

ಚೆನ್ನೈ: ತಮಿಳುನಾಡಿನಲ್ಲಿ ಬಹುಮತದ ಕೊರತೆಯಿಂದ ಪರದಾಡುತ್ತಿದ್ದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಅವರಿಗೆ ಕೊನೆಗೂ ಮ್ಯಾಜಿಕ್ ನಂಬರ್ ಸಿಕ್ಕಿದೆ. ಕಾಂಗ್ರೆಸ್ ನಂತರ ಸಿಪಿಐ ಮತ್ತು ವಿಸಿಕೆ ಸಹ ಬೆಂಬಲ ಘೋಷಿಸಿವೆ. ಹೀಗಾಗಿ ದಳಪತಿ ವಿಜಯ್ ಅವರು ನಾಳೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಟಿವಿಕೆಗೆ ಸಿಪಿಐ ಹಾಗೂ ವಿಸಿಕೆ ಬೆಂಬಲ ಘೋಷಿಸಿ ಪತ್ರ ಬರೆದ ಬೆನ್ನಲ್ಲೇ ಮೂರನೇ ಬಾರಿಗೆ ವಿಜಯ್, ರಾಜ್ಯಪಾಲರನ್ನು ಭೇಟಿಯಾದ ವಿಜಯ್, ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ತಮ್ಮಗೆ 118 ಶಾಸಕರ ಬೆಂಬಲವಿದೆ ಎಂದು ವಿಜಯ್ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಬಳಿಕ ರಾಜ್ಯಪಾಲರು ನೂತನ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ವಿಜಯ್ ನಾಳೆ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತಿತರ ನಾಯಕರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸಿಪಿಐ ಇಬ್ಬರು ಶಾಸಕರನ್ನು ಹೊಂದಿದೆ. ಏಪ್ರಿಲ್ 23 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ, ಸರ್ಕಾರ ರಚಿಸಲು ಡಿಎಂಕೆ ಮಿತ್ರಪಕ್ಷಗಳಾದ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಅವರ ಬೆಂಬಲವನ್ನು ಕೋರಿತ್ತು.
ದಳಪತಿ ವಿಜಯ್ ನೇತೃತ್ವದ ಟಿವಿಕೆಗೆ ಈಗಾಗಲೇ ಕಾಂಗ್ರೆಸ್ ಕಂಡೀಷನಲ್ ಬೆಂಬಲ ನೀಡಿದೆ. ಇದೀಗ ಸಿಪಿಐ, ಸಿಪಿಎಂ ಹಾಗೂ ವಿಸಿಕೆ ಕೂಡ ಬೆಂಬಲ ಘೋಷಿಸಿದ್ದು, ವಿಜಯ್ ಸುಲಭವಾಗಿ ಮ್ಯಾಜಿಕ್ ನಂಬರ್ ದಾಟಿದಂತಾಗಿದೆ. ಟಿವಿಕೆ ಒಟ್ಟು 107, ಸಿಪಿಐ, 2 ಸಿಪಿಎಂ, 2 ವಿಸಿಕೆ, 2 ಕಾಂಗ್ರೆಸ್ 5 ಐದು ಸೇರಿ 118 ಆಗಲಿದೆ. ಹೀಗಾಗಿ ಸರ್ಕಾರ ರಚನೆಯ ಹಾದಿ ಸುಗಮವಾಗಿದ್ದು, ಟಿವಿಕೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
Advertisement