದ್ರಾವಿಡ ದ್ವಿಪಕ್ಷೀಯ ರಾಜಕಾರಣದ ಮೇಲೆ ಜನರಲ್ಲಿ ಬೇಸರ ಮತ್ತು ಡಿಎಂಕೆ ಪಕ್ಷದ ಆತ್ಮತೃಪ್ತಿ ಹಾಗೂ ಸ್ವಯಂಪ್ರಶಂಸೆಯ ವಿರುದ್ಧ ಒಳಹೊಮ್ಮಿದ ಅಸಮಾಧಾನವೇ ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ.

2021ರ ಚುನಾವಣೆಯಲ್ಲಿ 133 ಕ್ಷೇತ್ರಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಅಧಿಕಾರಕ್ಕೇರಿದ್ದ ಡಿಎಂಕೆ ಈ ಬಾರಿ ಭಾರೀ ಸೋಲು ಅನುಭವಿಸಿದೆ. ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ M. K. Stalin ಸೇರಿದಂತೆ 17 ಮಂದಿ ಹಾಲಿ ಸಚಿವರು ತಮ್ಮ ಕ್ಷೇತ್ರಗಳಲ್ಲಿ ಸೋತಿದ್ದಾರೆ.

ಅಂದು ಸ್ಟಾಲಿನ್ ಅವರು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ‘Dravidian Model 2.0’ ಸರ್ಕಾರ ರಚಿಸುವ ವಿಶ್ವಾಸದೊಂದಿಗೆ ಪ್ರಚಾರ ಆರಂಭಿಸಿದ್ದರು. ಆದರೆ, ಪಕ್ಷವು ಕೇವಲ 59 ಸ್ಥಾನಗಳಿಗೆ ಸೀಮಿತವಾಗಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಸ್ಟಾಲಿನ್ ಸೋಲಿನ ಹಿನ್ನೆಲೆ, ಚೆಪಾಕ್-ಟ್ರಿಪ್ಲಿಕೇನ್ ಕ್ಷೇತ್ರವನ್ನು ಉಳಿಸಿಕೊಂಡಿರುವ ಅವರ ಪುತ್ರ ಮತ್ತು ಯುವ ಘಟಕದ ಕಾರ್ಯದರ್ಶಿ Udhayanidhi Stalin ಡಿಎಂಕೆ ಮೈತ್ರಿಯನ್ನು ಮುನ್ನಡೆಸುವ ಸಾಧ್ಯತೆ ಇದೆ. ಆದರೆ, ಇಷ್ಟು ಆತ್ಮವಿಶ್ವಾಸ ಹೊಂದಿದ್ದ ಪಕ್ಷಕ್ಕೆ ಏನು ತಪ್ಪಾಯಿತು ಎಂಬ ಪ್ರಶ್ನೆ ಇನ್ನೂ ಉಳಿದಿದೆ.

What went wrong for Confident DMK?
'ಅಭ್ಯರ್ಥಿಗಳು ಮುಖ್ಯವಲ್ಲ','ವಿಜಯ್ ಅಣ್ಣ'ನಿಗಾಗಿ ಶಿಳ್ಳೆ ಆರಿಸಿಕೊಂಡೆವು; ತಮಿಳುನಾಡು ಮತದಾರ ಪ್ರಭುವಿನ ಮನದಾಳದ ಮಾತು!

ಡಿಎಂಕೆಗೆ ಮುಳುವಾಗಿದ್ದೇನು?

ರಾಜ್ಯದ ರಾಜಕೀಯ ವಿಶ್ಲೇಷಕರು ಹೇಳುವುದೇನೆಂದರೆ, ಇದು ಯಾವುದೇ ದೊಡ್ಡ ಅಲೆಗಳ ಪರಿಣಾಮವಲ್ಲ; ಬದಲಾಗಿ ದೀರ್ಘಕಾಲದಿಂದ ರಾಜ್ಯವನ್ನು ಆಡಳಿತ ನಡೆಸಿದ ಎರಡು ಪ್ರಮುಖ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಡಿಎಂಕೆ ವಿರುದ್ಧ ಜನರಲ್ಲಿ ಬೇಸರ ಹೆಚ್ಚಾಗಿತ್ತು. ಈ ಎರಡೂ ಪಕ್ಷಗಳಿಗೆ ಪರ್ಯಾಯ ಶಕ್ತಿಗಾಗಿ ಜನ ಹಾತೊರೆಯುತ್ತಿದ್ದರು.

ದ್ರಾವಿಡ ಪಕ್ಷಗಳ ವಿರುದ್ಧ ಬೇಸರ

ರಾಜಕೀಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಅರುಣ್ ಕುಮಾರ್ ಅವರ ಪ್ರಕಾರ, “50 ವರ್ಷಕ್ಕೂ ಹೆಚ್ಚು ಕಾಲ ಈ ಎರಡು ಪಕ್ಷಗಳು ಆಡಳಿತ ನಡೆಸಿವೆ. ಆ ಬೇಸರ ನಿಜವಾಗಿದೆ. ವಿರೋಧಿ ಅಲೆ ಅಥವಾ ವಿಜಯ್ ಅಲೆ ಇದ್ದಿದ್ದರೆ ಟಿವಿಕೆ ರಾಜ್ಯವನ್ನೇ ಕ್ಲೀನ್ ಸ್ವೀಪ್ ಮಾಡುತ್ತಿತ್ತು ಮತ್ತು ಡಿಎಂಕೆ ಮೂರನೇ ಸ್ಥಾನಕ್ಕೆ ಕುಸಿಯುತ್ತಿತ್ತು. ಆದರೆ ಅದು ಆಗಿಲ್ಲ. ದ್ರಾವಿಡ ಪಕ್ಷಗಳ ವಿರುದ್ಧದ ಬೇಸರವನ್ನು ಡಿಎಂಕೆ ಸರಿಯಾಗಿ ಅಳೆಯಲು ವಿಫಲವಾಯಿತು.”

ಇನ್ನೂ, ಕಾನೂನು-ಸುವ್ಯವಸ್ಥೆ, ಮಹಿಳಾ ಭದ್ರತೆ, ಮಾದಕ ದ್ರವ್ಯಗಳ ಸಮಸ್ಯೆ ಮತ್ತು ಜಾತಿ ಹಿಂಸಾಚಾರ ಸೇರಿದಂತೆ ಪುನರಾವರ್ತಿತ ಸಮಸ್ಯೆಗಳ ಬಗ್ಗೆ ಡಿಎಂಕೆ ಸರಿಯಾದ ಗಮನ ಹರಿಸಲಿಲ್ಲ ಎಂದು ಅವರು ಹೇಳಿದ್ದಾರೆ. “ಈ ಆರೋಪಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸದೆ ಇರುವುದೇ ಈಗ ದೊಡ್ಡ ಬೆಲೆ ಕಟ್ಟುವಂತೆ ಮಾಡಿದೆ,” ಎಂದು ಅವರು ಹೇಳಿದರು.

What went wrong for Confident DMK?
TamilNadu: ರಾಜಕೀಯದ ಮೊದಲ ಪಂದ್ಯದಲ್ಲೇ ನಟ ವಿಜಯ್ ಶತಕ, ಮ್ಯಾಜಿಕ್ ನಂಬರ್ ಗೆ ಬೇಕು 10 ಶಾಸಕರ ಬೆಂಬಲ, TVKಗೆ ಮೊದಲ ಅಗ್ನಿ ಪರೀಕ್ಷೆ!

ವಿಶಾಲ ರಾಜಕೀಯ ಹಿನ್ನೆಲೆಯನ್ನು ಕುರಿತು ಮಾತನಾಡಿದ ಲೇಖಕ ಆರ್ ಕಣ್ಣನ್, ರಾಜ್ಯದ ‘ಹೀರೋ ಪೂಜೆ’ ಸಂಸ್ಕೃತಿಯನ್ನು ಉಲ್ಲೇಖಿಸಿದರು. “ಸಿ.ರಾಜಗೋಪಾಲಾಚಾರಿ, ಕೆ.ಕಾಮರಾಜ್, ಸಿ.ಎನ್.ಅಣ್ಣಾದೊರೈ, ಎಂ.ಕರುಣಾನಿಧಿ, ಎಂ.ಜಿ.ರಾಮಚಂದ್ರನ್, ಜೆ.ಜಯಲಲಿತಾ ನಾಯಕರುರಾಜ್ಯವು ಸದಾ ಒಬ್ಬ ನಾಯಕನ ಸುತ್ತ ಏಕಾಗ್ರವಾಗಿದೆ. ಆ ಖಾಲಿತನ ಎದುರಾದಾಗ ಸ್ಟಾಲಿನ್ ಅದನ್ನು ಭರ್ತಿ ಮಾಡಲು ವಿಫಲರಾದರು,” ಎಂದು ಅವರು ಹೇಳಿದರು.

ಇದೇ ವೇಳೆ, ನಟ Vijay ಪರ ಮತದಾರರು ಒಲವು ತೋರಿದರೂ, ಅವರ ಪಕ್ಷ ಸ್ಪಷ್ಟವಾದ ಪರ್ಯಾಯವನ್ನು ನೀಡಲಿಲ್ಲ ಎಂದು ಅವರು ಹೇಳಿದರು.

ಡಿಎಂಕೆಯ ಆತ್ಮತೃಪ್ತಿಯನ್ನೂ ಕಣ್ಣನ್ ಟೀಕಿಸಿದ್ದು, “ಡ್ರಾವಿಡಿಯನ್ ಮಾದರಿಯನ್ನು ನಿರಂತರವಾಗಿ ಹೊಗಳಿಕೊಂಡದ್ದು ಪಕ್ಷಕ್ಕೆ ಹಿನ್ನಡೆಯಾಯಿತು. ಐದು ವರ್ಷಗಳ ಕಾಲ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವಲ್ಲಿ ಸಮಯ ಕಳೆದರೂ ನೆಲಮಟ್ಟದ ಆಡಳಿತದಲ್ಲಿ ದುರ್ಬಲತೆ ಕಂಡುಬಂದಿತು. ಮೈತ್ರಿಯೂ ಅವಕಾಶವಾದಿತನದ ಮೇಲೆ ನಿಂತಿತ್ತು,” ಎಂದರು.

ಅಂತೆಯೇ 1971ರಿಂದಲೂ ಡಿಎಂಕೆ ಪಕ್ಷಕ್ಕೆ ಎರಡು ಬಾರಿ ಸರಿಯಾಗಿ ಅಧಿಕಾರ ಗೆಲ್ಲುವ ಸಂಪ್ರದಾಯ ಮುರಿಯಲು ಸಾಧ್ಯವಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com