

ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಸಿಎಂ ವಿಜಯ್ ತಮ್ಮ ಚುನಾವಣಾ ಗೆಲುವಿನ ಕುರಿತು ಭವಿಷ್ಯ ನುಡಿದಿದ್ದ ಜ್ಯೋತಿಷಿಯನ್ನೇ ವಿಶೇಷ ಕರ್ತವ್ಯಾಧಿಕಾರಿಯಾಗಿ (OSD) ನೇಮಕ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು.. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ಜೋಸೆಫ್ ವಿಜಯ್ ರ ಟಿವಿಕೆ ಪಕ್ಷ ಗೆದ್ದು ಸರ್ಕಾರ ರಚನೆ ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದ ರಿಕ್ಕಿ ರಾಧನ್ ವೆಟ್ರಿವೇಲ್ (Rickey Radhan Pandit Vettrivel) ಅವರನ್ನು ಮುಖ್ಯಮಂತ್ರಿಯ ರಾಜಕೀಯ ವಿಶೇಷ ಕರ್ತವ್ಯಾಧಿಕಾರಿಯಾಗಿ (OSD) ನೇಮಕ ಮಾಡಲಾಗಿದೆ.
ಸೋಮವಾರ ಹೊರಡಿಸಲಾದ ಅಧಿಕೃತ ಸರ್ಕಾರಿ ಆದೇಶದಲ್ಲಿ, “ತಿರು ರಿಕ್ಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರನ್ನು ಮುಖ್ಯಮಂತ್ರಿಯ ರಾಜಕೀಯ ವಿಶೇಷ ಕರ್ತವ್ಯಾಧಿಕಾರಿಯಾಗಿ (OSD) ಅವರು ಅಧಿಕಾರ ಸ್ವೀಕರಿಸುವ ದಿನಾಂಕದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ” ಎಂದು ತಿಳಿಸಲಾಗಿದೆ.
ಇದೇ ವೇಳೆ, ಅವರ ನೇಮಕಾತಿಯ ಸಂಪೂರ್ಣ ಷರತ್ತುಗಳು ಮತ್ತು ನಿಯಮಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ಮೇ 12ರಂದು ಕಳುಹಿಸಲಾದ ಟಿಪ್ಪಣಿಯ ಆಧಾರದ ಮೇಲೆ ಈ ನೇಮಕಾತಿ ಆದೇಶ ಹೊರಡಿಸಲಾಗಿದೆ.
ಅಂದಹಾಗೆ OSD ಹುದ್ದೆಯು ಸಾಮಾನ್ಯವಾಗಿ ರಾಜಕೀಯ ಸಮನ್ವಯ, ಸಂಪರ್ಕ ಕಾರ್ಯಗಳು ಮತ್ತು ಮುಖ್ಯಮಂತ್ರಿಗಳ ಕಚೇರಿಗೆ ನೇರವಾಗಿ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ.
ವರ್ಷದ ಹಿಂದೆಯೇ ವಿಜಯ್ ಗೆಲುವಿನ ಭವಿಷ್ಯ
ಇನ್ನು ರಿಕ್ಕಿ ರಾಧನ್ ಪಂಡಿತ್ ಅವರು ಒಂದು ವರ್ಷ ಹಿಂದೆಯೇ ವಿಜಯ್ ಅಧಿಕಾರಕ್ಕೆ ಬರುತ್ತಾರೆ ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗಿದೆ. ತಮಿಳುನಾಡು ರಾಜಕೀಯದಲ್ಲಿ ರಿಕ್ಕಿ ರಾಧನ್ ಪಂಡಿತ್ ಚಿರಪರಿಚತರಾಗಿದ್ದು, ಹಲವು ರಾಜಕಾರಣಿಗಳು ಇವರ ಬಳಿ ಜ್ಯೋತಿಷ್ಯ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.
ನಟ ವಿಜಯ್ ರ ಆಪ್ತ ಜ್ಯೋತಿಷಿ
ಅಂತೆಯೇ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರು ವಿಜಯ್ ಅವರಿಗೆ ಆಪ್ತರಾಗಿರುವ ಜ್ಯೋತಿಷಿಯಾಗಿ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಹಲವು ಪ್ರಮುಖ ರಾಜಕೀಯ ಹಾಗೂ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ವಿಜಯ್ ಜೊತೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ವಿಪಕ್ಷಗಳ ಟೀಕೆ
ಈ ನೇಮಕಾತಿ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದು, ಸರ್ಕಾರದ ಆಡಳಿತದಲ್ಲಿ ಜ್ಯೋತಿಷ್ಯಕ್ಕೆ ಮಹತ್ವ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನೊಂದೆಡೆ, ಟಿವಿಕೆ ಬೆಂಬಲಿಗರು ಇದು ಸಂಪೂರ್ಣವಾಗಿ ಮುಖ್ಯಮಂತ್ರಿಯವರ ವೈಯಕ್ತಿಕ ನಿರ್ಧಾರವಾಗಿದ್ದು, ಆ ವ್ಯಕ್ತಿಯ ಆಡಳಿತ ಅನುಭವ ಮತ್ತು ವಿಶ್ವಾಸದ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರದ ಕುರಿತು ಸರ್ಕಾರದಿಂದ ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ.
Advertisement