

ವಿಶಾಖಪಟ್ಟಣಂ: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್ ಕಲ್ಯಾಣ್ ಅವರ ಮನೆಗೆ ಭಾನುವಾರ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈ ಭೇಟಿ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಂತೆಯೇ ರಾಜ್ಯದಲ್ಲಿನ ಎನ್‌ಡಿಎ ಮೈತ್ರಿಯ ಬಲವಾದ ಸಮನ್ವಯವನ್ನು ತೋರಿಸಿದೆ. ಆಂಧ್ರಪ್ರದೇಶದಲ್ಲಿ ಬಿಜೆಪಿ, ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನಸೇನಾ ಪಕ್ಷ (ಜೆಎಸ್‌ಪಿ) ನಡುವಿನ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳ ನಡುವೆಯೇ ಮೋದಿ ಅವರ ಈ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದೆ.
ಮೊದಲು ಪ್ರಧಾನಮಂತ್ರಿ ಚಂದ್ರಬಾಬು ನಾಯ್ಡು ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಈ ವೇಳೆ ಇಬ್ಬರು ನಾಯಕರು ರಾಜ್ಯದ ಅಭಿವೃದ್ಧಿ, ಮೂಲಸೌಕರ್ಯ ವಿಸ್ತರಣೆ, ಕೈಗಾರಿಕಾ ಹೂಡಿಕೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
ಸಭೆಯ ಕೆಲವು ಭಾಗಗಳಲ್ಲಿ ಟಿಡಿಪಿ ಮತ್ತು ಬಿಜೆಪಿ ಹಿರಿಯ ನಾಯಕರು ಕೂಡ ಉಪಸ್ಥಿತರಿದ್ದರು. ಈ ವೇಳೆ ಆಂಧ್ರ ಪ್ರದೇಶಕ್ಕೆ ಕೇಂದ್ರದ ನೆರವನ್ನು ವೇಗಗೊಳಿಸುವ ಬಗ್ಗೆ ಚರ್ಚೆ ನಡೆದಿದ್ದು, ಬಂದರುಗಳು, ಹೆದ್ದಾರಿಗಳು, ರೈಲು ಸಂಪರ್ಕ ಮತ್ತು ಅಮರಾವತಿಯನ್ನು ರಾಜ್ಯ ರಾಜಧಾನಿಯಾಗಿ ಅಭಿವೃದ್ಧಿಪಡಿಸುವ ಯೋಜನೆಗಳ ಕುರಿತು ಮಾತುಕತೆ ನಡೆದಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಮುಂದಿನ ಹೂಡಿಕೆ ಯೋಜನೆಗಳ ಕುರಿತ ಸಮನ್ವಯದ ವಿಷಯವೂ ಚರ್ಚೆಗೆ ಬಂದಿತ್ತು ಎಂದು ತಿಳಿದುಬಂದಿದೆ.
ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ಬಳಿಕ ಮೋದಿ ಅವರು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ನಿವಾಸಕ್ಕೆ ತೆರಳಿದರು.
ಈ ಭೇಟಿ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಹೆಚ್ಚಿನ ಗಮನ ಸೆಳೆಯಿತು. ಜನಸೇನಾ ಪಕ್ಷದ ಬೆಂಬಲಿಗರು ಪ್ರಧಾನಮಂತ್ರಿಯನ್ನು ಸ್ವಾಗತಿಸಲು ದೊಡ್ಡ ಸಂಖ್ಯೆಯಲ್ಲಿ ನಿವಾಸದ ಹೊರಭಾಗದಲ್ಲಿ ಸೇರಿದ್ದರು. ಈ ಭೇಟಿಯ ವೇಳೆ ಮೋದಿ ಮತ್ತು ಪವನ್ ಕಲ್ಯಾಣ್ ಯುವಜನರ ಅಭಿವೃದ್ಧಿ, ಉದ್ಯೋಗಾವಕಾಶಗಳು ಮತ್ತು ಗ್ರಾಮೀಣ ಆಡಳಿತ ಬಲಪಡಿಸುವ ವಿಷಯಗಳ ಕುರಿತು ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
ಭೇಟಿ ವೇಳೆ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಯನ್ನು ಬಲಪಡಿಸುವಲ್ಲಿ ಹಾಗೂ ಜನಬೆಂಬಲ ಒಗ್ಗೂಡಿಸುವಲ್ಲಿ ಪವನ್ ಕಲ್ಯಾಣ್ ವಹಿಸಿರುವ ಪಾತ್ರವನ್ನು ಮೋದಿ ಪ್ರಶಂಸಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡೂ ಭೇಟಿಗಳ ದೃಶ್ಯಗಳಲ್ಲಿ ನಾಯಕರು ಆತ್ಮೀಯವಾಗಿ ಮಾತುಕತೆ ನಡೆಸುತ್ತಿರುವುದು ಕಂಡುಬಂದಿತು. ಸಾಂಪ್ರದಾಯಿಕ ಆಂಧ್ರ ಆತಿಥ್ಯವನ್ನು ಪ್ರಧಾನಮಂತ್ರಿಗೆ ನೀಡಲಾಯಿತು.
ಪವನ್ ಕಲ್ಯಾಣ್ ನಿವಾಸದಲ್ಲಿ ಕುಟುಂಬ ಸದಸ್ಯರು ಮೋದಿಯನ್ನು ಸ್ವಾಗತಿಸಿದರೆ, ಪಕ್ಷದ ಕಾರ್ಯಕರ್ತರು ಮೈತ್ರಿ ನಾಯಕರ ಪರ ಘೋಷಣೆಗಳನ್ನು ಕೂಗಿದರು. ರಾಜಕೀಯ ವಿಶ್ಲೇಷಕರು, ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರ ಮನೆಗಳಿಗೆ ಮೋದಿ ಸ್ವತಃ ಭೇಟಿ ನೀಡಿರುವುದು ಮೈತ್ರಿಯೊಳಗಿನ ವಿಶ್ವಾಸ ಮತ್ತು ಐಕ್ಯತೆಯನ್ನು ಬಲಪಡಿಸುವ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಡೆ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ವಿಸ್ತರಣಾ ತಂತ್ರಕ್ಕೆ ಆಂಧ್ರ ಪ್ರದೇಶಕ್ಕೆ ನೀಡುತ್ತಿರುವ ಮಹತ್ವವನ್ನೂ ತೋರಿಸುತ್ತದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಮೋದಿ ಆಗಮಿಸಿದ್ದ ಸಂದರ್ಭದಲ್ಲಿ ಈ ಭೇಟಿಗಳು ನಡೆದವು. ನಾಯಕರ ನಿವಾಸಗಳ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ವಿಶೇಷ ರಕ್ಷಣಾ ದಳ (SPG) ಸಿಬ್ಬಂದಿ ಹಾಗೂ ರಾಜ್ಯ ಪೊಲೀಸ್ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ-ಟಿಡಿಪಿ-ಜನಸೇನಾ ಮೈತ್ರಿ ಉತ್ತಮ ಪ್ರದರ್ಶನ ನೀಡಿದ್ದ ಹಿನ್ನೆಲೆ, ಭಾನುವಾರದ ಈ ಭೇಟಿಗಳು ಮೈತ್ರಿ ಪಕ್ಷಗಳ ನಡುವಿನ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಇಂದು ಹೈದರಾಬಾದ್‌ನಲ್ಲಿ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಬಿಆರ್‌ಎಸ್ ರಾಜ್ಯಸಭಾ ಸಂಸದ ಪಾರ್ಥಸಾರಧಿ ರೆಡ್ಡಿ ಅವರಿಗೆ ಸೇರಿದ ಕೊಂಡಾಪುರದಲ್ಲಿ 1500 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆಗಾಗಿ ಆಗಮಿಸಿದ್ದರು.
Advertisement