

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಏವಿಯೇಷನ್ ಟರ್ಬೈನ್ ಫ್ಯುಯೆಲ್ (ಎಟಿಎಫ್) ರಫ್ತು ಮೇಲಿನ ವಿಂಡ್‌ಫಾಲ್ (windfall tax) ತೆರಿಗೆಯನ್ನು ಕಡಿತಗೊಳಿಸಿದ್ದು, ಹೊಸ ದರಗಳು ನಾಳೆ ಅಂದರೆ ಜೂನ್ 1ರಿಂದ ಜಾರಿಗೆ ಬರಲಿವೆ.
ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ಅನ್ನು ಪ್ರತಿ ಲೀಟರ್‌ಗೆ 3ರೂ ಇಂದ 1.5 ರೂಕ್ಕೆ ಇಳಿಸಲಾಗಿದೆ. ಅಂದರೆ, ಈ ತೆರಿಗೆಯನ್ನು ಅರ್ಧಕ್ಕಿಂತಲೂ ಹೆಚ್ಚು ಕಡಿತಗೊಳಿಸಲಾಗಿದೆ.
ಡೀಸೆಲ್ ರಫ್ತಿನ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ರೂ16.5ರಿಂದ ರೂ13.5ಗೆ ಇಳಿಸಲಾಗಿದ್ದು, ಏವಿಯೇಷನ್ ಟರ್ಬೈನ್ ಫ್ಯುಯೆಲ್ (ಎಟಿಎಫ್) ಮೇಲಿನ ತೆರಿಗೆಯನ್ನು ರೂ16ರಿಂದ ರೂ9.5ಗೆ ಇಳಿಸಲಾಗಿದೆ.
ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ರಫ್ತಿನ ಮೇಲಿನ ರಸ್ತೆ ಮತ್ತು ಮೂಲಸೌಕರ್ಯ ಸೆಸ್ (Road and Infrastructure Cess) ಅನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಆದಾಗ್ಯೂ, ದೇಶೀಯ ಬಳಕೆಗೆ ಬಿಡುಗಡೆ ಮಾಡಲಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಸ್ತಿತ್ವದಲ್ಲಿರುವ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ತೆರಿಗೆ ದರಗಳಲ್ಲಿ ಏರಿಳಿತ
ಮಾರ್ಚ್ 26ರಂದು ಸರ್ಕಾರ ಡೀಸೆಲ್ ರಫ್ತಿನ ಮೇಲೆ ಪ್ರತಿ ಲೀಟರ್‌ಗೆ 21.50ರೂ ಹಾಗೂ ಎಟಿಎಫ್ ಮೇಲೆ 29.50 ರೂ ತೆರಿಗೆ ವಿಧಿಸಿತ್ತು. ಏಪ್ರಿಲ್ 11ರ ಪರಿಶೀಲನೆಯಲ್ಲಿ ಈ ತೆರಿಗೆಗಳನ್ನು ಕ್ರಮವಾಗಿ 55.50 ಮತ್ತು 42ರೂಗೆ ಹೆಚ್ಚಿಸಲಾಗಿತ್ತು. ನಂತರ ಏಪ್ರಿಲ್ 30ರಂದು ಅವುಗಳನ್ನು 23ರೂ ಮತ್ತು 33ರೂಗೆ ಇಳಿಸಲಾಯಿತು. ಮೇ 16ರಂದು ಮತ್ತೊಮ್ಮೆ ಕಡಿತಗೊಳಿಸಿ ಡೀಸೆಲ್‌ಗೆ 16.5ರೂ ಹಾಗೂ ಎಟಿಎಫ್‌ಗೆ 16ರೂ ನಿಗದಿಪಡಿಸಲಾಗಿತ್ತು. ಈಗ ಜೂನ್ 1ರಿಂದ ಜಾರಿಗೆ ಬರುವ ಹೊಸ ದರಗಳೊಂದಿಗೆ ಮತ್ತಷ್ಟು ಕಡಿತ ಮಾಡಲಾಗಿದೆ.
ವಿಂಡ್‌ಫಾಲ್ ತೆರಿಗೆ ವಿಧಿಸಿದ್ದೇಕೆ?
ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಬಳಿಕ Iran ಪ್ರತೀಕಾರಾತ್ಮಕ ಕ್ರಮಗಳನ್ನು ಕೈಗೊಂಡಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಈ ಸಂಘರ್ಷದ ಪರಿಣಾಮ ಜಾಗತಿಕ ಕಚ್ಚಾ ತೈಲ ಬೆಲೆಗಳು ಯುದ್ಧಕ್ಕೂ ಮುನ್ನ ಇದ್ದ ಪ್ರತಿ ಬ್ಯಾರೆಲ್‌ಗೆ ಸುಮಾರು 73 ಡಾಲರ್ ಮಟ್ಟದಿಂದ ಏರಿಕೆ ಕಂಡು, ಕಳೆದ ವಾರದಿಂದ 100 ಡಾಲರ್‌ಗಿಂತ ಮೇಲೆಯೇ ಉಳಿದಿವೆ. ಬೆಲೆ ಏರಿಕೆಯಿಂದ ರಫ್ತುದಾರರು ಅತಿಯಾದ ಲಾಭ ಪಡೆಯುವುದನ್ನು ತಡೆಯುವುದು ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಇಂಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು.
ದೇಶೀಯ ಮಾರುಕಟ್ಟೆಗೆ ಇಂಧನ ಲಭ್ಯತೆ ಖಚಿತಪಡಿಸುವ ಕ್ರಮ
ಹಣಕಾಸು ಸಚಿವಾಲಯದ ಪ್ರಕಾರ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ಹೆಚ್ಚಿನ ರಫ್ತನ್ನು ನಿರುತ್ಸಾಹಗೊಳಿಸಲು ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಲಾಗಿತ್ತು. ಇದೀಗ ಜಾಗತಿಕ ಪರಿಸ್ಥಿತಿಯಲ್ಲಿ ಕಂಡುಬಂದಿರುವ ಕೆಲವು ಬದಲಾವಣೆಗಳು ಹಾಗೂ ಮಾರುಕಟ್ಟೆ ಸ್ಥಿತಿಗತಿಗಳನ್ನು ಪರಿಗಣಿಸಿ ಸರ್ಕಾರ ತೆರಿಗೆ ದರಗಳನ್ನು ಮತ್ತೊಮ್ಮೆ ಕಡಿತಗೊಳಿಸಿದೆ.
Advertisement