

ನವದೆಹಲಿ: ದೆಹಲಿಯಲ್ಲಿ ಸೋಮವಾರ ನಿಂತಿದ್ದ ಸ್ಲೀಪರ್ ಬಸ್ಸಿನೊಳಗೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಪ್ರಕರಣದಲ್ಲಿ ಆರೋಪಿಗಳಾದ ಚಾಲಕ ಮತ್ತು ಕಂಡಕ್ಟರ್‌ನನ್ನು ಬಂಧಿಸಲಾಗಿದೆ.
ಇಬ್ಬರು ಪುರುಷರು ಬಸ್ಸಿನೊಳಗೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ದೆಹಲಿಯ ರಾಣಿ ಬಾಗ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಪಿತಂಪುರದ ಕೊಳೆಗೇರಿ ಕ್ಲಸ್ಟರ್ ನಿವಾಸಿಯಾಗಿರುವ ಮಹಿಳೆ ಮಂಗೋಲ್‌ಪುರಿಯ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಎಲ್ಲ ಸಂಭಾವ್ಯ ಕೋನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 11 ರಂದು ರಾತ್ರಿ ಮಹಿಳೆ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಸರಸ್ವತಿ ವಿಹಾರ್‌ನ ಬಸ್ ನಿಲ್ದಾಣದಲ್ಲಿ ಸ್ಲೀಪರ್ ಬಸ್ ಬಂದಿತು ಎಂದು ಸುದ್ದಿಸಂಸ್ಥೆ IANS ವರದಿ ಮಾಡಿದೆ.
ಬಸ್ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಯ ಬಳಿ ಬಂದು ಮಹಿಳೆ ಸಮಯ ಎಷ್ಟಾಗಿದೆ ಎಂದು ಕೇಳಿದ್ದಾರೆ. ನಂತರ ಆಕೆಯನ್ನು ಬಲವಂತವಾಗಿ ವಾಹನದೊಳಗೆ ಹತ್ತಿಸಿಕೊಳ್ಳಲಾಗಿದೆ. ನಂತರ ಆರೋಪಿ ನಂಗ್ಲೋಯ್ ಕಡೆಗೆ ಬಸ್ ಓಡಿಸಿದ್ದಾನೆ. ಅಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ.
ಪೊಲೀಸರ ಪ್ರಕಾರ, ಮಹಿಳೆ ವಿವಾಹಿತಳಾಗಿದ್ದು, ಮೂವರು ಮಕ್ಕಳಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆಯ ನಂತರ, ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement