

ಆಗ್ರಾ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಟಿಫಾನಿ ಶನಿವಾರ ತಮ್ಮ ಪತಿ ಮೈಕೆಲ್ ಬೌಲೋಸ್ ಅವರೊಂದಿಗೆ ಐತಿಹಾಸಿಕ ತಾಜ್ ಮಹಲ್‌ಗೆ ಭೇಟಿ ನೀಡಿದ್ದು, ಸುಮಾರು ಒಂದು ಗಂಟೆ ಸ್ಮಾರಕವನ್ನು ವೀಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಟಿಫಾನಿ, ತನ್ನ ಪತಿ ಬೌಲೋಸ್ ಮತ್ತಿತರ ಕೆಲವು ಆಪ್ತರೊಂದಿಗೆ ತಾಜ್ ಮಹಲ್‌ಗೆ ಆಗಮಿಸಿದ್ದು, ಪ್ರೇಮ ಸೌಧದ ಸುತ್ತ ಸುತ್ತಾಡಿದ್ದು, ವಿವಿಧ ಸ್ಥಳಗಳಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಸ್ಮಾರಕದ ಇತಿಹಾಸ ಮತ್ತು ವಾಸ್ತುಶಿಲ್ಪದ ಬಗ್ಗೆ ತೀವ್ರ ಆಸಕ್ತಿ ತೋರಿಸಿದರು.
ಅಲ್ಲದೇ ನಿರ್ಮಾಣದ ಬಗ್ಗೆ ಹಲವು ಪ್ರಶ್ನೆಗಳು ಕೇಳಿದರು ಎಂದು ಪ್ರವಾಸಿ ಮಾರ್ಗದರ್ಶಿ ರಮೇಶ್ ದಿವಾನ್ ತಿಳಿಸಿದ್ದಾರೆ. ಭೇಟಿ ಮುಗಿದ ನಂತರ ಸ್ಮಾರಕದ ಸೌಂದರ್ಯವನ್ನು ಟಿಫಾನಿ ಟ್ರಂಪ್ ಹೊಗಳಿದ್ದಾರೆ ಎಂದು ಪ್ರವಾಸದ ಸಮಯದಲ್ಲಿ ಹಾಜರಿದ್ದ ಜನರು ತಿಳಿಸಿದ್ದಾರೆ.
ದೆಹಲಿಯಿಂದ ಚಾರ್ಟರ್ಡ್ ವಿಮಾನದ ಮೂಲಕ ಆಗ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಬಳಿಕ ತಾಜ್ ಮಹಲ್‌ಗೆ ಹೋಗುವ ಮೊದಲು ರಸ್ತೆಯ ಮೂಲಕ ಹೋಟೆಲ್‌ಗೆ ಪ್ರಯಾಣಿಸಿದರು. ಇದಕ್ಕಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದಿಂದ ತಾಜ್ ಮಹಲ್ ವರೆಗೂ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಮಾರ್ಗದಲ್ಲಿ ಮತ್ತು ಸ್ಮಾರಕದ ಸುತ್ತಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಂಪ್ ಪುತ್ರಿ ತಾಜ್ ಮಹಲ್ ಗೆ ಭೇಟಿ ನೀಡಿದ ನಂತರ, ತಮ್ಮ ಪತಿಯೊಂದಿಗೆ ಹೋಟೆಲ್‌ಗೆ ಮರಳಿದ್ದಾರೆ.
ದಂಪತಿ ಆಗ್ರಾದಲ್ಲಿ ಇಂದು ರಾತ್ರಿ ತಂಗಲಿದ್ದಾರೆ. ನಂತರ ತಮ್ಮ ಭಾರತ ಪ್ರವಾಸದ ಉಳಿದ ಭಾಗವನ್ನು ಮುಂದುವರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement