

ತಿರುವನಂತಪುರಂ: ವಿಧಾನಸಭೆ ಚುನಾವಣೆ ಬಳಿಕ ಕೇರಳದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿರುವ ಪೈಪೋಟಿಗೆ ಸ್ನೇಹಪೂರ್ವಕ ಪರಿಹಾರ ಬೇಕೆಂದು ಯುಡಿಎಫ್ ಮೈತ್ರಿಕೂಟದ ಪಕ್ಷಗಳು ಅಭಿಪ್ರಾಯಪಟ್ಟಿವೆ.
ಕಾಂಗ್ರೆಸ್ ವಿಧಾನಮಂಡಲ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ (Sunny Joseph) ಮಂಡಿಸಿದ ನಿರ್ಣಯಕ್ಕೆ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ (V. D. Satheesan) ಬೆಂಬಲ ಸೂಚಿಸಿದರು. ಈ ಸಭೆಯಲ್ಲಿ ಎಐಸಿಸಿ ಕೇಂದ್ರ ವೀಕ್ಷಕರಾದ ಅಜಯ್ ಮಕೇನ್, ಮುಕುಲ್ ವಸ್ನಿಕ್ ಹಾಗೂ ಕೇರಳ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾದಾಸ್ ಮುಂಶಿ ಉಪಸ್ಥಿತರಿದ್ದರು.
ಇದೇ ವೇಳೆ ಮುಖ್ಯಮಂತ್ರಿ ಹುದ್ದೆಗಾಗಿ ತೀವ್ರ ರಾಜಕೀಯ ಚಟುವಟಿಕೆಗಳು ಮುಂದುವರಿದವು. ಯುಡಿಎಫ್‌ನ ಕೆಲವು ಸಣ್ಣ ಮೈತ್ರಿ ಪಕ್ಷಗಳ ನಾಯಕರು ಸಂಜೆ ವೇಳೆ ಕ್ಯಾಂಟೋನ್ಮೆಂಟ್ ಹೌಸ್‌ನಲ್ಲಿ ಸತೀಶನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಮತ್ತೊಂದೆಡೆ, ಕೆ ಸಿ ವೇಣುಗೋಪಾಲ್ ಶಿಬಿರದ ಪ್ರಮುಖ ಮುಖಂಡರಾಗಿರುವ ಶಾಸಕ ಎ ಪಿ ಅನಿಲ್ ಕುಮಾರ್ ಅವರು ಸಂಜೆ ರಮೇಶ್ ಚೆನ್ನಿಟಾಲಾ ನಿವಾಸದಲ್ಲಿ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದು ಗಮನ ಸೆಳೆಯಿತು. ಪಕ್ಷದ ಹೈಕಮಾಂಡ್ ಮೂಲಗಳ ಪ್ರಕಾರ, ಕೆಸಿ ವೇಣುಗೋಪಾಲ್ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿರುವುದರಿಂದ ಅಂತಿಮ ತೀರ್ಮಾನವನ್ನು ರಾಹುಲ್ ಗಾಂಧಿ ತೆಗೆದುಕೊಳ್ಳುವ ಸಾಧ್ಯತೆ ಇದೆ.
“ಪರಿಸ್ಥಿತಿ ಅಗತ್ಯವಿದ್ದರೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳೊಂದಿಗೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಮಾತನಾಡಿ ಹೊಸ ಮುಖ್ಯಮಂತ್ರಿ ಆಯ್ಕೆ ಮಾಡಿದ ಕಾರಣವನ್ನು ವಿವರಿಸಲಿದ್ದಾರೆ,” ಎಂದು ದೆಹಲಿಯ ಹಿರಿಯ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನೂ ಕಾಂಗ್ರೆಸ್ ಹೈಕಮಾಂಡ್ ನಿಕಟವಾಗಿ ಗಮನಿಸುತ್ತಿದೆ. ನಾಯಕತ್ವದ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳು ಉಂಟಾದರೆ ಅವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂಬ ಅಭಿಪ್ರಾಯ ಪಕ್ಷದೊಳಗಿದೆ.
ಸತೀಶನ್ ಪರವಾಗಿ ಪ್ರಚಾರ ನಡೆಸುತ್ತಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಕೂಡ ಕೇಂದ್ರ ವೀಕ್ಷಕರ ಜೊತೆಗಿನ ಸಭೆಯಲ್ಲಿ ಇದೇ ನಿಲುವು ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. ಸಭೆಯ ಬಳಿಕ ಲೀಗ್ ನಾಯಕ ಪಿ. ಕೆ. ಕುನ್ಹಾಲಿಕುಟ್ಟಿ ಮಾತನಾಡಿ, “ನಾವು ನಮ್ಮ ಅಭಿಪ್ರಾಯವನ್ನು ವೀಕ್ಷಕರಿಗೆ ತಿಳಿಸಿದ್ದೇವೆ. ಹೈಕಮಾಂಡ್ ತೀರ್ಮಾನ ಪ್ರಕಟಿಸಿದ ಬಳಿಕ ಮುಖ್ಯಮಂತ್ರಿ ಕುರಿತು ನಮ್ಮ ನಿಲುವನ್ನು ಕಾಂಗ್ರೆಸ್‌ಗೆ ತಿಳಿಸುತ್ತೇವೆ” ಎಂದರು.
ಆದರೆ ಈ ಹೇಳಿಕೆ ಲೀಗ್ ಹಾಗೂ ಕಾಂಗ್ರೆಸ್‌ನ ಕೆಲವು ವಲಯಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. “ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆ ಮಾಡಿದ ಬಳಿಕ ಐಯುಎಂಎಲ್ ತನ್ನ ನಿಲುವು ತಿಳಿಸುತ್ತದೆ ಎಂದು ಕುಂನ್ಹಾಲಿಕುಟ್ಟಿ ಹೇಳಿರುವುದು ಮೈತ್ರಿ ಧರ್ಮಕ್ಕೆ ವಿರುದ್ಧವಾಗಿದೆ. ಯುಡಿಎಫ್ ಮೈತ್ರಿಯಿಂದ ಹೊರಬಂದ ಬಳಿಕ ನೀವು ಎಲ್ಲಿಗೆ ಹೋಗಲು ನಿರೀಕ್ಷಿಸುತ್ತಿದ್ದೀರಿ?” ಎಂದು ಲೀಗ್ ರಾಜ್ಯ ಕಾರ್ಯದರ್ಶಿ ಮಂಡಳಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್‌ನ ಹೊಸದಾಗಿ ಆಯ್ಕೆಯಾದ ಶಾಸಕ ಮ್ಯಾಥ್ಯೂ ಕುಳಲ್ ನಾದನ್, ಲೀಗ್ ಮಿತಿ ಮೀರಿ ವರ್ತಿಸಬಾರದು ಎಂದು ಎಚ್ಚರಿಕೆ ನೀಡಿದ್ದರು. ಯುಡಿಎಫ್ ಮೈತ್ರಿಕೂಟದ ಮತ್ತೊಂದು ಪ್ರಮುಖ ಪಕ್ಷವಾದ ಕೇರಳ ಕಾಂಗ್ರೆಸ್, ಏಳು ಶಾಸಕರನ್ನು ಹೊಂದಿದ್ದು, ಅದರ ಅಧ್ಯಕ್ಷ ಪಿಜೆ ಜೋಸೆಫ್ ಮೂಲಕ ಸತೀಶನ್ ಪರ ಬೆಂಬಲ ಸೂಚಿಸಿದೆ. “ಹೈಕಮಾಂಡ್ ತನ್ನ ತೀರ್ಮಾನ ಕೈಗೊಳ್ಳುವ ಮುನ್ನ ಜನಾಭಿಪ್ರಾಯವನ್ನೂ ಪರಿಗಣಿಸಬೇಕು,” ಎಂದು ಜೋಸೆಫ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ ಜೋಸೆಫ್ ಜೊತೆಗಿದ್ದ ಪಕ್ಷದ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಹೆಸರನ್ನು ಕಾಂಗ್ರೆಸ್ ವೀಕ್ಷಕರಿಗೆ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೂರು ಶಾಸಕರನ್ನು ಹೊಂದಿರುವ ಆರ್‌ಎಸ್‌ಪಿ ಯಾವುದೇ ಹೆಸರನ್ನು ಸೂಚಿಸದೇ, ಕಾಂಗ್ರೆಸ್ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದೆ. ಒಂದು ಶಾಸಕರನ್ನು ಹೊಂದಿರುವ ಸಿಎಂಪಿ ಪಕ್ಷ ಕೂಡ ಸತೀಶನ್ ಪರ ನಿಂತಿದೆ.
ಸಭೆಯಲ್ಲಿ ಸತೀಶನ್ ರಾಜ್ಯದ ರಾಜಕೀಯ ವಾತಾವರಣವನ್ನು ವಿವರಿಸಿ, ಕಾಂಗ್ರೆಸ್ ಪಕ್ಷವು 21 ಸ್ಥಾನಗಳಿಂದ 63 ಸ್ಥಾನಗಳಿಗೆ ಏರಿಕೆಯಾದ ರೀತಿಯನ್ನು ಹಾಗೂ ಯುಡಿಎಫ್ ಸಂಖ್ಯೆ 41ರಿಂದ 102ಕ್ಕೆ ಏರಿದ ಹಿನ್ನೆಲೆಯನ್ನು ವಿವರಿಸಿದ್ದಾರೆ. ಪಕ್ಷದ ನೆಲಮಟ್ಟದ ಕಾರ್ಯಚಟುವಟಿಕೆಗಳ ಆಧಾರದ ಮೇಲೆ ಚುನಾವಣಾ ಫಲಿತಾಂಶವನ್ನು ತಾವು ನಿಖರವಾಗಿ ಊಹಿಸಿದ್ದೆವು ಎಂದು ಅವರು ವೀಕ್ಷಕರಿಗೆ ನೆನಪಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಚೆನ್ನಿತ್ತಲಾ ತಮ್ಮ ಹಿರಿಯತ್ವ ಮತ್ತು ರಾಜಕೀಯ ಅನುಭವವನ್ನು ಉಲ್ಲೇಖಿಸಿ, ಮುಖ್ಯಮಂತ್ರಿ ಆಗಲು ಇದು ತಮ್ಮ ಕೊನೆಯ ಅವಕಾಶ ಎಂದು ವೀಕ್ಷಕರಿಗೆ ತಿಳಿಸಿದ್ದಾರೆ. ವೇಣುಗೋಪಾಲ್ ಮಾತ್ರ ಸಭೆಗೆ ಹಾಜರಾಗಲಿಲ್ಲ.
Advertisement